ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ವಯಸ್ಸಾದ ಜಾನುವಾರು ಹಾಗೂ ಸೀಮೆ ಹಸುವಿನ ಗಂಡು ಕರುಗಳ ಪಾಲನೆ ರೈತರಿಗೆ ಹೊರೆಯಾಗಿ ಪರಿಣಮಿಸುತ್ತದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಮಾಸ್ತೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸ್ವಯಂ ಚಾಲಿತ ಸಮೂಹ ಹಾಲು ಕರೆಯುವ ಯಂತ್ರಗಳ ಘಟಕ ಉದ್ಘಾಟಿಸಿ ಮಾತನಾಡಿ, ರೈತರು ಕ್ಷೀರೋತ್ಪಾದನೆಯಲ್ಲಿ ವೈಜ್ಞಾನಿಕ ಕ್ರಮ ಅನುಸರಿಸಬೇಕು ಎಂದು ಹೇಳಿದರು.
ಹಾಲು ಕರೆಯುವುದು ಸುಲಭದ ಮಾತಲ್ಲ. ಕೈಯಿಂದ ಹಾಲು ಕರೆಯುವುದರಿಂದ ಹಸುವಿನ ಕೆಚ್ಚಲು ಕೆಡಬಹುದು. ಸುಧಾರಿತ ಯಂತ್ರದಿಂದ ಹಾಲು ಕರೆಯುವುದರಿಂದ ಕೆಚ್ಚಲು ಆರೋಗ್ಯಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಜನತೆಗೆ ಗುಣಮಟ್ಟದ ಸ್ವಚ್ಛ ಹಾಲು ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದಲೆ ಹಾಲು ಒಕ್ಕೂಟ ರೂ.9 ಲಕ್ಷ ವೆಚ್ಚದಲ್ಲಿ ಸಾಮೂಹಿಕ ಹಾಲು ಕರೆಯುವ ಘಟಕವನ್ನು ಸ್ಥಾಪಿಸಿಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಮಾತನಾಡಿ, ತಾಲ್ಲೂಕಿನಲ್ಲಿ 160 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಪ್ರತಿ ದಿನ 55 ಸಾವಿರ ಲೀಟರ್ ಹಾಲು ಉತ್ಪಾದಿಸಲಾಗುತ್ತಿದೆ. ತಿಂಗಳಿಗೆ ರೂ.4.50 ಕೋಟಿ ಬಟವಾಡೆ ಮಾಡಲಾಗುತ್ತಿದೆ. ಫೆ.24 ರಿಂದ ಹಾಲಿನ ದರ ಲೀಟರಿಗೆ ರೂ.1 ಹೆಚ್ಚಿಸಲಾಗಿದೆ. ಜಾನುವಾರು ಮೇವು ದರವನ್ನು ಮೂಟೆಯೊಂದಕ್ಕೆ ರೂ.50 ಇಳಿಸಲಾಗುವುದು. ಪ್ರೋತ್ಸಾಹ ಧನ ವಿತರಿಸಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಆಧ್ಯಕ್ಷ ರವಿಕುಮಾರ್, ಪಿಡಿಒ ಮಂಜುನಾಥ್, ಸದಸ್ಯ ಅಮರಪ್ಪ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಆರ್.ಆಂಜಪ್ಪ, ಕಾರ್ಯದರ್ಶಿ ಆರ್.ಎಂ.ಗೊಪಾಲಕೃಷ್ಣ, ಕ್ಯಾಂಪ್ ಕಚೇರಿ ಉಪ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ, ಸಹಾಯಕ ವ್ಯವಸ್ಥಾಪಕ ಮೋಹನ್ ಬಾಬು, ವಿಸ್ತರಣಾಧಿಕಾರಿಗಳಾದ ಪಿ.ಕೆ.ನರಸಿಂಹರಾಜು, ಎನ್.ದೇವರಾಜ್, ಮುಖಂಡರಾದ ಶಶಿಕುಮಾರ್, ಅಶ್ವತ್ಥ್, ಪ್ರಕಾಶ್, ದೊರೆಸ್ವಾಮಿ, ಚಂದ್ರಣ್ಣ ಇದ್ದರು.