ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಕಣ್ಣುಗಳ ಮಹತ್ವ ಅರಿತು ಅವುಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್ ಹೇಳಿದರು.
ನಗರದ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ರೋಟರಿ ಸೆಂಟ್ರಲ್, ಬಿಇಒ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ವಾಸನ್ ಐ ಕೇರ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ಕಣ್ಣಿನತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ವಯೋ ಸಹಜವಾಗಿ ಕಣ್ಣುಗಳ ಸಮಸ್ಯೆ ಉದ್ಭವವಾಗಲಿದ್ದು, ಇವುಗಳನ್ನು ನಿಯಮಿತ ತಪಾಸಣೆ ಚಿಕಿತ್ಸೆ ಮತ್ತು ಆರೈಕೆಯಿಂದ ಬಗೆಹರಿಸಿಕೊಳ್ಳಲು ಸಾಧ್ಯವಿದ್ದು, ನಲವತ್ತು ವರ್ಷ ದಾಟಿದ ಪ್ರತಿಯೊಬ್ಬರೂ ಕನಿಷ್ಠ ವರ್ಷಕ್ಕೆ ಎರಡು ಬಾರಿಯಾದರೂ ಕಣ್ಣುಗಳ ತಪಾಸಣೆಗೊಳಪಡಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆವಹಿಸಿದ್ದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಮಧುಮೇಹ ಮತ್ತು ಇನ್ನಿತರ ಆರೋಗ್ಯ ಸಮಸ್ಯೆ ಇದ್ದವರು ಕಣ್ಣುಗಳ ಆರೈಕೆಗೆ ವಿಶೇಷ ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ಕಣ್ಣುಗಳನ್ನು ಕಳೆದುಕೊಳ್ಳುವ ಅಪಾಯ ಇದ್ದೇ ಇರುತ್ತದೆ, ಈ ಹಿನ್ನೆಲೆಯಲ್ಲಿ ಭಾರತ ಸೇವಾದಳ, ರೋಟರಿ ಸೆಂಟ್ರಲ್ ಇನ್ನಿತರ ಸಂಸ್ಥೆಗಳ ನೆರವಿನಿಂದ ಶಿಕ್ಷಕರು ಮತ್ತು ಸಾರ್ವಜನಿಕರಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿದೆಯೆಂದು ವಿವರಿಸಿದರು.
ರೋಟರಿ ಸೆಂಟ್ರಲ್ ಅಧ್ಯಕ್ಷ ಹಾಗೂ ಸೇವಾದಳ ಕಾರ್ಯದರ್ಶಿ ಎಸ್.ಸುಧಾಕರ್ ಮಾತನಾಡಿ, ಸೇವಾ ಕಾರ್ಯದಲ್ಲಿ ಸದಾ ಮಂಚೂಣಿಯಲ್ಲಿ ನಿಲ್ಲುವ ಸೇವಾದಳ ಹಾಗೂ ರೋಟರಿ ಸಂಸ್ಥೆಗಳು ಸಮುದಾಯದ ಸೇವಾ ಭಾಗವಾಗಿ ಕಣ್ಣು ತಪಾಸಣಾ ಶಿಬಿರ ಹಮ್ಮಿಕೊಂಡಿದೆ. ಇದಕ್ಕೆ ಕೈಜೋಡಿಸಿದ ವಾಸನ್ ಐ ಕೇರ್ ಸಂಸ್ಥೆ ಸಿಬ್ಬಂದಿ ಸೇವೆ ಶ್ಲಾಘನೀಯ ಎಂದರು.
ಶಿಬಿರದಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಕೋಲಾರ ಜಿಲ್ಲಾ ಡ್ರೈವಿಂಗ್ ಶಾಲಾ ಮಾಲೀಕರ ಸಂಘದ ಅಧ್ಯಕ್ಷ ಆರ್.ಗೋಪಾಲ್, ಹಿರಿಯ ಕ್ರೀಡಾಪಟು ಅಂಚೆ ಅಶ್ವತ್ಥ್, ಮುಖಂಡರಾದ ರಾಮಚಂದ್ರ ಇತರರು ಉಪಸ್ಥಿತರಿದ್ದರು.
ಬಿಇಒ ಕಚೇರಿ ಮೇಲ್ವಿಚಾರಕ ಗಿರೀಶ್ ಮತ್ತು ಸಿಬ್ಬಂದಿ, ಹಳೇ ಮಾಧ್ಯಮಿಕ ಶಾಲೆ, ಪ್ರಾಥಮಿಕ ಶಾಲೆ ಹಾಗೂ ಉರ್ದುಶಾಲೆ ಶಿಕ್ಷಕಿಯರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಕಣ್ಣು ತಪಾಸಣೆ ಮಾಡಿಕೊಂಡು ಶಿಬಿರವನ್ನು ಯಶಸ್ವಿಗೊಳಿಸಿದರು.
ವಾಸನ್ ಐ ಕೇರ್ನ ಕೋಲಾರ ಶಾಖೆ ವ್ಯವಸ್ಥಾಪಕ ಇಳಂಗೋವನ್, ಸಿಬ್ಬಂದಿಯಾದ ಮೋಬಲ್, ಗೌತಮ್ ಹಾಗೂ ಭಾಸ್ಕರ್ ಹಾಜರಿದ್ದರು.