

ಕೋಲಾರ : ೨೦೨೨-೨೩ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಹಾಗೂ ೬ ರಿಂದ ೮ ನೇ ತರಗತಿ ಪದವೀಧರ ಶಿಕ್ಷಕ ವೃಂದದ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಶಿಕ್ಷಕರ ಅರ್ಹತಾ ಪರೀಕ್ಷೆ ಭಾನುವಾರ ನಡೆಯುತ್ತಿದ್ದು , ಕೇಂದ್ರದೊಳಕ್ಕೆ ಶೂ , ಬೆಲ್ಟ್ ಗೂ ನಿಷೇಧ ಹಾಕಲಾಗಿದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.
ಶಿಕ್ಷಕರ ಅರ್ಹತಾ ಪರೀಕ್ಷೆಗೆ ಸಂಬಂಧಿಸಿದಂತೆ ಕೇಂದ್ರಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು , ಯಾವುದೇ ಅವ್ಯವಹಾರ ಗೊಂದಲಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು , ಈಗಾಗಲೇ ಪರೀಕ್ಷಾ ಸಿಬ್ಬಂದಿಗೆ ಅಗತ್ಯ ಮಾರ್ಗದರ್ಶನ ನೀಡಿದ್ದು , ಕೇಂದ್ರಗಳಲ್ಲಿ ನೋಂದಣಿ ಸಂಖ್ಯೆ ದಾಖಲಿಸುವುದು ಸೇರಿದಂತೆ ಅಗತ್ಯ ಸಿದ್ಧತೆ ನಡೆದಿದೆ ಎಂದರು.
ಪರೀಕ್ಷೆ ನಡೆಯುವ ನ .೬ ರಂದು ಕೇಂದ್ರಗಳ ಸುತ್ತ ಬಿಗಿ ಬಂದೋಬಸ್ತ್ ಇದ್ದು , ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದು , ಪ್ರಾಥಮಿಕ ಶಿಕ್ಷಕರಾಗಲು ಅರ್ಹತೆ ಗಳಿಸಲು ೩೬೨೯ ಹಾಗೂ ಪದವೀಧರ ಶಿಕ್ಷಕರ ಹುದ್ದೆಗಳಿಗೆ ಅರ್ಹತ ಗಳಿಸಲು ೪೬೯೭ ಸೇರಿದಂತೆ ಒಟ್ಟು ೮೩೨೬ ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದರು. ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು , ಪರೀಕ್ಷಾ ಸಿಬ್ಬಂದಿ ಹೊರತುಪಡಿಸಿ ಯಾರನ್ನು ಒಳ ಪ್ರವೇಶಿಸಲು ಅವಕಾಶ ನೀಡುವುದಿಲ್ಲ .
ಕೇಂದ್ರದಲ್ಲಿ ಕ್ಯಾಮರಾ , ಮೊಬೈಲ್ , ಎಲೆಕ್ಟ್ರಾನಿಕ್ ಗಡಿಯಾರ ಬಳಕೆಗೆ ಅವಕಾಶ ನೀಡಿಲ್ಲ ಮತ್ತು ಅಭ್ಯರ್ಥಿಗಳು ಶೂ , ಬೆಲ್ಟ್ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಪರೀಕ್ಷೆಗಳು ನಗರದಲ್ಲಿ ಬೆಳಗ್ಗಿನ ಅವಧಿಯಲ್ಲಿ ಪ್ರಾಥಮಿಕ ಶಿಕ್ಷಕರ ಹುದ್ದೆಗಳಿಗೆ ಅರ್ಹತೆಗೆ ಸಂಬಂಧಿಸಿದಂತೆ ೧೭ ಕೇಂದ್ರ ಹಾಗೂ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ಅರ್ಹತೆಗೆ ಮಧ್ಯಾಹ್ನ ೨೩ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು , ಕೇಂದ್ರಗಳ ಸುತ್ತಮುತ್ತಲೂ ೨೦೦ ಮೀಟರ್ ಪ್ರದೇಶವನ್ನು ನಿಷೇದಿತ ಪ್ರದೇಶವೆಂದು ಘೋಷಿಸಿದ್ದು , ಸೆಕ್ಷನ್ ೧೪೪ ರ ಅನ್ವಯ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿಗಳು ಜಾರಿಗೊಳಿಸಿದ್ದಾರೆ ಎಂದರು.
ಕಟ್ಟುನಿಟ್ಟಿನ ತಪಾಸಣೆಗೆ ಕ್ರಮ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಈ ಸಂಬಂಧ ಮಾಹಿತಿ ನೀಡಿ , ವಿಶೇಷವಾಗಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನ ೨ ಹಂತದ ತಪಾಸಣೆಗೆ ಒಳಪಡಬೇಕಾಗುತ್ತದೆ.
ಮೊದಲನೇ ಹಂತದಲ್ಲಿ ಪರೀಕ್ಷಾ ಸಿಬ್ಬಂದಿ ಅಭ್ಯರ್ಥಿಗಳನ್ನು ಗುರುತಿಸಿ ಪರೀಕ್ಷಾ ನಿಷೇದಿತ ವಸ್ತುಗಳಾದ ಮೊಬೈಲ್ ಪೋನ್ ಬ್ಲೂಟೂತ್ ಡಿವೈಸ್ , ಕ್ಯಾಲುಕಲೇಟರ್ ಕೈಗಡಿಯಾರ ಇತರೆ ಎಲೆಕ್ಟ್ರಾನಿಕ್ ವಸ್ತುಗಳು ಇಲ್ಲದಿರುವ ಬಗ್ಗೆ ಪರಿಶೀಲಿಸಿಸುತ್ತಾರೆ.
೨ ನೇ ಹಂತದ ತಪಾಸಣೆಗೆ ಕಳುಹಿಸಲಾಗುವುದು ಅಲ್ಲಿ ಪೊಲೀಸ್ ಸಿಬ್ಬಂದಿ ಮೆಟಲ್ ಡಿಟೆಕ್ಟರ್ ಮೂಲಕ ಪರೀಕ್ಷೆಗೆ ನಿಷೇದಿತ ವಸ್ತುಗಳ ತಪಾಸಣೆ ನಡೆಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಅನುಮತಿಸುವರು ಎಂದು ತಿಳಿಸಿದರು.
ಆಧಾರ್ ಕಾರ್ಡ್ ತರಲು ಸೂಚನೆ
ಪ್ರವೇಶ ಪತ್ರದಲ್ಲಿ ಸಹಿ ಮತ್ತು ಭಾವಚಿತ್ರ ಪ್ರಕಟವಾಗದಿರುವ ಮತ್ತು ಸಹಿ ವ್ಯತ್ಯಾಸವಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮೊಂದಿಗೆ ಆನ್ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಪ್ರತಿ , ಆಧಾರ್ಕಾರ್ಡ್ , ಇತ್ತೀಚಿನ ಭಾವಚಿತ್ರ ತರಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಪರೀಕ್ಷಾನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಮಾಹಿತಿ ನೀಡಿ , ಅಭ್ಯರ್ಥಿಗಳು ಪರೀಕ್ಷಾ ದಿನಗಳಂದು ಬೆಳಿಗ್ಗೆ ೯-೦೦ ಗಂಟೆಗೆ ಹಾಗೂ ಮಧ್ಯಾಹ್ನದ ಅಧಿವೇಶನಕ್ಕೆ ೧-೦೦ ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಿ ತಪಾಸಣೆಗೆ ಒಳಪಡುವುದು ಕಡ್ಡಾಯವಾಗಿದೆ.
ಬೆಳಿಗಿನ ಅಧಿವೇಶನದಲ್ಲಿ ಪರೀಕ್ಷೆ ಆರಂಭವಾದ ನಂತರ ಯಾವುದೇ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಿವುದನ್ನು ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪರೀಕ್ಷಾ ಕಾರ್ಯಕ್ಕೆ ಈಗಾಗಲೇ ೬ ಮಂದಿ ಮಾರ್ಗಾಧಿಕಾರಿಗಳು , ೨೩ ಕೇಂದ್ರಗಳಿಗೂ ಮುಖ್ಯ ಅಧೀಕ್ಷಕರು , ೨೩ ಮಂದಿ ಸ್ಥಾನಿಕ ಜಾಗೃತದಳದ ಅಧಿಕಾರಿಗಳನ್ನು ನೇಮಿಸಲಾಗಿದ್ದು , ಪರೀಕ್ಷಾ ಕಾರ್ಯಕ್ಕೆ ಓರ್ವ ವೀಕ್ಷಕರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಗರದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಎರಡು ಕೇಂದ್ರಗಳನ್ನು ಸ್ಥಾಪಿಸಿದ್ದು , ಒಂದು ಕೇಂದ್ರಕ್ಕೆ ಪಟ್ಟ ಶಾಲೆ ಮುಖ್ಯಶಿಕ್ಷಕ ನಾಗರಾಜ್ ಮತ್ತೊಂದು ಕ್ಷೇತ್ರಕ್ಕೆ ಶ್ರೀನಿವಾಸಪುರ ಪಟ್ಟಣದ ನೂತನ ಪ್ರೌಢಶಾಲೆ ಮುಖ್ಯಶಿಕ್ಷಕ ಬೈರರೆಡ್ಡಿ ಮುಖ್ಯಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು , ಶನಿವಾರ ಸಂಜೆ ಡೆಸ್ಕ್ಗಳ ಮೇಲೆ ನೋಂದಣಿ ಸಂಖ್ಯೆ ದಾಖಲಿಸುವ ಕಾರ್ಯ ನಡೆಯಿತು.
