ಶ್ರೀನಿವಾಸಪುರ ತಾಲ್ಲೂಕಿನ ಇಮರಕುಂಟೆ ಗ್ರಾಮದ ಸಮೀಪ ಶಿಕ್ಷಣ ತಜ್ಞ ದಿವಂಗತ ಎಂ.ಶ್ರೀರಾಮರೆಡ್ಡಿ ಅವರ ಸಮಾಧಿ ಮಂಟಪ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಲಾಯಿತು.
ಎಂಎಸ್ಆರ್ ಗೌರವಾರ್ಥ ಸಮಾಧಿ ಮಂಟಪ ನಿರ್ಮಾಣ
ಶ್ರೀನಿವಾಸಪುರ: ತಾಲ್ಲೂಕಿನ ಇಮರಕುಂಟೆ ಗ್ರಾಮದ ಸಮೀಪ ಭೈರವೇಶ್ವರ ವಿದ್ಯಾ ನಿಕೇತನದ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಶಿಕ್ಷಣ ತಜ್ಞ ಎಂ.ಶ್ರೀರಾಮರೆಡ್ಡಿ ಅವರ ಸಮಾಧಿ ಮಂಟಪ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಭೈರವೇಶ್ವರ ವಿದ್ಯಾ ನಿಕೇತನದ ನಿರ್ದೇಶಕ ಎ.ವೆಂಕಟರೆಡ್ಡಿ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಎಂ.ಶ್ರೀರಾಮರೆಡ್ಡಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಭೈರವೇಶ್ವರ ವಿದ್ಯಾ ನಿಕೇತನದ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇತ್ತೀಚೆಗೆ ನಿಧನರಾದ ಶ್ರೀರಾಮರೆಡ್ಡಿ ಅವರ ಗೌರವಾರ್ಥ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಭವ್ಯವಾದ ಸಮಾಧಿ ಮಂಟಪ ನಿರ್ಮಿಸುತ್ತಿದೆ ಎಂದು ಹೇಳಿದರು.
ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕರಾಗಿ ವಯೋನಿವೃತ್ತಿ ಹೊಂದಿದ ಬಳಿಕ, ಆದಿಚುಂನಗಿರಿ ಮಠದ ನೇತೃತ್ವದಲ್ಲಿ ಪ್ರಾರಂಭಿಸಲಾದ ಭೈರವೇಶ್ವರ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಯಾಗಿ ಹಾಗೂ ಶಿಕ್ಷಕರಾಗಿ ಯಾವುದೇ ಸಂಭಾನೆ ಪಡೆಯದೆ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ದಾನಿಗಳ ನೆರವು ಪಡೆದು ಶೈಕ್ಷಣಿಕ ಸೌಲಭ್ಯ ಒದಗಿಸಿದ್ದಾರೆ. ರಾಜ್ಯಾದ್ಯಂತ ಸಂಚರಿಸಿ ಶಿಕ್ಷಕರು, ಸ್ವಯಂಸೇವಾ ಸಂಸ್ಥೆಗಳ ಸದಸ್ಯರು ಹಾಗೂ ಸಾರ್ವಜನಿಕರಿಗೆ ಅನುಪಯುಕ್ತ ವಸ್ತುಗಳಿಂದ ಉಪಯುಕ್ತ ವಸ್ತುಗಳ ತಯಾರಿಕೆ ಹಾಗೂ ದಿನ ಬಳಕೆ ವಸ್ತುಗಳ ತಯಾರಿಕೆ ಬಗ್ಗೆ ತರಬೇತಿ ನೀಡಿದ್ದಾರೆ ಎಂದು ಹೇಳಿದರು.
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಅಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ಅವರು ನೀಡಿರುವ ಮೂರು ಹಂತಗಳ ಸಮಾಧಿ ಮಂಟಪದ ಮಾದರಿಯಂತೆ ಕಟ್ಟಡ ನಿರ್ಮಿಸಲಾಗುವುದು. ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆಯ ನೆನಪಿಗಾಗಿ ಭವ್ಯವಾದ ಸಮಾಧಿ ಮಂಟಪ ನಿರ್ಮಿಸುವ ಸಂಕಲ್ಪ ಮಾಡಲಾಗಿದೆ. ಸಮಾಧಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವಂತೆ ರೂಪಿಸಲಾಗುವುದು ಅದಕ್ಕೆ ಅಗತ್ಯವಾದ ಸಂಪನ್ಮೂಲವನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನೀಡುವುದು ಎಂದು ಹೇಳಿದರು.
ಪ್ರಾಂಶುಪಾಲರಾದ ಗಂಗಾಧರಗೌಡ, ಕೃಷ್ಣಮೂರ್ತಿ, ಮುಖ್ಯ ಶಿಕ್ಷಕ ವೆಂಕಟರಮಣರೆಡ್ಡಿ, ಶ್ರೀರಾಮರೆಡ್ಡಿ ಅವರ ಪುತ್ರರಾದ ಪ್ರೊ.ಸತೀಶ್ ಚಂದ್ರಾರೆಡ್ಡಿ, ಆಂಜನೇಯರೆಡ್ಡಿ ಮತ್ತಿತರರು ಇದ್ದರು.