ರೈತ ನೋಂದಣಿ , ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ ಜಾರಿಗೆ ಕ್ರಮ ಕೋಲಾರ ಡಿಸಿಸಿ ಬ್ಯಾಂಕಿನಿಂದ ರೈತಸ್ನೇಹಿ ಕಾರ್ಯ – ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ರೈತರ ಆಧಾಯ ದ್ವಿಗುಣಗೊಳಿಸುವ ರಾಜ್ಯ ಸರ್ಕಾರದ ಉದ್ದೇಶಿತ ‘ ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ ‘ ( ಎಫ್ ಆರ್ ಯು ಐ ಟಿ ಎಸ್ ) ಜಾರಿಯಿಂದಾಗಿ ರೈತರು ಸಾಲ ಪಡೆಯಲು ವಾರ್ಟ್‌ಗೇಜ್‌ಗಾಗಿ , ಇಸಿ , ನಿರಾಪೇಕ್ಷಣಾ ಪತ್ರಕ್ಕಾಗಿ ಅಲೆಯುವುದು ತಪ್ಪಲಿದ್ದು , ಬ್ಯಾಂಕಿನಲ್ಲೇ ಎಲ್ಲಾ ಸೌಲಭ್ಯಗಳು ಸಿಗಲಿದೆ ಎಂದು ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು .
ಶನಿವಾರ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೊಸೈಟಿಗಳ ಗಣಕೀಕರಣದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ , ಈ ನೋಂದಣಿ ವ್ಯವಸ್ಥೆಯನ್ನು ರೈತಸ್ನೇಹಿಯಾಗಿ ಶೀಘ್ರ ಅನುಷ್ಠಾನಗೊಳಿಸುವುದಾಗಿ ತಿಳಿಸಿದರು .
ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ ‘ ಪೋರ್ಟಲ್‌ನಲ್ಲಿ ರೈತರು ನೋಂದಾಯಿಸಿದಲ್ಲಿ ಸರ್ಕಾರದ ಭೂಮಿ ಸಾಫ್ಟ್‌ವೇರ್‌ ಲಿಂಕ್ ಹೊಂದಿರುವ ಈ ವ್ಯವಸ್ಥೆಯಲ್ಲಿ ರೈತರ ವೈಯಕ್ತಿಕ ಮಾಹಿತಿ , ಜಮೀನಿನ ಮಾಹಿತಿ , ದಾಖಲೆ , ಬೆಳೆ ಮಾಹಿತಿ ಮತ್ತಿತರ ಎಲ್ಲಾ ದಾಖಲೆಗಳು ಲಭ್ಯವಾಗಲಿವೆ ಎಂದು ತಿಳಿಸಿದರು . ಡಿಸಿಸಿ ಬ್ಯಾಂಕ್ ಈ ವ್ಯವಸ್ಥೆಯನ್ನು ರಾಜ್ಯದಲ್ಲೇ ಮೊದಲ ಬಾರಿಗೆ ತನ್ನಲ್ಲಿ ಅಳವಡಿಸಿಕೊಳ್ಳಲು ನಿಧರಿಸಿದ್ದು , ಈ ವ್ಯವಸ್ಥೆಯಿಂದಾಗಿ ರೈತರು ಸಾಲಕ್ಕಾಗಿ ವಾರ್ಟ್‌ಗೇಜ್‌ , ಇಸಿ ಪಡೆಯಲು ಉಪನೋಂದಾಣಾಧಿಕಾರಿಗಳ ಕಚೇರಿಗೆ ಅಲೆದಾಟ ತಪಲಿದೆ , ಬ್ಯಾಂಕಿನಲ್ಲೇ ಈ ಎಲ್ಲಾ ದಾಖಲೆಗಳು ಉಚಿತವಾಗಿ ರೈತರಿಗೆ ಸಿಗಲಿದ್ದು , ರೈತರು ಸಾಲ ಪಡೆಯುವುದು ಸುಲಭವಾಗಲಿದೆ ಮತ್ತು ಸುಳ್ಳು ದಾಖಲೆ ನೀಡಿ ಸಾಲ ಪಡೆಯುವ ಪ್ರಯತ್ನಗಳು ತಪ್ಪಲಿದ್ದು , ಪಾರದರ್ಶಕ ವ್ಯವಸ್ಥೆ ಜಾರಿಯಾಗಲಿದೆ ಎಂದರು .
ರಾಜ್ಯದ ರೈತರ ಆದಾಯ ದ್ವಿಗುಣಗೊಳಿಸುವ ಸರ್ಕಾರದ ಈ ಕ್ರಮದಡಿ ರೈತರು ‘ ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ ‘ ( ಎಫ್‌ಆರ್‌ಯುಐಟಿಎಸ್ ) ಕರ್ನಾಟಕ ಪೋರ್ಟಲ್ ನೋಂದಣಿ ಮತ್ತು ಲಾಗಿನ್ ಮಾಡಿಕೊಳ್ಳಬಹುದಾಗಿದ್ದು , ಇದರಿಂದ ಕೃಷಿ ಚಟುವಟಿಕೆಗಳಿಗೆ ಸುಲಭವಾಗಿ ಸಾಲ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು . ರೈತರ ಅಲೆದಾಟಕ್ಕೆ ವ್ಯವಸ್ಥೆಯಿಂದ ಬ್ರೇಕ್ ರಾಜ್ಯ ಸರ್ಕಾರವು ರೈತರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ . ರೈತರು ಕೃಷಿ ಬೆಳೆಗಳು , ತೋಟಗಾರಿಕೆ ಬೆಳೆಗಳು , ರೇಷ್ಮೆ ಕೃಷಿ , ಡೈರಿ , ಕೋಳಿ , ಮೀನುಗಾರಿಕೆ ಮುಂತಾದ ವಿವಿಧ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಅಗತ್ಯವಾದ ಸಾಲ ಸೌಲಭ್ಯ ಪಡೆಯಲು ಅಗತ್ಯವಾದ ಕಂದಾಯ ದಾಖಲೆಗಳಿಗಾಗಿ ಅಲೆದಾಟ ತಪ್ಪಿಸುವುದೇ ಇದರ ಉದ್ದೇಶವಾಗಿದೆ ಎಂದು ತಿಳಿಸಿದರು . ಸರ್ಕಾರದ ಯಾವುದೇ ಯೋಜನೆಯಡಿ ಸವಲತ್ತುಗಳನ್ನು ಪಡೆಯಲು ರೈತರು ದಾಖಲೆಗಳಿಗೆ ಅಲೆದಾಡುವುದು ಹಾಗೂ ದಾಖಲೆಗಳು ಸಿಗುವುದು ವಿಳಂಬವಾಗುವುದರಿಂದ ಸಕಾಲಕ್ಕೆ ಸಾಲ ಸೌಲಭ್ಯ ಪಡೆಯಲಾಗದೇ ಬೆಳೆ ಇಡಲು ಸಂಕಷ್ಟಕ್ಕೆ ಗುರಿಯಾಗುತ್ತಿರುವುದನ್ನು ತಪ್ಪಿಸಲು ಈ ಸೌಲಭ್ಯವನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿ , ಈ ಸಂಬಂಧ ರೈತರಿಗೆ ಅರಿವು ಮೂಡಿಸಿ ಎಂದು ಸಿಬ್ಬಂದಿಗೆ ಸೂಚಿಸಿದರು .
ಪೋರ್ಟಲ್ ನೋಂದಣಿ ೨೦೨೧ ಮತ್ತು ರೈತರಿಗೆ ಲಾಗಿನ್ ಪಕಿಯೆಯನ್ನು ಈಗಾಗಲೇ ವೆಬ್‌ಸೈಟ್‌ನಲ್ಲಿ ಪಾರಂಭಿಸಲಾಗಿದೆ . ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆಯಲ್ಲಿ ನೊಂದಣಿಯಾಗುವುದರಿಂದ ರೈತರು ದಾಖಲೆಗಳಿಗಾಗಿ ಖರ್ಚು ಮಾಡುವ ಹಣವೂ ಉಳಿಯಲಿದೆ . ಬ್ಯಾಂಕಿನಲ್ಲೇ ಈ ಎಲ್ಲಾ ದಾಖಲೆ ಸಿಗಲಿದ್ದು , ಅರ್ಜಿ ಹಾಕಿದ ತಕ್ಷಣ ಸಾಲ ಸೌಲಭ್ಯ ಒದಗಿಸಲು ಸಹಕಾರಿಯಾಗಲಿದೆ ಎಂದರು .
ಬ್ಯಾಂಕಿನ ಸಿಬ್ಬಂದಿ ಶಾಖಾವಾರು ವ್ಯಾಪ್ತಿಯಲ್ಲಿ ರೈತರಿಗೆ ಈ ಸೌಲಭ್ಯದ ಕುರಿತು ಜಾಗೃತಿ ಮೂಡಿ ನೋಂದಾಯಿಸಲು ಪ್ರೇರಣೆ ನೀಡುವಂತೆ ಅಧಿಕಾರಿಗಳು ಸಿಬ್ಬಂದಿಗೆ ತಾಕೀತು ಮಾಡಿದರು . ಇದೇ ಸಂದರ್ಭದಲ್ಲಿ ಬ್ಯಾಂಕ್‌ ಹಾಗೂ ಸೊಸೈಟಿಗಳ ಗಣಕೀಕರಣ ಅಳವಡಿಕೆಯನ್ನು ಮತ್ತಷ್ಟು ಉನ್ನತಿಕರಿಸುವ ಕುರಿತು ಟಿಸಿಎಸ್‌ ಸಂಸ್ಥೆ ಇಂಜಿನೀಯರ್‌ ಜೋಷಿ ಅವರಿಗೆ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲು ಸೂಚಿಸಿದರು . ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕ ಕೆ.ಪಿ.ದಯಾನಂದ್ , ಎಜಿಎಂಗಳಾದ ಶಿವಕುಮಾರ್ , ಬೈರೇಗೌಡ , ಖಲೀಮುಲ್ಲಾ , ಹುಸೇನ್ ದೊಡ್ಡಮನಿ , ನಾಗೇಶ್ , ಶುಭಾ , ಯಲ್ಲಪ್ಪರೆಡ್ಡಿ , ಅಂಬರೀಷ್ , ಬೇಬಿ ಶಾಮಿಲಿ , ಮಂಗಳಗೌರಮ್ಮ , ಆಮದ್‌ಖಾನ್ , ನವೀನ್ , ಮಂಗಳ , ಸೌಮ್ಯ , ಮಮತಾ , ಶೃತಿ , ಆಶ್ವಿನಿ , ಶೈಲಜ ಮತ್ತಿತರರಿದರು .