

ಕೋಲಾರ:- ಸೊಸೈಟಿ ಸಿಬ್ಬಂದಿ ರೈತರ ಮನೆ ಬಾಗಿಲಿಗೆ ಹೋಗಿ ದಾಖಲೆ ಸಂಗ್ರಹಿಸಿ, ಪ್ರತಿ ಕುಟುಂಬಕ್ಕೂ ನೆರವಾಗುವ ಮೂಲಕ ಸಾಲ ವಿತರಣೆಯನ್ನು ಡಿಸಿಸಿ ಬ್ಯಾಂಕಿನಿಂದ ಆಂದೋಲನವಾಗಿ ನಡೆಸೋಣ, ಸಂಕಷ್ಟದಲ್ಲಿರುವ ರೈತರಿಗೆ ನೆರವಾಗೋಣ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು ಮಾಡಿದರು.
ತಾಲ್ಲೂಕಿನ ಸೀಪೂರು ಗ್ರಾಮದಲ್ಲಿ ಬ್ಯಾಂಕಿಂಗ್ ಸೌಲಭ್ಯಗಳ ಕುರಿತಂತೆ ರೈತರೊಂದಿಗೆ ಮುಖಾಮುಖಿ ಚರ್ಚೆಯಲ್ಲಿ ಭಾಗವಹಿಸಿ, ಸಾಂಕೇತಿಕವಾಗಿ 19 ಲಕ್ಷ ರೂ ಬೆಳೆ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಮಳೆ ಬಂದಿದೆ, ಕೆಸಿ ವ್ಯಾಲಿ ನೀರಿನಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ, ನಿಂತಿದ್ದ ಕೊಳವೆ ಬಾವಿಗಳು ಮರಪೂರ್ಣವಾಗಿವೆ, ಇಂತಹ ಸಂದರ್ಭದಲ್ಲಿ ರೈತರು ಬೆಳೆ ಇಡುವ ತವಕದಲ್ಲಿದ್ದಾರೆ ಆದರೆ ಅವರನ್ನು ಆರ್ಥಿಕ ಸಂಕಷ್ಟ ಕಾಡುತ್ತಿದೆ, ಇಂತಹ ಸಂದರ್ಭದಲ್ಲೇ ಬ್ಯಾಂಕ್ ನೆರವಾಗುವ ಅಗತ್ಯವಿದೆ ಎಂದರು.
ಅರಹಳ್ಳಿ ಸೊಸೈಟಿ 48 ಹಳ್ಳಿಗಳ ವ್ಯಾಪ್ತಿಯನ್ನು ಒಳಗೊಂಡಿದೆ, ಆದರೆ ಈ ಭಾಗದಲ್ಲಿ ಸೊಸೈಟಿಯಿಂದ ಕೇವಲ 400 ಮಂದಿ ರೈತರಿಗೆ ಮಾತ್ರವೇ ಸಾಲ ಸಿಕ್ಕಿದೆ ಎನ್ನುವುದು ವಿಷಾದದ ಸಂಗತಿ, ಸಾಲ ನೀಡಲು ರೈತರನ್ನು ಗುರುತಿಸುವಲ್ಲಿ ಸೊಸೈಟಿ ಸಿಬ್ಬಂದಿ,ಆಡಳಿತ ಮಂಡಳಿ ವಿಫಲವಾಗಿದೆ ಎಂದ ಅವರು, ಜನರ ನೋವು ಅರ್ಥ ಮಾಡಿಕೊಳ್ಳಿ, ಬಡ್ಡಿರಹಿತ ಸಾಲವನ್ನು ಪ್ರತಿ ರೈತರಿಗೂ ಸಿಗುವಂತೆ ಮಾಡಿ ಎಂದು ಸಲಹೆ ನೀಡಿದರು.
ಸಾಲ ವಿತರಣೆಯಲ್ಲಿ ರಾಜಕಾರಣ ಬೆರಸಬೇಡಿ, ಯಾವುದೇ ರೈತನನ್ನು ಸಾಲಕ್ಕಾಗಿ ಅರ್ಜಿ ಪಡೆಯುವಾಗ ನಿಮ್ಮ ಪಕ್ಷ ಯಾವುದು, ಜಾತಿ ಯಾವುದು ಎಂದು ಪ್ರಶ್ನಿಸಬೇಡಿ, ರೈತನಿಗೆ ಸಾಲದ ಅಗತ್ಯತೆ ಕುರಿತು ಮಾತ್ರವೇ ಪರಿಶೀಲನೆ ನಡೆಸಿ, ಬೆಳೆ ಇಡಲು ಸಿದ್ದವಾಗಿರುವ ಪ್ರತಿ ರೈತನಿಗೂ ಸಾಲ ನೀಡುವುದು ಡಿಸಿಸಿ ಬ್ಯಾಂಕಿನ ಆಶಯವಾಗಿದೆ, ಶೇ.50 ರೈತರಿಗಾದರೂ ಶೂನ್ಯ ಬಡ್ಡಿ ಸಾಲ ಸೌಲಭ್ಯ ಒದಗಿಸಬೇಕು ಎಂದರು.
ರೈತರನ್ನು ಗುರುತಿಸುವಾಗ ನಿಜವಾದ ರೈತರನ್ನು ಗುರುತಿಸಿ, ರೈತರು, ಸ್ವಾಭಿಮಾನಿಗಳು, ಕೊಟ್ಟ ಸಾಲವನ್ನು ಸಮರ್ಪಕವಾಗಿ ಮರುಪಾವತಿ ಮಾಡುತ್ತಾರೆ, ಯಾವುದೇ ಅನುಮಾನ ಬೇಕಾಗಿಲ್ಲ, ಮಧ್ಯವರ್ತಿಗಳ ಹಾವಳಿ ಇಲ್ಲ, ಯಾರಾದರೂ ಸಾಲ ನೀಡಲು ಲಂಚ ಕೇಳಿದರೆ ಕೂಡಲೇ ನನ್ನ ಗಮನಕ್ಕೆ ತನ್ನಿ, ಸಾಲದ ಹಣ ನಿಮ್ಮ ಬ್ಯಾಂಕ್ ಖಾತೆಗೆ ಹೋಗುತ್ತದೆ, ಯಾರಿಗೂ ನಯಾಪೈಸೆ ನೀಡಬೇಕಾಗಿಲ್ಲ ಎಂದು ರೈತರಿಗೆ ತಿಳಿಸಿದರು.
ಕೆಲವು ರೈತರು ತಮ್ಮ ಅಳಲು ತೋಡಿಕೊಂಡು ಈವರೆಗೂ ಯಾರೂ ನಿಮಗೆ ಸಾಲ ನೀಡುತ್ತೇವೆ ಬನ್ನಿ ಎಂದು ಕರೆಯಲಿಲ್ಲ, ನೀವು ಶೂನ್ಯ ಬಡ್ಡಿಸಾಲ ನೀಡುವ ಭರವಸೆ ನೀಡುತ್ತಿದ್ದೀರಿ, ಮಳೆಯಾಗಿದ್ದು,ಬೆಳೆ ಇಡಲು ಪರದಾಡುತ್ತಿದ್ದೇವೆ, ಅತಿ ಶೀಘ್ರ ಸಾಲ ಸಿಕ್ಕರೆ ಬೆಳೆ ಬೆಳೆದು ಸಾಲ ತೀರಿಸಿ, ಬದುಕು ಕಟ್ಟಿಕೊಳ್ಳುತ್ತೇವೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಸೊಸೈಟಿ ಆಡಳಿತಮಂಡಳಿ, ಸಿಬ್ಬಂದಿಗೆ ರೈತರ ಬಗ್ಗೆ ಆಲಸ್ಯ ಬೇಡ, ಸಹಕಾರಿ ಸಂಸ್ಥೆ ಇರುವುದೇ ರೈತರಿಗೆ ನೆರವಾಗಲು, ಪಕ್ಷ,ಜಾತಿ ಬೇಧವಿಲ್ಲ ಎಂದ ಅವರು, ರೈತರು, ಡಿಸಿಸಿ ಬ್ಯಾಂಕಿನಲ್ಲೇ ವಹಿವಾಟು ನಡೆಸುವ ಮೂಲಕ ಸಾಲ ಸೌಲಭ್ಯ ಪಡೆಯಿರಿ, ಮೀಟರ್ ಬಡ್ಡಿ ದಂಧೆಯ ಶೋಷಣೆಗೆ ಒಳಗಾಗದಿರಿ ಎಂದು ಕಿವಿಮಾತು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ಡಿಸಿಸಿ ಬ್ಯಾಂಕ್ ಉಳಿಸಿ ಬೆಳೆಸುತ್ತಿರುವುದೇ ರೈತರು ಮತ್ತು ಮಹಿಳೆಯರು, ಅವರ ಸ್ವಾವಲಂಬಿ ಬದುಕಿಗೆ ನೆರವಾಗುವ ಸಂಕಲ್ಪದೊದಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಕೆಲಸ ಮಾಡುತ್ತಿದೆ, ದೇಶದಲ್ಲೇ ಅತಿ ಹೆಚ್ಚು ರೈತರು, ಮಹಿಳೆಯರಿಗೆ ಸಾಲ ನೀಡಿರುವುದು ಇತಿಹಾಸ ಎಂದ ಅವರು, ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಲು ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಯಾವ ಉದ್ದೇಶಕ್ಕಾಗಿ ಸಾಲ ಪಡೆಯುತ್ತೀರೋ ಅದೇ ಉದ್ದೇಶಕ್ಕೆ ಸದ್ಬಳಕೆ ಮಾಡಿಕೊಳ್ಳಿ ಇಲ್ಲವಾದಲ್ಲಿ ಸಂಕಷ್ಟಕ್ಕೆ ಸಿಲುಕುತ್ತೀರಿ, ಬೆಳೆ ಸಾಲವನ್ನು ಪಡೆದು ಬೆಳೆ ಇಡಲು ಖರ್ಚು ಮಾಡಿದರೆ ಸಾಲ ಮರುಪಾವತಿಕಷ್ಟವಾಗಲಾರದು ಎಂದ ಅವರು, ರೈತರು ಸಹಕಾರ ಸಂಘಗಳ ಸದಸ್ಯತ್ವ ಪಡೆಯಿರಿ, ಶೂನ್ಯ ಬಡ್ಡಿ ಸಾಲ ಪಡೆದು ಆರ್ಥಿಕವಾಗಿ ಸಬಲರಾಗಿ, ಡಿಸಿಸಿ ಬ್ಯಾಂಕಿನಲ್ಲೇ ನಿಮ್ಮ ಉಳಿತಾಯದ ಹಣವನ್ನೂ ಇಡಿ ಅದರಿಂದ ಮತ್ತಷ್ಟು ರೈತರಿಗೆ ನೆರವು ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಅರಹಳ್ಳಿ ಸೊಸೈಟಿ ಅಧ್ಯಕ್ಷ ಭಗವಂತಪ್ಪ, ವೆಂಕಟೇಶಪ್ಪ, ಕಾರ್ಯದರ್ಶಿ ಹರೀಶ್, ನಿರ್ದೇಶಕರಾದ ಮುನಿಸ್ವಾಮಿರೆಡ್ಡಿ, ನಾರಾಯಣಸ್ವಾಮಿ, ಪುಸ್ತಿ ನಾರಾಯಣಸ್ವಾಮಿ, ಕೃಷ್ಣಪ್ಪ, ವೆಂಕಟೇಶ್ ಮುಂತಾದವರು ಇದ್ದರು.

