ಕೋಲಾರ:- ಕೋಲಾರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ಯುವಕರು ಸೇನೆಗೆ ಆಯ್ಕೆಯಾಗುವ ಮೂಲಕ ದೇಶ ಸೇವೆಗೆ ತೆರಳಬೇಕು ಎಂದು
ಕೋಲಾರ ಕ್ರೀಡಾ ಸಂಘದ ಅಧ್ಯಕ್ಷರೂ ಹಾಗೂ ದಿಶಾ ಸಮಿತಿ ಸದಸ್ಯರಾದ ಸಾಮಾ ಅನಿಲ್ ಕುಮಾರ್ ಕರೆ ನೀಡಿದರು.
ಕೋಲಾರ ಕ್ರೀಡಾಸಂಘದಿಂದ ತರಬೇತಿ ಪಡೆದು ಸೈನ್ಯಕ್ಕೆ ಆಯ್ಕೆಯಾದ ಅಗ್ನಿವೀರರಿಗೆ ಆತ್ಮೀಯವಾಗಿ ಸನ್ಮಾನಿಸಿ ಮಾತಾಡಿದ ಅವರು, ಬೇರೆ ಜಿಲ್ಲೆಗಳಂತೆ ಇಂದು ಕೋಲಾರ ಜಿಲ್ಲೆಯಿಂದ ಹೆಚ್ಚು ಯುವಕರು ಸೈನ್ಯಕ್ಕೆ ಸೇರುತ್ತಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿ. ಈಗ ಆಯ್ಕೆಯಾದ ಅಗ್ನಿವೀರರು ಜಿಲ್ಲೆಯ ಯುವ ಸಮುದಾಯಕ್ಕೆ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು.
ನಮ್ಮ ಸಂಘದಿಂದ ಯುವಕರಿಗೆ ಸದಾ ಉಚಿತ ತರಬೇತಿ ಹಮ್ಮಿಕೊಳ್ಳಲಾಗುತ್ತದೆ. ಇವತ್ತಿನ ಈ ಸಾಧನೆಯ ಸಂಪೂರ್ಣ ಶ್ರೇಯಸ್ಸು ನಮ್ಮ ಹೆಮ್ಮೆಯ ತರಬೇತುದಾರರಾದ ಕೃಷ್ಣಮೂರ್ತಿ ಮತ್ತು ಸುರೇಶಬಾಬುರವರಿಗೆ ಸಲ್ಲಬೇಕು. ಹಾಗೆಯೇ ಈ ಸಂಘವನ್ನು ಕಟ್ಟಿ ಬೆಳೆಸಿ ಸದಾ ಸಂಘದ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಲ್ಲುವ ಪುರುಷೋತ್ತಮ್ ರವರಿಗೆ ನಾವೆಲ್ಲರೂ ಚಿರಋಣಿಗಳಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಆರು ತಿಂಗಳ ತರಬೇತಿ ಮುಗಿಸಿ ಸೇನೆಯ ವಿವಿಧ ವಿಭಾಗಗಳಿಗೆ ಆಯ್ಕೆಯಾಗಿ ಇದೇ ಮೊದಲ ಬಾರಿಗೆ ದೇಶಸೇವೆಗೆ ಹೊರಟ ಅಗ್ನಿವೀರರಾದ ಚರಣ್, ಅಜಯ್, ಪ್ರಮೋದ್ ಮತ್ತು ನಿತ್ಯಾನಂದ ರವರನ್ನು ಕೋಲಾರ ಜಾರಿ ವಿಭಾಗದ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ದಯಾನಂದ್ ಸನ್ಮಾನಿಸಿ ಶುಭಹಾರೈಸಿದರು.
ದಿಶಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ ಮೈಸೂರಿನಲ್ಲಿ ನಡೆದ ಸೈನಿಕ ರ್ಯಾಲಿಯಲ್ಲಿ ಭಾಗವಹಿಸಿ ಆಯ್ಕೆಯಾದ ಯುವಕರಿಗೆ ಸನ್ಮಾನಿಸಿ ಶುಭಹಾರೈಸಿದರು.
ಮಾಜಿ ಸೈನಿಕರು, ಜಿ.ಪಂ. ಸಹಾಯಕ ಲೆಕ್ಕಾಧಿಕಾರಿಗಳು ಮತ್ತು ತರಬೇತುದಾರರಾದ ಕೃಷ್ನಮೂರ್ತಿ, ಸೇನೆಯಲ್ಲಿ ಯುವಕರು ಯಾವ ಯಾವ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಬಹುದು. ಅಲ್ಲಿ ಸಿಗುವ ತರಬೇತಿಗಳನ್ನು ಹೇಗೆ ಪಡೆಯಬೇಕು, ಕಂಪ್ಯೂಟರ್ ಕಲಿಕೆಯಿಂದ ಆಗಬಹುದಾದ ಪ್ರಯೋಜನಗಳ ಕುರಿತು ಭಾವಿ ಸೈನಿಕರಿಗೆ ವಿವರಿಸಿದರು.
ಇದೇ ಸಂದರ್ಭದಲ್ಲಿ ಸೈನಿಕ ತರಬೇತಿಯಲ್ಲಿ ಭಾಗವಹಿಸಿ ಹಿಂದಿರುಗಿದ ಚರಣ್, ಅಜಯ್, ಪ್ರಮೋದ್ ಮತ್ತು ನಿತ್ಯಾನಂದರವರು ತರಬೇತಿಯನ್ನು ಹೇಗೆ ಎದುರಿಸಬೇಕು, ಅನುಸರಿಸಬೇಕಾದ ಶಿಸ್ತು ಮತ್ತಿತರ ವಿಷಯಗಳ ಬಗ್ಗೆ ಹೊಸದಾಗಿ ಆಯ್ಕಯಾದ ಯುವಕರಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರಾದ ಪುರುಷೋತ್ತಮ, ತರಬೇತುದಾರ ಸುರೇಶ್ ಬಾಬು (ಕಮಾಂಡೋ) ಖೋ-ಖೋ ತರಬೇತುದಾರ ರಾಧಣ್ಣ, ಬಾರ್ ವೇಣು, ವಾಕಿಂಗ್ ಕ್ಲಬ್ನ ಶಂಕರ್, ವೆಂಕಟರಮಣಪ್ಪ ಮತ್ತಿತರರು ಭಾಗವಹಿಸಿ ಶುಭ ಕೋರಿದರು. ಬಾರ್ ವೇಣುರವರು ಎಲ್ಲಾ ಅಗ್ನಿವೀರರಿಗೆ ಹೋಟೆಲ್ ಸಾಯಿಧಾಮದಲ್ಲಿ ಉಪಹಾರದ ವ್ಯವಸ್ಥೆ ಮಾಡಿದ್ದರು.