ಸಾಲ ವಿತರಣೆಯಲ್ಲಿ ತಾರತಮ್ಯವೆಂದು ಸುಳ್ಳು ಆರೋಪ ಸರಿಯಲ್ಲ ವಾಸ್ತವಾಂಶ ಅರಿತು ಮಾತನಾಡಿ-ಬ್ಯಾಲಹಳ್ಳಿ ಗೋವಿಂದಗೌಡ ಸಲಹೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ ರೈತರು,ಹೆಣ್ಣು ಮಕ್ಕಳಿಗೆ ಒಂದೇ ಸಮಾನವಾಗಿ ಸಾಲ ವಿತರಿಸಲಾಗಿದೆ ಸಾಲ ವಿತರಣೆಯಲ್ಲಿ ತಾರತಮ್ಯದ ಆರೋಪ ಮಾಡುತ್ತಿರುವ ಕೆಲವರು ಕೇಂದ್ರ ಕಚೇರಿಗೆ ಬಂದು ಪರಿಶೀಲಿಸಿ ವಾಸ್ತವಾಂಶ ಅರಿತು ನಂತರ ಮಾತನಾಡಲಿ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಲಹೆ ನೀಡಿದರು.
ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಸೋಮವಾರ ಸ್ತ್ರೀಶಕ್ತಿಯ 11 ಸಂಘಗಳಿಗೆ ಸುಮಾರು 58 ಲಕ್ಷ ಸಾಲ ನೀಡಿ ಮಾತನಾಡಿದ ಅವರು ನಾನು ಡಿಸಿಸಿ ಬ್ಯಾಂಕಿನ ಎರಡೂ ಜಿಲ್ಲೆಗೆ ಅಧ್ಯಕ್ಷನಾಗಿದ್ದೇನೆ, ದಿವಾಳಿಯಾಗಿ ರೈತರು,ಮಹಿಳೆಯರು ವಿವಿಧ ಸಾಲ ಯೋಜನೆಗಳಿಂದ ವಂಚಿತರಾಗಿದ್ದ ಸಂದರ್ಭದಲ್ಲಿ ಕಷ್ಟಪಟ್ಟು ಬ್ಯಾಂಕ್ ಬೆಳೆಸಿದ್ದೇವೆ ಎಂದರು.
ಒಂದು ಸಂಸ್ಥೆ ವಿರುದ್ದ ಸುಳ್ಳು ಆರೋಪ ಮಾಡಿ ಕೆಟ್ಟ ಹೆಸರು ತರುವ ಪ್ರಯತ್ನ ಬೇಡ, ಬ್ಯಾಂಕಿಗೆ ಬಂದು ವಾಸ್ತವಾಂಶ ಅರಿತು ಮಾತನಾಡಿ, ಬ್ಯಾಂಕ್ ವಿರುದ್ದ ರಾಜಕೀಯ ಪ್ರೇರಿತವಾಗಿ ಆರೋಪ ಮಾಡಿ ಸಂಸ್ಥೆ ಹಾಳಾದರೆ ಅದು ಎರಡೂ ಜಿಲ್ಲೆಯ ರೈತರು,ಮಹಿಳೆಯರಿಗೆ ಮಾಡಿದ ದ್ರೋಹವಾಗುತ್ತದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕಿನ ಬೆಳವಣಿಗೆ ಸಹಿಸದ ಕೆಲವರು ಬ್ಯಾಂಕ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು ಬ್ಯಾಂಕ್ ಬೆಳವಣಿಗೆಗೆ ತಮ್ಮ ಕೊಡುಗೆ ಎನು ಎಂಬುದನ್ನು ಅವರು ಸ್ವಯಂ ವಿಮರ್ಶೆ ಮಾಡಿಕೊಳ್ಳಲಿ ಎಂದು ಕಿವಿಮಾತು ಹೇಳಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಜಿಲ್ಲೆಗಳಿಗೆ ಸಮನಾಗಿ 1200 ಕೋಟಿ ಸಾಲ ವಿತರಿಸಿದದ್ದೇವೆ ಎರಡು ಜಿಲ್ಲೆಗೆ ರೈತರ ಮತ್ತು ಮಹಿಳೆಯರಿಗೆ ಯಾವುದೇ ತಾರತಮ್ಯ ಎಸಗಿಲ್ಲ ಆದರೂ ಕೆಲವು ಬ್ಯಾಂಕ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಬ್ಯಾಂಕ್ ನಲ್ಲಿ ತಪ್ಪುಗಳು ಇದ್ದರೆ ನೇರವಾಗಿ ಬಂದು ಹೇಳಿದರೆ ಸರಿಪಡಿಸಿ ಕೊಳ್ಳುತ್ತೇವೆ ಎಂದರು.
ವ್ಯವಸ್ಥೆಯಲ್ಲಿ ದಿನನಿತ್ಯದ ಜೀವನಕ್ಕಾಗಿ ಕೂಲಿ ಮಾಡುವ ಜನರಿಗೆ ದ್ರೋಹ ಬಗೆದರೆ ನಾವು ಸಮಾಜದಲ್ಲಿ ಬದಕಲು ಸಾಧ್ಯವಿಲ್ಲ ಸಮಾಜವನ್ನು ಸರಿದಾರಿಯಲ್ಲಿ ತೆಗೆದುಕೊಂಡು ಹೋಗಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಬ್ಯಾಂಕ್ ಏಳಿಗೆಗೆಕಾರಣವಾದ ತಾಯಂದಿರೇ ಬ್ಯಾಂಕ್ ವಿರುದ್ದ ಅಪಪ್ರಚಾರ ಮಾಡುವರಿಗೆ ಸರಿಯಾದ ಪಾಠ ಕಲಿಸಬೇಕಾಗಿದೆ, ಮುಂದಿನ ದಿನಗಳಲ್ಲೂ ಇದೇ ರೀತಿಯಲ್ಲಿ ಬ್ಯಾಂಕಿನ ಪರವಾಗಿ ನಿಲ್ಲುವುದರ ಜತೆಗೆ ಬ್ಯಾಂಕ್ ಬೆಳವಣಿಗೆಗೆ ಕೈಜೋಡಿಸಬೇಕಾಗಿದೆ ಎಂದು ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಅನಿಲ್ ಕುಮಾರ್ ಮಾತನಾಡಿ ಡಿಸಿಸಿ ಬ್ಯಾಂಕ್ ವ್ಯವಸ್ಥೆಯನ್ನು ಅಭದ್ರಗೊಳಿಸಲು ಕೆಲವು ರಾಜಕೀಯ ವ್ಯಕ್ತಿಗಳು ಹುನ್ನಾರ ನಡೆಸುತ್ತಿದ್ದಾರೆ ಹೆಣ್ಣುಮಕ್ಕಳು ನಮ್ಮ ಜೊತೆಯಲ್ಲಿ ನಿಲ್ಲುವ ಮೂಲಕ ಬ್ಯಾಂಕ್ ಬಗ್ಗೆ ಅಪಪ್ರಚಾರ ಮಾಡುವ ವ್ಯಕ್ತಿಗಳಿಗೆ ಸರಿಯಾದ ಬುದ್ಧಿ ಕಲಿಸಬೇಕು ಎಂದರು.
ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಹೆಣ್ಣಿಗೆ ಆರ್ಥಿಕವಾಗಿ ಶಕ್ತಿ ತುಂಬಲಾಗುತ್ತಿದೆ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಸುಮಾರು ಆರು ಲಕ್ಷ ಹೆಣ್ಣುಮಕ್ಕಳಿಗೆ ಸಾಲಸೌಲಭ್ಯ ನೀಡಿದ್ದು ಇದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಕೋಲಾರ ಚಿಕ್ಕಬಳ್ಳಾಪುರ ರೈತರ ಸುಮಾರು 320 ಕೋಟಿ ಬೆಳೆ ಸಾಲ ಮನ್ನಾ ಮಾಡಲಾಗಿದೆ ಡಿಸಿಸಿ ಬ್ಯಾಂಕ್ ಕಡೆಯಿಂದ ಗುಡಿ ಕೈಗಾರಿಕೆ ಸ್ಥಾಪಿಸಲು 10 ಸಂಘಗಳಿಗೆ 10 ಲಕ್ಷದಂತೆ ಸುಮಾರು ಒಂದು ಕೋಟಿ ಸಾಲ ನೀಡಲಿದ್ದು 50 ಲಕ್ಷಕ್ಕೆ ಯಾವುದೇ ಬಡ್ಡಿ ಇಲ್ಲ, ಇನ್ನುಳಿದ 50 ಲಕ್ಷಕ್ಕೆ ಶೇ.3 ರಷ್ಟು ಬಡ್ಡಿದರ ನೀಡಲಾಗುತ್ತಿದೆ ಇದನ್ನು ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬನ್ನಿ ಎಂದು ಕೋರಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಡಿಸಿಸಿ ಬ್ಯಾಂಕ್ ಹೊರತುಪಡಿಸಿ ಬೇರೆ ಬ್ಯಾಂಕುಗಳಲ್ಲಿ ಸಾಲ ಪಡೆಯಲು ಜಮೀನು ಸಂಬಂಧಿಸಿದ ದಾಖಲೆಗಳ ಭದ್ರತೆ ನೀಡಬೇಕು, ಭದ್ರತೆ ಇಲ್ಲದೇ ನಮ್ಮ ಬ್ಯಾಂಕಿನಲ್ಲಿ ಸಾಲ ನೀಡುತ್ತಿದ್ದೇವೆ ಎಂದರು.
ಹೆಣ್ಣು ಮಕ್ಕಳು ಸ್ವಯಂ ಪ್ರೇರಿತವಾಗಿ ಉದ್ಯಮ ಸ್ಥಾಪಿಸಲು ಸ್ವಯಂ ಉದ್ಯೋಗ ಸೃಷ್ಟಿಸಲು ಬ್ಯಾಂಕಿನ ಸೌಲಭ್ಯವನ್ನು ಪಡೆಯಬಹುದಾಗಿದೆ ಹೆಣ್ಣು ಮಕ್ಕಳು ಸಾಲ ಮರುಪಾವತಿ ಮಾಡುತ್ತಾರೆ ಎಂಬ ನಂಬಿಕೆಯಿಂದ ಸಾಲ ನೀಡುತ್ತಿದ್ದು, ನಂಬಿಕೆ ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಸಹಕಾರ ಸಂಸ್ಥೆಗಳು ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಸ್ವಾವಲಂಬಿ ಬದುಕಿಗೆ ನೆರವಾಗುತ್ತಿವೆ ಎಂದರು.
ಸಣ್ಣ ವ್ಯಾಪಾರ ಮಾಡಲು,ಗ್ರಾಮೀಣ ಪ್ರದೇಶದಲ್ಲಿ ಹಸು ಸಾಕಲು ಅವಶ್ಯಕತೆಗೆ ಅನುಗುಣವಾಗಿ ಉದ್ಯಮವನ್ನು ಸ್ಥಾಪಿಸಲು ಸಾಲ ನೀಡಲಾಗುತ್ತದೆ, ಅದೇ ರೀತಿ ನೀವು ಡಿಸಿಸಿ ಬ್ಯಾಂಕಿನಲ್ಲೇ ತಮ್ಮ ಉಳಿತಾಯದ ಹಣವಿಟ್ಟು ನೆರವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಕೋಲಾರ ಶಾಖೆ ವ್ಯವಸ್ಥಾಪಕ ಅಂಬರೀಶ್, ಬ್ಯಾಂಕಿನ ಅಮೀನಾ,ಗೋಪಾಲಕೃಷ್ಣ ಮತ್ತಿತರರಿದ್ದರು.