ಅಧಿಕಾರಿಗಳು ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು :ಶಾಸಕ ಕೆ.ಆರ್.ರಮೇಶ್ ಕುಮಾರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಅಧಿಕಾರಿಗಳು ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಕೃಷಿ ಇಲಾಖೆಯಿಂದ ಕೃಷಿ ಅಭಿಯಾನ ಕಾರ್ಯಕ್ರಮದಡಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ರೈತರಿಗೆ ತೊಗರಿ ಕಿರು ಚೀಲ ವಿತರಿಸಿ ಮಾತನಾಡಿzರು.
ಬೇರೆ ಬೇರೆ ಕಾರಣಗಳಿಂದ ಇಂದು ಕೃಷಿ ನಷ್ಟದ ಕಸುಬಾಗಿ ಪರಿಣಮಿಸಿದೆ. ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನಗಳಿಗೆ ಬೆಲೆ ಕುಸಿತ ಸಾಮಾನ್ಯವಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಸಾಲ ಸೋಲ ಮಾಡಿ ಬೆಳೆ ಇಟ್ಟಿರುವ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ರೈತ ಸಂಬಂಧ ಇಲಾಖೆಗಳ ಅಧಿಕಾರಿಗಳು ಕೃಷಿ ಹಾಗೂ ಪಶುಪಾಲನೆ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಹೇಳಿದರು.
ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಧನಂಜಯ್ ಮಾತನಾಡಿ, ರೈತರು ಕೃಷಿ ಇಲಾಖೆಯೊಂದಿಗೆ ಸಂಪರ್ಕ ಬೆಳೆಸಬೇಕು. ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಮಾಹಿತಿ ಪಡೆದು, ಬಳಸಿಕೊಳ್ಳಬೇಕು. ಕೃಷಿಕಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೂ ಸಮೀಪದ ಕೃಷಿ ಕೇಂದ್ರದ ಅಧಿಕಾರಿಗಳಿಂದ ಪರಿಹಾರ ಪಡೆದುಕೊಳ್ಳಬೇಕು ಎಂದು ಹೇಳಿದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ರೇಷ್ಮೆ ಇಲಾಖೆಯ ಸಹಾಯಕ ನಿದೇಶಕ ನಾಗರಾಜ್, ಕೃಷಿ ಅಧಿಕಾರಿ ಈಶ್ವರ್, ತಾಲ್ಲೂಕು ಕೃಷಿ ಪರಿಕರ ಸಂಘದ ಅಧ್ಯಕ್ಷ ಕೋಟೇಶ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶ್ರೀರಾಮರೆಡ್ಡಿ, ಮುಖಂಡರಾದ ಕೆ.ಕೆ.ಮಂಜುನಾಥರೆಡ್ಡಿ, ಬೈರಾರೆಡ್ಡಿ, ರಮೇಶ್, ಅಸ್ಲಂ ಇದ್ದರು.