ಕೋಲಾರ:- ನಗರದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಶ್ರೀವಾಸವಿ ಮಹಿಳಾ ಮಂಡಳಿಯು ಭಾನುವಾರ ವಾಸವಿ ಮಹಿಳಾ ಮೇಳವನ್ನು ಆಯೋಜಿಸಿದ್ದು, ನಗರ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಮಹಿಳೆಯರು ಪಾಲ್ಗೊಂಡಿದ್ದು, ಪೂಜಾ ಸಾಮಗ್ರಿಗಳ ವ್ಯಾಪಾರ ವಹಿವಾಟು ಜೋರಾಗಿ ನಡೆದಿತ್ತು.
ನಗರದಲ್ಲಿ ಆಶಾಢ ಮಾಸದಲ್ಲಿ ವಾಸವಿ ಮಹಿಳಾ ಮಂಡಳಿಯು ಪ್ರತಿ ವರ್ಷ ಮೇಳವನ್ನು ಆಯೋಜಿಸುವುದು ವಾಡಿಕೆ. ಹಲವಾರು ವರ್ಷಗಳಿಂದ ಈ ಮೇಳ ನಡೆಸುತ್ತಿದ್ದು, ಈ ವರ್ಷವೂ ಉತ್ಸಾಹದಿಂದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಮೇಳವನ್ನು ಆಯೋಜಿಸಿ ನೂರಾರು ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿತ್ತು.
ಈಗ ಆಷಾಢ ಮಾಸ ಮುಗಿದ ನಂತರ ಬರುವ ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳನ್ನು ಆಚರಿಸುವುದರಿಂದ ಹಬ್ಬಕ್ಕೆ ಅಗತ್ಯವಿರುವ ಪೂಜಾ ಮತ್ತು ಅಲಂಕಾರಿಕ, ತಿಂಡಿ ತಿನಿಸುಗಳನ್ನು ಒಂದೇ ಸೂರಿನಡಿ ಮಾರಾಟ ಮಾಡಲು ಅವಕಾಶ ಕಲ್ಪಿಸುವುದು ಈ ಮೇಳದ ಉದ್ದೇಶವಾಗಿದೆ.
ಆರ್ಯ ವೈಶ್ಯ ಮಹಿಳೆಯರು ತಾವೇ ತಯಾರಿಸಿದ ಉತ್ಪನ್ನಗಳನ್ನು ಮೇಳದಲ್ಲಿ ಮಳಿಗೆಗಳನ್ನಿಟ್ಟುಕೊಂಡು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. 2024ರ ಮಹಿಳಾ ಮೇಳದಲ್ಲಿ ಸುಮಾರು ನೂರು ವೈವಿಧ್ಯಮಯವಾದ ಮಳಿಗೆಗಳನ್ನು ಇಡಲಾಗಿತ್ತು. ಸಾರ್ವಜನಿಕರು ಮೇಳದಲ್ಲಿ ಪಾಲ್ಗೊಂಡು ತಮಗಿಷ್ಟವಾದ ಪೂಜಾ ಸಾಮಗ್ರಿಗಳನ್ನು ಖರೀದಿಸಿ, ತಿಂಡಿ ತಿನಿಸುಗಳನ್ನು ಸವಿದರು. ವ್ಯಾಪಾರಿಗಳಿಗೆಗ ವಾಸವಿ ಮಹಿಳಾ ಮಂಡಳಿಯಿಂದಲೇ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ವಾಸವಿ ಮಹಿಳಾ ಮಂಡಳಿಯು ಪ್ರತಿ ವರ್ಷ ಏರ್ಪಡಿಸುವ ಮೇಳದಿಂದಾಗಿ ಉತ್ಪನ್ನಗಳು ಒಂದೇ ದಿನದಲ್ಲಿ ಹೆಚ್ಚು ಮಾರಾಟ ಮಾಡಲು ಅವಕಾಶ ಸಿಕ್ಕಂತಾಗುತ್ತದೆ, ಈ ಬಾರಿಯೂ ಹೆಚ್ಚು ವ್ಯಾಪಾರವಾಗುವ ನಿರೀಕ್ಷೆ ಮಾಡಲಾಗಿದೆಯೆಂದು ಮೇಳದಲ್ಲಿ ಮಳಿಗೆ ಇಟ್ಟಿರುವ ವಿನುತಾ ವಿವರಿಸಿದರು.
ಮೇಳದ ಉಸ್ತುವಾರಿಯನ್ನು ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಎ.ಜಿ.ಜಯಶ್ರೀ, ಉಪಾಧ್ಯಕ್ಷೆ ವಾಣಿ ಬಾಲಾಜಿ, ಕಾರ್ಯದರ್ಶಿ ಶೈಲಾ ಬದರಿನಾಥ್, ಖಜಾಂಚಿ ಪಿ.ವಿ.ಸತ್ಯಲಕ್ಷ್ಮಿ, ಸಹ ಕಾರ್ಯದರ್ಶಿ ನರ್ಮದಾ ಹೊತ್ತುಕೊಂಡಿದ್ದರು.