ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ:ಲಕ್ಷೀಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆ, ಸದಸ್ಯರ ಗೈರು ಹಾಜರಿ ಪರಿಣಾಮವಾಗಿ ಸ್ಥಗಿತಗೊಳಿಸಲಾಯಿತು.
ಈ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಗೀತಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ಏರ್ಪಡಿಸಲಾಗಿತ್ತು. ಕಾಂಗ್ರೆಸ್ ಬೆಂಬಲಿತ ಲಕ್ಷ್ಮಿದೇವಮ್ಮ ಅವರು ಮಾತ್ರ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು. ಆದರೆ ಚುನಾವಣೆಯಲ್ಲಿ ಒಟ್ಟು 17 ಸದಸ್ಯರ ಪೈಕಿ ಕಾಂಗ್ರೆಸ್ ಬೆಂಬಲಿತ 8 ಸದಸ್ಯರು ಮಾತ್ರ ಮತದಾನ ಮಾಡಿದರು. ಉಳಿದ 9 ಮಂದಿ ಸದಸ್ಯರು ಮತದಾನದಲ್ಲಿ ಭಾಗವಹಿಸಲಿಲ್ಲ.
ಚುನಾವಣಾಧಿಕಾರಿ ಎಂ.ಕೆ.ಹುಸೇನ್ ಸಾಬ್ ಮತದಾನಕ್ಕೆ ನಿಗದಿಪಡಿಸಲಾಗಿದ್ದ ಸಮಯ ಮುಗಿಯುವ ವರೆಗೆ ಕಾದುಕುಳಿತರೂ ಪ್ರಯೋಜನವಾಗಲಿಲ್ಲ. ಜೆಡಿಎಸ್ ಬೆಂಬಲಿತ ಸದಸ್ಯರು ಮತಗಟ್ಟೆ ಕಡೆ ಮುಖ ಮಾಡಲಿಲ್ಲ.
‘ಇಂದು ಗೈರು ಹಾಜರಾದ ಸದಸ್ಯರು ನಾಳೆ ಮತದಾನದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು. ನಾಳೆಯೂ ಅವರು ಗೈರುಹಾಜರಾದರೆ, ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಯನ್ನು ವಿಜೇತ ಅಭ್ಯರ್ಥಿಯೆಂದು ಘೋಷಿಸಲಾಗುವುದು’ ಎಂದು ಚುನಾವಣಾಧಿಕಾರಿ ಎಂ.ಕೆ.ಹುಸೇನ್ ಸಾಬ್ ತಿಳಿಸಿದರು.
ಪಿಡಿಒ ಜಗದೀಶ್, ಪೊಲೀಸ್ ಇನ್ಸ್‍ಪೆಕ್ಟರ್ ಸಿ.ರವಿಕುಮಾರ್ ಇದ್ದರು.