ರೈತ ಸ್ನೇಹಿಯಲ್ಲದ ವ್ಯವಸ್ಥೆ ಕೃಷಿಕ ಸಮುದಾಯದ ಪಾಲಿಗೆ ಶಾಪ : ದಿಂಬಾಲ ಅಶೋಕ್

ಶ್ರೀನಿವಾಸಪುರ: ರೈತ ಸ್ನೇಹಿಯಲ್ಲದ ವ್ಯವಸ್ಥೆ ಕೃಷಿಕ ಸಮುದಾಯದ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಎಂದು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಹೇಳಿದರು.
ಪಟ್ಟಣದ ಹೊರವಲಯದ ಪನಸಮಾಕನಹಳ್ಳಿ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾಂಭದಲ್ಲಿ ಅನುಗ್ರಹ ರೈತ ಉತ್ಪಾದಕರ ಕಂಪನಿ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ಕಂಪನಿ ವತಿಯಿಂದ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ ಹಾಗೂ ಕೀಟನಾಶಕ ಸರಬರಾಜು ಮಾಡಬೇಕು. ಉತ್ತಮ ಗುಣಮಟ್ಟದ ಬೆಳೆ ಬೆಳೆಯಲು ಅಗತ್ಯವಾದ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಬಿ.ಬ್ಯಾಟಪ್ಪ ಮಾತನಾಡಿ, ಇಸ್ರೇಲ್ ಹಾಗೂ ಚೀನಾ ವೈಜ್ಞಾನಿಕ ಕೃಷಿಕಗೆ ಮಾದರಿಯಾಗಿವೆ. ಅದೇ ಮಾದರಿಯಲ್ಲಿ ನಮ್ಮ ರೈತರಿಗೆ ಅಗತ್ಯವಾದ ತರಬೇತಿ ನೀಡಬೇಕು. ರೈತರ ಹಿತದೃಷ್ಟಿಯಿಂದ ಪ್ರಾರಂಭಿಸಲಾಗುವ ಸಂಸ್ಥೆಗಳು ದಾರಿ ತಪ್ಪಬಾರದು. ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಲಾಭದ ದೃಷ್ಟಿಯಿಂದ ಅಲ್ಲದೆ, ಸೇವಾ ಮನೋಭಾವದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ಅನುಗ್ರಹ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಹೂಹಳ್ಳಿ ಬಾಬು ಮಾತನಾಡಿ, ಕೃಷಿ ಇಲಾಖೆಯಿಂದ ಮಾಹಿತಿ ಪಡೆದು, ಪ್ರಾರಂಭದಲ್ಲಿ 320 ಶೇರುದಾರರನ್ನು ಹಿಡಿದು, ಅವರಿಂದ ಪಡೆದ ಶೇರು ಹಣದಿಂದ ಕಂಪನಿಯ ಪ್ರಾಥಮಿಕ ಅಗತ್ಯಗಳನ್ನು ಪೂರೈಸಲಾಗಿದೆ. ಒಂದು ಸಾವಿರಕ್ಕೂ ಹೆಚ್ಚು ಶೇರುದಾರರನ್ನು ಕಂಪನಿ ಹೊಂದಬೇಕಾಗಿದೆ. ಗ್ರಾಮ ಮಟ್ಟದಲ್ಲಿ 20 ಸದಸ್ಯರನ್ನು ಒಳಗೊಂಡ ಸಮಿತಿ ಮಾಡಲಾಗುವುದು ಎಂದು ಹೇಳಿದರು.
ಕಂಪನಿ ಸಿಇಒ ಕೆ.ವಿ.ರೆಡ್ಡಪ್ಪ, ಜಿಲ್ಲಾ ಸಂಚಾಲಕ ಮುನಿರಾಜು, ನಿರ್ದೇಶಕರಾದ ನಂಬಿಹಳ್ಳಿ ಶ್ರೀರಾಮರೆಡ್ಡಿ, ಮುನಿವೆಂಕಟೇಗೌಡ, ಕೋಚಿಮುಲ್ ಮಾಜಿ ಅಧ್ಯಕ್ಷ ಮುನಿವೆಂಕಟಪ್ಪ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾಗರಾಜ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟರೆಡ್ಡಿ, ಮುಖಂಡರಾದ ರಾಮಚಂದ್ರಪ್ಪ, ಚಂದ್ರೇಗೌಡ, ಬಂಗವಾದಿ ನಾಗರಾಜ್, ಶ್ರೀನಿವಾಸರೆಡ್ಡಿ, ಪಾಳ್ಯ ಗೋಪಾಲರೆಡ್ಡಿ ಇದ್ದರು.