

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದ ಕೃಷಿಕ ನಾರಾಯಣಸ್ವಾಮಿ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕು. ಕುಟುಂಬದ ಸದಸ್ಯರ ಮೇಲೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದೌರ್ಜನ್ಯ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರಾದ ರಾಮಾಂಜಮ್ಮ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲ್ದೂರು ಸರ್ವೆ ನಂಬರ್ 42 ಪೈಕಿ 3 ಎಕರೆ ಜಮೀನು ನಾರಾಯಣಸ್ವಾಮಿ ತಂದೆಗೆ ದರಖಾಸ್ತು ಮೂಲಕ ಮಂಜೂರಾಗಿತ್ತು. ತಂದೆ ಮರಣಾನಂತರ ನಾರಾಯಣಸ್ವಾಮಿ ಹೆಸರಿಗೆ ಪವತಿ ಖಾತೆಯಾಗಿದ್ದು, ಅವರೇ ಅನುಭವದಲ್ಲಿದ್ದಾರೆ. ಸದರಿ ಜಮೀನು ಹರ್ಷಫ್ ಎಂಬುವವರಿಗೆ ನೋಂದಣಿಯಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಹೇಳಿದರು.
ಆದರೆ ಹರ್ಷಫ್ ಅವರಿಂದ ಜಮೀನಿಗೆ ಸಂಬಂಧಿಸಿದಂತೆ ಪವರ್ ಆಫ್ ಅಟಾರ್ನಿ ಪಡೆದುಕೊಂಡಿರುವುದಾಗಿ ಹೇಳಿಕೊಳ್ಳುತ್ತಿರುವ ನಿವೃತ್ತ ಅರಣ್ಯಾಧಿಕಾರಿಯೊಬ್ಬರು, ಉದ್ದೇಶ ಪೂರ್ವಕವಾಗಿ ನಾರಾಯಣಸ್ವಾಮಿ ಕುಟುಂಬದ ಸದಸ್ಯರು ಜಮೀನು ಪ್ರವೇಶ ಮಾಡದಂತೆ ಅಡ್ಡಿಪಡಿಸುತ್ತಿದ್ದಾರೆ. ದೌರ್ಜನ್ಯ ನಡೆಸಿ ಮಾವಿನ ಕಾಯಿ ಕಟಾವು ಮಾಡಿದ್ದಾರೆ. ದೌರ್ಜನ್ಯದಿಂದ ನೊಂದ ನಾರಾಯಣಸ್ವಾಮಿ ಮಗ ಪರಮೇಶ್ ಈಚೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ಹೇಳಿದರು.
ದೌರ್ಜನ್ಯ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ, ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ. ಇಷ್ಟಾದರೂ ಸಮಸ್ಯೆ ಬಗೆಹರಿದಿಲ್ಲ. ಪೊಲೀಸ್ ಇನ್ಸ್‍ಪೆಕ್ಟರ್ ದೂರು ದಾಖಲಿಸಿಕೊಂಡು, ದೌರ್ಜನ್ಯ ನಡೆಸುತ್ತಿರುವ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ದಲಿತ ಮುಖಂಡರಾದ ಈರಪ್ಪ, ಎನ್.ತಿಮ್ಮಯ್ಯ, ಜಿ.ಎನ್.ಮುನಿಯಪ್ಪ, ನಾರಾಯಣಸ್ವಾಮಿ, ಕಲಾವತಮ್ಮ, ಪರಮೇಶ್ ಇದ್ದರು.