ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಬೆಡ್, ಆಕ್ಸಿಜನ್, ವೆಂಟಿಲೇಟರ್, ಲಸಿಕೆ ಸೌಲಭ್ಯದ ತೊಂದರೆ ನಿವಾರಿಸಿ, ದಲ್ಲಾಳಿಗಳ ಹಾವಳಿ ತಪ್ಪಿಸಿ – ರೈತಸಂಘ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ: ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಬೆಡ್, ಆಕ್ಸಿಜನ್, ವೆಂಟಿಲೇಟರ್, ಲಸಿಕೆ ಸೌಲಭ್ಯ ಸಿಗದೆ ತೊಂದರೆಯಾಗಿರುವುದನ್ನು ನಿವಾರಿಸಿ, ದಲ್ಲಾಳಿಗಳ ಹಾವಳಿ ತಪ್ಪಿಸಬೇಕು. ಜೊತೆಗೆ ರಾಜಕಾರಣಿಗಳ ಸಹಾಯ ಪಡೆದು ಹೊರ ಜಿಲ್ಲೆಗಳಿಂದ ಜಿಲ್ಲಾಸ್ಪತ್ರೆಗೆ ಬರುತ್ತಿರುವವರಿಗೆ ಕಡಿವಾಣ ಹಾಕುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಅರವಿಂದ ಲಿಂಬಾವಳಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಂತ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿದಿನ ಕೊರೊನಾ ಸೋಂಕಿತರು ರೋಗದಿಂದ ಮುಕ್ತರಾದ ಹಾಗೂ ಆಸ್ಪತ್ರೆಗೆ ದಾಖಲಾದ ವಿವರಗಳನ್ನು ಪ್ರತಿದಿನ ಆಯಾ ತಾಲೂಕು ಎಲ್ಲಾ ಆಸ್ಪತ್ರೆಗಳ ಮುಂದೆ ನಾಮಫಲಕದಲ್ಲಿ ಅಳವಡಿಸಬೇಕು.
ಮತ್ತು ದಲ್ಲಾಳಿಗಳಿಂದ ಸೋಂಕಿತರನ್ನು ರಕ್ಷಣೆ ಮಾಡಿ ಬೆಡ್, ಆಕ್ಸಿಜನ್ ಸೇರಿದಂತೆ ಮತ್ತಿತರ ದಂಧೆಗಳಿಗೆ ಕಡಿವಾಣ ಹಾಕಲು ಕಡ್ಡಾಯವಾಗಿ ಆಸ್ಪತ್ರೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಸೋಂಕಿತರಿಗೆ ಅವಶ್ಯಕತೆಯಿರುವ ಮೂಲಭೂತ ಸೌಕರ್ಯ ಒದಗಿಸಲು ವಿಶೇಷವಾದ ವೈದ್ಯಕೀಯ ತಂಡ ರಚನೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾದ್ಯಂತ ಸುಮಾರು 2,800 ಕೈಗಾರಿಕೆಗಳಿದ್ದು, ಅದರಲ್ಲಿ ಪ್ರಮುಖವಾಗಿ ನರಸಾಪುರದ ವಿಸ್ಟ್ರಾನ್, ಹೋಂಡಾ ಸೇರಿದಂತೆ ಸಾವಿರಾರು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಬಹುತೇಕ ಕಾರ್ಮಿಕರು ಗ್ರಾಮೀಣ ಪ್ರದೇಶಗಳಿಂದ ಪ್ರತಿನಿತ್ಯ ಕಾರ್ಖಾನೆಗಳಿಗೆ ಹೋಗುತ್ತಿರುವುದರಿಂದ ಕಾರ್ಖಾನೆಗಳಲ್ಲಿ ಸೋಂಕು ಹೆಚ್ಚಾಗಿ ಆಡಳಿತ ಮಂಡಳಿ ಯಾವುದೇ ಮುಂಜಾಗ್ರತಾ ಕ್ರಮವಹಿಸದ ಕಾರಣ ಗ್ರಾಮೀಣ ಪ್ರದೇಶಗಳ ಅಮಾಯಕರ ಪ್ರಾಣವನ್ನು ರೋಗ ಪ್ರವೇಶಿಸಿ ಹಿಂಡುತ್ತಿದೆ.
ಇದರಿಂದ ಬಹುತೇಕ ಗ್ರಾಮಗಳು ಕೊರೊನಾ ವೈರಸ್ ಗ್ರಾಮಗಳಾಗಿ ಮಾರ್ಪಟ್ಟು ಹೈನೋದ್ಯಮ ಕೃಷಿ ಕ್ಷೇತ್ರಕ್ಕೆ ಹೊಡೆತ ಬೀಳುತ್ತಿದೆ. ಅದನ್ನು ಸರಿದೂಗಿಸಲು ಕಡ್ಡಾಯವಾಗಿ ಕಾರ್ಖಾನೆಗಳನ್ನು ಲಾಕ್‍ಡೌನ್ ಮಾಡುವ ಮುಖಾಂತರ ಸೋಂಕಿಗೆ ಕಡಿವಾಣ ಹಾಕಬೇಕು ಜೊತೆಗೆ ಸಿಎಸ್‍ಆರ್ ಯೋಜನೆಯಲ್ಲಿ ಅಗತ್ಯವಿರುವ ಬೆಡ್, ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆಯನ್ನು ಕೈಗಾರಿಕೆಗಳಿಂದ ಮಾಡಬೇಕು ಎಂದು ಒತ್ತಾಯಿಸಿದರು.
ಅಲ್ಲದೆ ಜಿಲ್ಲಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳು ಸ್ಥಗಿತಗೊಂಡಿದ್ದು, ಇದರಿಂದ ಬಡ ಮಕ್ಕಳು, ಗರ್ಭಿಣಿ ಸ್ತ್ರೀಯರಿಗೆ ಸೇರುತ್ತಿದ್ದ ಪೌಷ್ಠಿಕ ಆಹಾರ, ಕ್ಷೀರಭಾಗ್ಯ ಯೋಜನೆ ಸ್ಥಗಿತಗೊಂಡಿರುವುದರಿಂದ ಅಪೌಷ್ಠಿಕತೆ ಹೆಚ್ಚಾಗಲು ಕಾರಣವಾಗಿದೆ. ಸರ್ಕಾರ ಪ್ರತಿಯೊಂದು ಮನೆ ಬಾಗಿಲಿಗೆ ಸರ್ಕಾರದ ಯೋಜನೆಯನ್ನು ತಲುಪಿಸಿ ಅಪೌಷ್ಠಿಕತೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ರೈತಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಮಾತನಾಡಿ, ಕೊರೊನಾ 2ನೇ ಅಲೆಯಿಂದಾಗಿ ಜನರು ತತ್ತರಿಸಿದ್ದು, ಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲ ಆಸ್ಪತ್ರೆಗಳಲ್ಲಿಯೂ ಸೋಂಕಿತರಿಗೆ ಕನಿಷ್ಟ ಬೆಡ್‍ಗಳು ಸಿಗದೆ ಸಾಕಷ್ಟು ಪರದಾಡುವಂತಾಗಿದೆ. ಜೊತೆಗೆ ಆಕ್ಸಿಜನ್, ವೆಂಟಿಲೇಟರ್ ಸೌಲಭ್ಯಗಳಿಲ್ಲದೆ ಸಾಕಷ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಷ್ಟಾದರೂ ಕ್ರಮಕೈಗೊಳ್ಳಬೇಕಿದ್ದ ಜಿಲ್ಲಾಡಳಿತ, ಸರ್ಕಾರ ಯಾವುದೇ ಪ್ರಕ್ರಿಯೆಗೆ ಮುಂದಾಗದೆ ಕೇವಲ ಹೇಳಿಕೆಗಳಿಗಷ್ಟೇ ಸೀಮಿತವಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.


ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಸಿಗಬೇಕಾದರೆ ದಲ್ಲಾಳಿಗಳಿಗೆ ಸಾವಿರಾರು ರೂಪಾಯಿ ಹಣ ನೀಡಬೇಕಾಗಿದೆ. ಲಸಿಕೆಯು ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದರೂ ತಡೆ ಇಲ್ಲದಂತಾಗಿದೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿಯೂ ಶೇ.50ರಷ್ಟು ಬೆಡ್‍ಗಳನ್ನು ಮೀಸಲಿರಿಸಬೇಕೆಂದಿದ್ದರೂ ಇಲ್ಲಸಲ್ಲದ ನೆಪಗಳನ್ನು ಮುಂದಿಟ್ಟು ತಪ್ಪಿಸಿಕೊಳ್ಳುತ್ತಿದ್ದಾರೆ.
ನಮ್ಮ ಜಿಲ್ಲೆಯ ಆಸ್ಪತ್ರೆಗಳಲ್ಲಿ ಸ್ಥಳೀಯರಿಗೇ ಬೆಡ್‍ಗಳು ಸಿಗದೆ ಪರದಾಡುತ್ತಿರುವ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ಇನ್ನಿತರೆ ಜಿಲ್ಲೆಗಳಿಂದ ರಾಜಕಾರಣಿಗಳ ಸಹಾಯದಿಂದ ಇಲ್ಲಿನ ಆಸ್ಪತ್ರೆಗೆ ಅನೇಕ ಮಂದಿ ಬರುತ್ತಿದ್ದು, ಇಲ್ಲಿನವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಹೇಳಿದರು.
ಹೊರ ಜಿಲ್ಲೆಗಳವರು ಇಲ್ಲಿ ಚಿಕಿತ್ಸೆ ಪಡೆದುಕೊಂಡು ವಾಸಿಯಾದರೂ ಕನಿಷ್ಟ 10-12 ದಿನಗಳು ಆಸ್ಪತ್ರೆಯಲ್ಲೇ ಉಳಿದುಕೊಳ್ಳುತ್ತಿರುವುದರಿಂದಾಗಿ ಅಧಿಕಾರಿಗಳಿಗೂ ಸಾಕಷ್ಟು ತಲೆನೋವಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಬರುವ ಕೊರೊನಾ ಸೋಂಕಿತರು ಬೆಡ್, ಆಕ್ಸಿಜನ್ ವ್ಯವಸ್ಥೆಯಿಲ್ಲದೆ ಪ್ರಾಣವನ್ನು ಬೀದಿಗಳಲ್ಲಿ ಕಳೆದುಕೊಳ್ಳುತ್ತಿದ್ದು ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು. ಸಾಮಾನ್ಯ ಜ್ವರ ಬಂದರೂ ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ಚಿಕಿತ್ಸೆ ದೊರೆಯುತ್ತಿಲ್ಲ. ಹೀಗಾಗಿ ಪ್ರತ್ಯೇಕ ಆಸ್ಪತೆಯನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾದ್ಯಂತ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಗಳನ್ನು ಬೆಳೆಯಲಾಗಿದ್ದು, ಸೂಕ್ತ ಮಾರುಕಟ್ಟೆ, ಬೆಲೆ ಇಲ್ಲದೆ ಬೆಳೆ ನಷ್ಟವಾಗಿದ್ದು, ಪ್ರತಿ ಎಕರೆಗೆ 1 ಲಕ್ಷರೂ ಪರಿಹಾರವನ್ನು ಕಲ್ಪಿಸಲು ಕೂಡಲೇ ಮುಂದಾಗಬೇಕು. ಮಾವು ಇಳುವರಿ ಆರಂಭಗೊಂಡಿದ್ದು, ಕಳೆದ ಬಾರಿ ಕೊರೊನಾ ಮೊದಲ ಅಲೆಯಲ್ಲಿ ವ್ಯವಸ್ಥೆ ಮಾಡಿದ್ದಂತೆಯೇ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಬೇಕು.
ಸ್ತ್ರೀಶಕ್ತಿ ಸಂಘಗಳಿಗೆ ನೀಡಿರುವ ಸರಕಾರಿ ಬ್ಯಾಂಕ್, ಖಾಸಗಿ ಸಾಲ ವಸೂಲಾತಿಯನ್ನು ಕೊರೊನಾ ನಿಯಂತ್ರಣಕ್ಕೆ ಬರುವವರೆಗೂ ಮುಂದೂಡಬೇಕು. ಜೊತೆಗೆ ಕಡಿತಗೊಳಿಸಲಾಗಿರುವ ಅಕ್ಕಿಯನ್ನು ಮೊದಲಿನಂತೆ ಮುಂದುವರೆಸಬೇಕು. ಒಟ್ಟಾರೆಯಾಗಿ ಕೊರೊನಾ ನಿಯಂತ್ರಣಕ್ಕೆ ಬರುವವರೆಗೂ ಯಾವುದೇ ಅನುದಾನ ಕಡಿತವಾದರೂ ಆರೋಗ್ಯಕ್ಕೆ ಹೆಚ್ಚಿನ ಅನುದಾನ ನೀಡಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ವಡಗೂರು ಮಂಜುನಾಥ್, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಉಪಸ್ಥಿತರಿದ್ದರು
.