ಜಾನುವಾರುಗಳಿಗೆ ಬಾಧಿಸುತ್ತಿರುವ ಚರ್ಮ ಗಂಟು ರೋಗ ನಿಯಂತ್ರಣ ಹಾಗೂ ಬಿತ್ತನೆ ಆಲೂಗಡ್ಡೆ ಬೆಲೆ ನಿಗಧಿ ಮಾಡಲು ರೈತಸಂಘ ಆಗ್ರಹ

ಕೋಲಾರ; ಸೆ.20: ಜಿಲ್ಲಾದ್ಯಂತ ಜಾನುವಾರುಗಳಿಗೆ ಬಾಧಿಸುತ್ತಿರುವ ಚರ್ಮ ಗಂಟು ರೋಗ ನಿಯಂತ್ರಣಕ್ಕೆ ಹಾಗೂ ಬಿತ್ತನೆ ಆಲೂಗಡ್ಡೆ ಬೆಲೆ ನಿಗಧಿ ಮಾಡಲು ವಿಶೇಷ ತಂಡ ರಚನೆ ಮಾಡಿ ಸಂಕಷ್ಟದಲ್ಲಿರುವ ರೈತರ ರಕ್ಷಣೆಗೆ ನಿಲ್ಲಬೇಕೆಂದು ಆಗ್ರಹಿಸಿ ರೈತಸಂಘದಿಂದ ಡಿಸಿ ಕಚೇರಿಯೆದುರು ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಸಲ್ಲಿಸಿ ಮಾತನಾಡಿದ ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಹೈನುಗಾರಿಕೆಯೇ ಜೀವಾಳವಾಗಿರುವ ಜಿಲ್ಲೆಯ ಲಕ್ಷಾಂತರ ಕುಟುಂಬಗಳ ಸ್ವಾಭಿಮಾನ ಬದುಕು ಕಲ್ಪಿಸಿರುವ ಹೈನೋದ್ಯಮಕ್ಕೆ ಮಾರಕವಾಗಿರುವ ರೋಗ ನಿಯಂತ್ರಣ ಮಾಡುವಲ್ಲಿ ಪಶು ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
3 ತಿಂಗಳಿಂದ ಗಡಿ ಭಾಗಗಳಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ ನಿಯಂತ್ರಣಕ್ಕೆ ಬಾರದೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿರುವ ಹಸುಗಳು ಸೂಕ್ತ ಚಿಕಿತ್ಸೆ ದೊರೆಯದೆ ಕಣ್ಣ ಮುಂದೆಯೇ ಸಾವನ್ನಪ್ಪುತ್ತಿದ್ದರೂ ಸಿಬ್ಬಂದಿ ನೆಪದಲ್ಲಿ ಗ್ರಾಮೀಣ ಪ್ರದೇಶಗಳತ್ತ ಸುಳಿಯದ ಪಶು ವೈದ್ಯರು ಕಚೇರಿಯಲ್ಲೇ ಕುಳಿತು ಕಾಲಹರಣ ಮಾಡುತ್ತಿದ್ದಾರೆಂದು ಆರೋಪಿಸಿದರು.
ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕರಪತ್ರದ ಮುಖಾಂತರ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಿ ರೋಗ ನಿಯಂತ್ರಣಕ್ಕೆ ಅವಶ್ಯಕತೆಯಿರುವ ಔಷಧಿಗಳನ್ನು ವಿತರಣೆ ಮಾಡಬೇಕಾದ ಪಶು ವೈದ್ಯರು ಸಮಯಕ್ಕೆ ಸಿಗದೆ ಚಿಕಿತ್ಸೆಗಾಗಿ ದುಬಾರಿ ವೆಚ್ಚ ನೀಡಿ ಖಾಸಗಿ ವೈದ್ಯರು ಇಲ್ಲವೇ ಚಿಕಿತ್ಸೆಯ ಗಂಧ ಗಾಳಿ ಗೊತ್ತಿಲ್ಲದ ಕೃತಕ ಗರ್ಭಧಾರಣೆ ಮಾಡುವವರೇ ವೈದ್ಯರಾಗಿ ಮಾರ್ಪಟ್ಟು ಹಸುಗಳ ಮಾರಣ ಹೋಮಕ್ಕೆ ಕಾರಣರಾಗಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದರು.
ಹೈನೋದ್ಯಮವನ್ನೇ ನಂಬಿರುವ ರೈತ ಬಡ ಕೂಲಿ ಕಾರ್ಮಿಕರು ಇದನ್ನೇ ಹಾಲಿನ ಬಟವಾಡೆಯನ್ನು ನಂಬಿ ಚೀಟಿ, ಸ್ತ್ರೀಶಕ್ತಿ ಸಂಘಗಳ ಸಾಲಗಳನ್ನು ಮಾಡಿ ಈಗ ದಿಕ್ಕು ತೋಚದೆ ಜಿಲ್ಲಾಡಳಿತದ ಸಮಸ್ಯೆ ಬಗೆಹರಿಸುವಂತೆ ಒತ್ತಾಯ ಮಾಡುತ್ತಿದ್ದಾರೆಂದು ಹೇಳಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಮುಂಗಾರು ಮಳೆ ಆರ್ಭಟ ಹಾಗೂ ನಿಯಂತ್ರಣಕ್ಕೆ ಬರದ ರೋಗಗಳಿಂದ ಟೊಮೇಟೊ, ಕ್ಯಾಪ್ಸಿಕಂ ಬೆಳೆಗಾರರ ಬದುಕು ಮುಂಗಾರು ನೀರಿನಲ್ಲಿ ಕೊಚ್ಚಿ ಹೋಗಿ ಮತ್ತೆ ಖಾಸಗಿ ಸಾಲ ಮಾಡಿ ಆಲೂಗಡ್ಡೆ ಕೃಷಿಯತ್ತ ಮುಖ ಮಾಡುತ್ತಿರುವ ಜಿಲ್ಲೆಯ ರೈತರಿಗೆ ದುಬಾರಿ ಬೆಲೆ ಹಾಗೂ ಗುಣಮಟ್ಟದ ಆಲೂಗಡ್ಡೆ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುವಲ್ಲಿ ಎಪಿಎಂಸಿ ಹಾಗೂ ತೋಟಗಾರಿಕೆ ಅಧಿಕಾರಿಗಳು ವಿಫಲವಾಗಿ ಖಾಸಗಿ ಮಂಡಿ ಮಾಲೀಕರು ನಿಗಧಿ ಮಾಡುವ ಬೆಲೆಗೆ ತಕ್ಕಂತೆ ಅಧಿಕಾರಿಗಳು ಕುಣಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಣಮಟ್ಟ, ದುಬಾರಿ ಬೆಲೆ, ಬಿಳಿ ಚೀಟಿ ದಂಧೆಗೆ ಕಡಿವಾಣ ಹಾಕುವಂತೆ ಪ್ರತಿವರ್ಷ ಅಧಿಕಾರಿಗಳಿಗೆ ದೂರು ನೀಡಿದರೆ ಸಮಸ್ಯೆ ಬಗೆಹರಿಸಬೇಕಾದ ಎಪಿಎಂಸಿ, ತೋಟಗಾರಿಕೆ ಅಧಿಕಾರಿಗಳಿಗೆ ಮಾಹಿತಿ ಇಲ್ಲವಂತೆ. ಒತ್ತಡ ಹೇರಿದರೆ ಖಾಸಗಿ ಮಂಡಿ ಮಾಲೀಕರ ಜೊತೆ ಶಾಮೀಲಾಗಿ ದೂರು ನೀಡಿರುವವರ ವಿರುದ್ಧ ಗೂಂಡಾಗಿರಿ ಮಾಡುತ್ತಾರೆಂದು ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ 2200 ರಿಂದ 4000ರೂ ವರೆಗೆ ಬೆಲೆಯಿದ್ದರೆ ಕೋಲಾರದಲ್ಲಿ 3000 ದಿಂದ 5000 ವರೆಗೆ ಮಾರಾಟ ನಡೆಯುತ್ತಿದೆ. ಇದನ್ನು ಪರಿಶೀಲಿಸಿ ಕರಪತ್ರದ ಮೂಲಕ ರೈತರಿಗೆ ಜಾಗೃತಿ ಮೂಡಿಸಬೇಕಾದ ಅಧಿಕಾರಿಗಳು ಮೌನವಾಗಿದ್ದಾರೆ.
ಹಾಗಾಗಿ ಮಾನ್ಯರು ಜಾನುವಾರುಗಳಿಗೆ ಬಾಧಿಸುತ್ತಿರುವ ಚರ್ಮ ಗಂಟು ರೋಗ ನಿಯಂತ್ರಣ ಹಾಗೂ ಬಿತ್ತನೆ ಆಲೂಗಡ್ಡೆಗೆ ಬೆಲೆ ನಿಗಧಿ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಿ ಸಂಕಷ್ಟದಲ್ಲಿರುವ ರೈತರು ರಕ್ಷಣೆಗೆ ನಿಲ್ಲಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ವೆಂಕಟರಾಜಾ ರವರು, ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ವಕ್ಕಲೇರಿ ಹನುಮಯ್ಯ, ಕದಿರಿನತ್ತ ಅಪ್ಪೋಜಿರಾವ್, ಹೆಬ್ಬಣಿ ಆನಂದರೆಡ್ಡಿ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಕುವ್ವಣ್ಣ, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ವೇಣು, ಕಿರಣ್, ಮುಳಬಾಗಿಲು ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಫಾರೂಖ್ ಪಾಷ, ಬಂಗಾರಿ ಮಂಜು, ರಾಜೇಶ್, ಸುನೀಲ್‍ಕುಮಾರ್, ಗುರುಮೂರ್ತಿ, ಭಾಸ್ಕರ್, ವೇಣು, ನವೀನ್ ಶ್ರೀಕಾಂತ್, ವರುಣ್, ತರುಣ್, ಜಗನ್, ವೇಣು, ರಾಧ, ಲಕ್ಷೀ, ಶೈಲ, ಮುಂತಾದವರಿದ್ದರು.