ತಾಲ್ಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮತದಾರರ ಪಟ್ಟಿ ತಯಾರಿಯ ಸಿಬ್ಬಂದಿ ವೇಳಾಪಟ್ಟಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು : ತಹಶೀಲ್ದಾರ್ ಶಿರಿನ್ ತಾಜ್

ಶ್ರೀನಿವಾಸಪುರ : ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ತಯಾರಿಸಲು ನೇಮಕಗೊಂಡಿರುವ ಸಿಬ್ಬಂದಿ ವೇಳಾಪಟ್ಟಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಸೂಚಿಸಿದ್ದಾರೆ.

ನಿಗದಿತ ವೇಳಾಪಟ್ಟಿಯಂತೆ ಮೇ 29 ರಿಂದ ಜೂನ್‌4ರವರೆಗೆ ಕ್ಷೇತ್ರ ವಿಂಗಡಣೆ ಅಧಿಸೂಚನೆ ಕೋಷ್ಠಕದಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮತದಾರರನ್ನು ಗುರುತಿಸಬೇಕು. ಗಡಿ ಭಾಗದಲ್ಲಿ ಬರುವ ಮನೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ಮತದಾರರನ್ನು ಗುರುತಿಸಬೇಕು.

ಜೂನ್ 5 ರಿಂದ 13 ರವರೆಗೆ ಮುದ್ರಕರಿಂದ ಪ್ರಥಮ ಜೆಕ್ ಲಿಸ್ಟ್ ಪಡೆದುಕೊಂಡು ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲಿಸಬೇಕು. ಜೂನ್ 14 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಬೇಕು. ಜೂನ್ 19 ರಂದು ಆಕ್ಷೇಪಣೆ ಸಲ್ಲಿಸಲು ಕೊನೆ ದಿನ. ಜೂನ್ 22 ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲು ಕೊನೆ ದಿನ.

ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿದ ನಂತರ ಜೂನ್ 25 ರಂದು ಮುದ್ರಕರಿಂದ ಅಗತ್ಯ ಬದಲಾವಣೆ ಮಾಡಿಸಿ , ಅಂತಿಮ ಚೆಕ್ ಲಿಸ್ಟ್ ಪಡೆದುಕೊಂಡು ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲಿಸಬೇಕು. ಜೂನ್ 27 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಬೇಕು ಎಂದು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.