

ಶ್ರೀನಿವಾಸಪುರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ವತಿಯಿಂದ ಶುಕ್ರವಾರ ಡಿವಿಜಿ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಡಿವಿಜಿ ಬದುಕು ಬರಹ ಸರ್ವಕಾಲಿಕ ಮಾದರಿ
ಶ್ರೀನಿವಾಸಪುರ: ಡಿವಿಜಿ ಅವರು ವಿದ್ವತ್ತು ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದರು. ಸಾಹಿತ್ಯ ಹಾಗೂ ಪತ್ರಿಕಾ ಕ್ಷೇತ್ರಕ್ಕೆ ಅವರು ಸಲ್ಲಿಸಿರುವ ಸೇವೆ ಸರ್ವಕಾಲಿಕ ಮಾದರಿಯಾಗಿದೆ ಎಂದು ಉಪನ್ಯಾಸಕ ಹಾಗೂ ಸಾಹಿತಿ ಎನ್.ಶಂಕರೇಗೌಡ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಡಿವಿಜಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ಸರ್ವಜ್ಞ ಎನಿಸಿಕೊಂಡಿರುವ ಡಿವಿಜಿ ಜೀವನದ ಕಷ್ಟಗಳ ನಡುವೆ ಪ್ರಾಮಾಣಿಕತೆಗೆ ಎಂದೂ ಬೆನ್ನು ತೋರಿಸಿದವರಲ್ಲ. ತಾವು ನಂಬಿದ ತತ್ವಗಳಿಗೆ ಬದ್ಧರಾಗಿದ್ದರು. ಮಾದರಿ ಜೀವನ ನಡೆಸಿದರು ಎಂದು ಹೇಳಿದರು.
ಡಿವಿಜಿ ಅವರಂಥ ಸಾಹಿತ್ಯ ದಿಗ್ಗಜರ ಬದುಕು ಹಾಗೂ ಬರಹ ಕುರಿತು ಯುವ ಸಮುದಾಯದಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಲೇಖಕಿ ಮಾಯಾ ಬಾಲಚಂದ್ರ, ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ವಾಚನ ಮಾಡಿ ಮಾತನಾಡಿ, ಮಂಕುತಿಮ್ಮನ ಕಗ್ಗ ಆಧುನಿಕ ಭಗವದ್ಗೀತೆ ಎಂದು ಹೆಸರಾಗಿದೆ. ಕಗ್ಗ ಸಮಾಜದ ಕಣ್ಣು ತೆರೆಸುತ್ತದೆ ಹಾಗೂ ಆದರ್ಶ ಬದುಕಿನ ದರ್ಶನ ಮಾಡಿಸುತ್ತದೆ. ಪ್ರತಿ ಪದ್ಯದಲ್ಲೂ ಜೀವನದ ಅನುಭವ ತುಂಬಿ ತುಳುಕುತ್ತದೆ. ಬದುಕಿನ ತತ್ವ ಹಾಗೂ ವೇದಾಂತ ಸಾರವನ್ನು ತಿಳಿಸುತ್ತದೆ ಎಂದು ಹೇಳಿದರು.
ಡಿವಿಜಿ ಅವರ ಬದುಕು ತೆರೆದ ಪುಸ್ತಕವಿದ್ದಂತೆ. ಜೀನದ ಉದ್ದಕ್ಕೂ ಸಮಾಜಕ್ಕೆ ಉಪಯುಕ್ತವಾಗಿ ಬದುಕಿದರು. ಸಮಾಜಕ್ಕೆ ಬೇಕಾದ್ದನ್ನು ನೀಡಿದರು. ಸಮಾಜದ ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾದರು. ಅವರ ಸ್ಮರಣೆಯಿಂದ ಹೊಸ ಚೈತನ್ಯ ಸಂಚಾರವಾಗುತ್ತದೆ. ಹೊಸ ಆಲೋಚನೆ ತೆರೆದುಕೊಳ್ಳುತ್ತದೆ. ಸ್ವಚ್ಛ ಬದುಕಿನ ಚಿತ್ರಣ ಕಣ್ಮುಂದೆ ನಿಲ್ಲುತ್ತದೆ ಎಂದು ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಉಪಾಧ್ಯಕ್ಷ ಟಿ.ವಿ.ನಟರಾಜ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪಿ.ಎಸ್.ಮಂಜುಳ, ಉಪನ್ಯಾಸಕ ಜಿ.ಕೆ.ನಾರಾಯಣಸ್ವಾಮಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಚಂದ್ರಶೇಖರ್, ಆಂಜನೇಯ, ಅರುಣ್ ಕುಮಾರ್, ಡಿ.ಆರತಿ, ಸುವರ್ಣ ಲಕ್ಷ್ಮಿ, ಮಮತಾ ರಾಣಿ, ಜಿ.ವಿ.ಚಂದ್ರಪ್ಪ, ವೆಂಕಟೇಶ ಬಾಬು ವೆಂಕಟರವಣಪ್ಪ, ಪಾಪಿರೆಡ್ಡಿ ಕಗ್ಗ ವಾಚನ ಮಾಡಿ ತಾತ್ಪರ್ಯ ತಿಳಿಸಿದರು.