ಅಂತರಗಂಗೆ ಬೆಟ್ಟದ ಸಂರಕ್ಷಣೆಗೆ ಪರಿಸರ ಪ್ರೇಮಿಗಳ ಪಟ್ಟು

ಅರಣ್ಯ ಇಲಾಖೆ ವೈಫಲ್ಯಕ್ಕೆ ಪೂರ್ವಭಾವಿ ಸಭೆಯಲ್ಲಿ ಆಕ್ರೋಶ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಅಪಾರವಾದ ನೈಸರ್ಗಿಕ ಸಂಪತ್ತು ಹೊಂದಿರುವ ಹಾಗೂ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿರುವ ಶತಶೃಂಗ ಪರ್ವತಗಳ ಸಾಲಿನ ಅಂತರಗಂಗೆ ಬೆಟ್ಟವನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲು ಸಮಾನ ಮನಸ್ಕರು ಜನಪ್ರತಿನಿಧಿಗಳನ್ನು ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಹಿರಿಯ ಪತ್ರಕರ್ತ ಪಾ.ಶ್ರೀ.ಅನಂತರಾಮ್ ಅಧ್ಯಕ್ಷತೆಯಲ್ಲಿ ಸೋಮವಾರ ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಪಾಲ್ಗೊಂಡಿದ್ದ 100ಕ್ಕೂ ಹೆಚ್ಚು ಪ್ರತಿನಿಧಿಗಳು ಪರಿಸರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಅಂತರಗಂಗೆ ಬೆಟ್ಟ ಪುಂಡರ ಹಾವಳಿಯಿಂದ ಕಲುಷಿತಗೊಳ್ಳುತ್ತಿರುವುದಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಹಾಗೂ ಅಭಿವೃದ್ಧಿಪಡಿಸಲು ಇಚ್ಛಾಶಕ್ತಿಯ ಕೊರತೆ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದರು.
ಅಂತರಗಂಗೆ ಬೆಟ್ಟದಲ್ಲಿರುವ ಅಮೂಲ್ಯವಾದ ಗಿಡಮೂಲಿಕೆ, ಕಲ್ಲಿನ ಬಸವನ ಬಾಯಿಂದ ನಿಗೂಢವಾಗಿ ಹರಿಯುತ್ತಿರುವ ಗಂಗೆ, ಮಹಾಭಾರತದ ಕಾಲದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಕಾಶಿ ವಿಶ್ವನಾಥ ದೇವಾಲಯ, ನೈಜ್ಯತೆಯಿಂದ ಕೂಡಿರುವ ಶಿಲ್ಪ ಸೌಂದರ್ಯ ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ, ಕಲಾವಿದರಿಗೆ, ಜನಪದರಿಗೆ, ಸಾಹಿತಿಗಳಿಗೆ ಜ್ಞಾನ ಸಂಪಾದಿಸಲು ದೊಡ್ಡ ಕೊಡುಗೆಯನ್ನು ನೀಡುತ್ತಾ ಬಂದಿದ್ದರೂ ಅರಣ್ಯ ಇಲಾಖೆ ಬೆಟ್ಟವನ್ನು ಸಂರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಅಪವಿತ್ರದ ಜತೆಗೆ ನೈಸರ್ಗಿಕ ಸಂಪತ್ತು ಬೆಂಕಿಗೆ ಆಹುತಿ ಆಗುತ್ತಿರುವುದರಿಂದ ಕೂಡಲೇ ಸಮಿತಿಯನ್ನು ರಚಿಸಲು ನಿರ್ಣಯಕೈಗೊಳ್ಳಲಾಯಿತು.


ಇಂದು ಡಿಸಿ ಬಳಿಗೆ ನಿಯೋಗ


ಜನಪ್ರತಿನಿಧಿಗಳು ಸಮಿತಿ ರಚನೆಗೆ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಬೇಕು, ಸಮಿತಿಗೆ ಜಿಲ್ಲಾಧಿಕಾರಿ, ಜಿಪಂ ಸಿಇಒ, ಜಿಲ್ಲೆ ಪೊಲೀಸ್ ವರಿಷ್ಟಾಧಿಕಾರಿ, ಅರಣ್ಯ ಇಲಾಖೆ ಡಿಎಫ್‍ಒ, ಪರಿಸರ, ಪ್ರವಾಸೋದ್ಯಮ, ಮುಜರಾಯಿ, ನಗರಸಭೆ, ಸಂಬಂಧಿಸಿದ ಗ್ರಾಪಂ ಪಿಡಿಒ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅಧಿಕಾರಿಗಳು ಹಾಗೂ ಅಂತರಗಂಗೆ ಬೆಟ್ಟ ಸಂರಕ್ಷಣಾ ಸಮಿತಿಯ 15 ಮಂದಿ ಪ್ರತಿನಿಧಿಗಳನ್ನು ಸೇರಿಸಿಕೊಂಡು ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಕೋರಿ ಮಾ.15ರ ಮಧ್ಯಾಹ್ನ 1 ಗಂಟೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.


ಪ್ರತಿನಿಧಿಗಳಿಂದ ಸಲಹೆ ಸೂಚನೆ:


ಬೇಸಿಗೆ ಕಾಲದಲ್ಲಿ ಬೆಂಕಿ ಬೀಳುವುದನ್ನು ತಪ್ಪಿಸಲು ಅರಣ್ಯ ಇಲಾಖೆಯಿಂದ ವಾಚರ್‍ಗಳನ್ನು ನೇಮಿಸಬೇಕು, ಪ್ಲಾಸ್ಟಿಕ್ ಮತ್ತು ನೀಲಗಿರಿ ನಿಷೇಧ, ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಬೆಟ್ಟದಲ್ಲಿ ಸೂಚನಾ ಫಲಕಗಳು, ಪುಂಡರ ಹಾವಳಿ ನಿಯಂತ್ರಣಕ್ಕೆ ಸಿಸಿ ಕ್ಯಾಮಾರ ಅಳವಡಿಕೆ, ಚೆಕ್ ಡ್ಯಾಮ್ ನಿರ್ಮಾಣ, ಕಾಶಿ ವಿಶ್ವನಾಥ ದೇವಾಲಯದ ಜೀರ್ಣೋದ್ಧಾರ, ಪ್ರವಾಸಿಗರಿಗೆ ಅಗತ್ಯ ಸೌಲಭ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಪ್ರತಿತಿಂಗಳು ಸಾಂಸ್ಕøತಿಕ ಕಾರ್ಯಕ್ರಮ, ಭಾವೈಕ್ಯತಾ ಶಿಬಿರ, ಸ್ವಚ್ಛ ಭಾರತ್ ಯೋಜನೆಯಡಿ ವಾರಕ್ಕೊಮ್ಮೆ ಸ್ವಚ್ಛತಾ ಆಂದೋಲನ, ಪ್ರಾಣಿ,ಪಕ್ಷಿಗಳಿಗೆ ಉಪಯೋಗಬಾಗಬಲ್ಲ ಗಿಡ ಮರಗಳನ್ನು ಬೆಳೆಸುವುದು, ಮುಖ್ಯವಾಗಿ ಅಂಗರಗಂಗೆ ಬೆಟ್ಟದ ತಪ್ಪಲಿನಲ್ಲಿ ಪೊಲೀಸ್ ಹೊರ ಠಾಣೆಯನ್ನು ಪುನರ್ ಸ್ಥಾಪಿಸಿ ಪ್ರವಾಸಿಗರು ಪ್ಲಾಸ್ಟಿಕ್ ಕವರ್,ಸೀಗರೇಟ್, ಬೀಡಿ, ಬೆಂಕಿ ಪೊಟ್ಟಣ, ಮಾರಕ ವಸ್ತುಗಳನ್ನು ಕೊಂಡೊಯ್ಯುವುದನ್ನು ತಡೆಯಬೇಕು, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಕನಿಷ್ಟ 2 ತಿಂಗಳಿಗೊಮ್ಮೆ ಧ್ವನಿ ಬೆಳಕು ಕಾರ್ಯಕ್ರಮ ಜಾರಿಗೆ ತಂದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಅನುಕೂಲವಾಗುತ್ತದೆ ಎಂದು ಸಭೆಯಲ್ಲಿ ಹಾಜರಿದ್ದ ವಿವಿಧ ಸ್ತರಗಳ ಗಣ್ಯರು ಸಲಹೆ ನೀಡಿ, ಜಿಲ್ಲಾಧಿಕಾರಿಗಳ ಗಮನ ಸೆಳೆಯುವಂತೆ ತಿಳಿಸಿದರು.


ಪ್ರಾಧಿಕಾರ ರಚನೆಗೆ
ಹಲವರ ಸಲಹೆ


ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಶತಶೃತ ಪರ್ವತಗಳ ಸಾಲಿನ ಬೆಟ್ಟಗಳ ಸಂರಕ್ಷಣೆಗಾಗಿ ವಿಶೇಷ ಪ್ರಾಧಿಕಾರ ರಚನೆ ಆಗಬೇಕೆಂದು ಪ್ರತಿಪಾದಿಸಿದರಲ್ಲದೆ, ಜನಪ್ರತಿನಿಧಿಗಳನ್ನು ಒಳಗೊಂಡಂತೆ ಸಮಿತಿ ರಚಿಸಿದಾಗ ಮಾತ್ರ ಅಧಿಕಾರಿಗಳು ಪರಿಣಾಮಕಾರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆಂದರು.
ನಗರಸಭೆ ಉಪಾಧ್ಯಕ್ಷ ಪ್ರವೀಣ್ ಗೌಡ ನೀಲಿ ನಕ್ಷೆ ಸಿದ್ಧಪಡಿಸಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಟಾನಗೊಳಿಸಬೇಕೆಂದು ತಿಳಿಸಿದರು. ಕರ್ನಾಟಕ ವಿಜ್ಞಾನ ಪರಿಷತ್ ಜಿಲ್ಲಾ ಕಾರ್ಯದರ್ಶಿ ಮಂಜುಳಾ ಭೀಮರಾವ್,ಪರಿಸರವಾದಿ ಇಂದಿರಾರೆಡ್ಡಿ, ಪರಿಸರ ಲೇಖಕ ಹೆಚ್.ಎ.ಪುರುಷೋತ್ತಮ್, ಸ್ವರ್ಣಭೂಮಿ ಫೌಂಡೇಷನ್ ಅಧ್ಯಕ್ಷ ವಿ.ಶಿವಕುಮಾರ್, ಪರಿನಿರ್ವಾಣ ಗತಿ ಸಂರಕ್ಷಣಾ ವಿಧಿ ಜಿಲ್ಲಾ ಸಂಚಾಲಕ ಮಹೇಶ್ ರಾವ್ ಕದಂ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಸಂಘಟಕ ವಿ.ಬಾಬು, ಪರಿಸರ ಪ್ರೇಮಿ ವಂದೇಮಾತರಂ ಸೋಮಶಂಕರ್, ನಗರಸಭೆ ಮಾಜಿ ಉಪಾಧ್ಯಕ್ಷ ವಿ.ಕೆ.ರಾಕೇಶ್, ರೈತ ಮುಖಂಡರಾದ ಅಬ್ಬಣಿ ಶಿವಪ್ಪ, ಕೆ.ನಾರಾಯಣಗೌಡ, ನಳನಿಗೌಡ, ಕೆ.ಆನಂದಕುಮಾರ್,ಕ್ಯಾನ್ ಸಂಸ್ಥೆಯ ಕಾರ್ಯದರ್ಶಿ ಚೌಡಪ್ಪ,ಈ ನೆಲ ಈ ಜಲ ಸಂಸ್ಥೆಯ ವೆಂಕಟಾಚಲಪತಿ, ಕೋಂಡರಾನಹಳ್ಳಿ ಗ್ರಾಪಂ ಮಾಜಿ ಸದಸ್ಯ ಖಾದ್ರಿಪುರ ಬಾಬು, ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ತ್ಯಾಗರಾಜ್, ಗ್ರಾಪಂ ಸದಸ್ಯ ನಿರಂಜನ್, ಮನ್ವಂತರ ಪ್ರಕಾಶನ ಪ್ರಧಾನ ಸಂಚಾಲಕ ಎಸ್.ಮಂಜುನಾಥ್, ಖಜಾಂಚಿ ಎಸ್.ಎನ್.ಪ್ರಕಾಶ್, ಪರಿಸರ ಪಡೆ ಸಂಚಾಲಕ ಎ.ಬಾಲನ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿ ಅರುಣಮ್ಮ, ಜಿಲ್ಲಾ ಆರ್ಯವೇಶ್ಯಾ ಸಮಾಜದ ಮುಖಂಡ ಡಿ.ಟಿ.ಮನೋಹರ್, ಕಾಂಗ್ರೆಸ್ ಮುಖಂಡ ಗಂಗಮ್ಮನಪಾಳ್ಯದ ರಾಮಪ್ಪ ಅಮೂಲ್ಯವಾದ ಸಲಹೆಗಳನ್ನು ನೀಡಿದರು.