ಕೋಲಾರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾನುವಾರ ಪತ್ರಕರ್ತರ ಭವನದಲ್ಲಿ ಡಿವಿಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಡಿ.ವಿ.ಗುಂಡಪ್ಪ ಅವರ ಜನ್ಮದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಡಿವಿಜಿ ಪತ್ರಕರ್ತರ ಸಂಘ ಹುಟ್ಟು ಹಾಕಿದ್ದು ಮಾತ್ರವಲ್ಲ; ಪತ್ರಕರ್ತರಾಗಿಯೂ ಕೆಲಸ ಮಾಡಿದ್ದಾರೆ. ಹೊಟ್ಟೆಪಾಡಿಗಾಗಿ ಪತ್ರಕರ್ತ ಆದೆ ಎಂದಿದ್ದರು. ಆದರೆ, ಎಲ್ಲೂ ಕೈಚಾಚಲಿಲ್ಲ. ನೈತಿಕತೆ ಕಳೆದುಕೊಳ್ಳಲಿಲ್ಲ. ಯಾರ ಹಂಗಿಗೂ ಒಳಗಾಗುವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದರು, ಡಿವಿಜಿ ಬರೆದೊರುವ ವೃತ್ತ ಪತ್ರಿಕೆ ಎಂಬ ಕೃತಿ ಈಗಲೂ ಪ್ರಸ್ತುತ. ತಂತ್ರಜ್ಞಾನ ಬೆಳೆದಿದ್ದರೂ ಪತ್ರಿಕೋದ್ಯಮ ಹಾಗೂ ಪತ್ರಕರ್ತರ ಮೂಲ ಸಿದ್ಧಾಂತ ಬದಲಾಗಿಲ್ಲ, ಪತ್ರಕರ್ತರನ್ನು ಡಿವಿಜಿ ಯೋಧರಿಗೆ ಹೋಲಿಸಿದ್ದಾರೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಸಂಘದಿಂದ ಪ್ರತಿ ವರ್ಷ ಡಿ.ವಿ.ಗುಂಡಪ್ಪ ಜಯಂತಿ ಆಚರಣೆ ಮಾಡಲಾಗುತ್ತಿದೆ. ಅವರು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷರು ಕೂಡ. ಪತ್ರಕರ್ತರಿಗೆ ಮೌಲ್ಯಯುತ ಹಾದಿ ಕಟ್ಟಿಕೊಟ್ಟವರು. ದುರದೃಷ್ಟಕರವೆಂದರೆ ಈಗ ಪತ್ರಿಕೋದ್ಯಮದಲ್ಲಿ ಆದರ್ಶ ಇಲ್ಲವಾಗಿದೆ. ವೃತ್ತಿ ಧರ್ಮ ಕೈಬಿಟ್ಟರೆ ಆ ವೃತ್ತಿಗೆ ಗೌರವ ಇರುವುದಿಲ್ಲ. ಡಿವಿಜಿ ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಉತ್ತಮ ಎಂದರು.
ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯವಿ.ಮುನಿರಾಜು ಮಾತನಾಡಿ, ಸಂಘ ಡಿ.ವಿ. ಗುಂಡಪ್ಪ ಹಾದಿಯಲ್ಲಿ ನಡೆಯಬೇಕು. ಅವರಂತೆ ನಾವು ಆಗಲು ಅಸಾಧ್ಯ. ಆದರೆ, ಶೇ ೬೦ ರಷ್ಟಾದರೂ ಅವರ ಮೌಲ್ಯ ಅಳವಡಿಸಿಕೊಂಡು ಅವರ ಹಾದಿಯಲ್ಲಿ ನಡೆಯಬೇಕು ಎಂದರು.
ಸಹಕಾರ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್ ಮಾತನಾಡಿ, ಕರ್ನಾಟಕಕ್ಕೆ ಹೆಸರಾದವರು ಡಿವಿಜಿ. ಸಂಘ ಈ ಮಟ್ಟಕ್ಕೆ ಬೆಳೆಯಲು ಅವರೇ ಕಾರಣ. ಕೋಲಾರ ಜಿಲ್ಲೆಯವರು ಎಂಬುದು ನಮ್ಮ ಹೆಮ್ಮೆ. ಅವರ ಮೌಲ್ಯ ಅಳವಡಿಸಿಕೊಳ್ಳಬೇಕು. ಆದರೆ, ಆ ಪ್ರಯತ್ನ ನಡೆಯುತ್ತಿಲ್ಲ. ಪತ್ರಿಕೋದ್ಯಮ ಕ್ಷೀಣಿಸಿದರೆ ಲಕ್ಷಾಂತರ ಕುಟುಂಬಗಳಿಗೆ ತೊಂದರೆ ಆಗಲಿದೆ. ಒಗ್ಗಟ್ಟಾಗಿ ಇರಬೇಕು ಎಂದರು.
ಹಿರಿಯ ಪತ್ರಕರ್ತ ಎಂ.ಜಿ.ಪ್ರಭಾಕರ್ ಮಾತನಾಡಿ, ಸ್ವಾತಂತ್ರ್ಯಪೂರ್ವದಲ್ಲೇ ಅವರು ಸಂಘದ ಕನಸು ಕಂಡವರು, ಆದರ್ಶದ ಮಾರ್ಗ ಹಾಕಿ ಕೊಟ್ಟವರು. ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯೋಣ. ಸಾವದಾನವಾಗಿ ವಿಚಾರ ತಿಳಿದುಕೊಳ್ಳಬೇಕು. ಸಲುಗೆ ಕೊಡದೆ ವೃತ್ತಿ ಜೀವನ ನಡೆಸಬೇಕು. ಅದೇ ಗುಂಡಪ್ಪ ಅವರಿಗೆ ಸಲ್ಲಿಸುವ ಗೌರವ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಎಸ್.ಸಚ್ಚಿದಾನಂದ, ಓಂಕಾರಮೂರ್ತಿ, ಕೆ.ಬಿ.ಜಗದೀಶ್, ಚಾಂದ್ ಪಾಷ, ಕೆ.ಎಸ್.ಸುದರ್ಶನ್, ಕೋಲಾರನ್ಯೂಸ್ ಚಂದ್ರು, ಪುರುಷೋತ್ತಮ, ಸತೀಶ್ ಎನ್, ಸಿ.ಅಮರೇಶ, ಶ್ರೀನಿವಾಸ್ ಉಪಸ್ಥಿತರಿದ್ದರು.