ಶ್ರೀನಿವಾಸಪುರ: ದಸರಾ ನಾಡಿನ ಸಾಂಸ್ಕøತಿಕ ಪರಂಪರೆಯ ಸಂಕೇತ. ದಸರಾ ಸಂಭ್ರಮದಲ್ಲಿ ಸಮಾಜದ ಎಲ್ಲ ಸಮುದಾಯದ ಜನರೂ ಭಾಗವಹಿಸುವುದು ಒಂದು ವಿಶೇಷ ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ಬಾಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ವಿಜಯದಶಮಿ ಪ್ರಯುಕ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಬಿಲ್ಲಿಗೆ ಬಾಣ ಹೂಡಿ ಬಿಟ್ಟ ಬಳಿಕ ಮಾತನಾಡಿದ ಅವರು, ಮಾನವ ಕುಲ ಒಂದೇ ಎಂದು ಸಾರುವುದು ನಿಜವಾದ ಧರ್ಮ. ಸಕಲ ಪ್ರಾಣಿಗಳಲ್ಲಿ ದಯೆ ತೋರುವುದು ಮಾನವ ಧರ್ಮ ಎಂದು ಹೇಳಿದರು.
ದುಷ್ಟ ಶಕ್ತಿ ಅಂತ್ಯ ಕಾಣುವುದು ವಿಜಯದಶಮಿ ಮಹತ್ವ. ಅದು ಪ್ರಾರಂಭದಲ್ಲಿ ಎಷ್ಟೇ ಮೆರೆದರೂ, ಕೊನೆಗೆ ಒಂದು ದಿನ ನಾಶವಾಗುತ್ತದೆ. ಅದರ ವಿವೇಚನಾರಹಿತ ಶಕ್ತಿಯೇ ಅದಕ್ಕೆ ಮುಳುವಾಗುತ್ತದೆ. ಇತಿಹಾಸ ಇದನ್ನು ಸಾರುತ್ತದೆ ಎಂದು ಹೇಳಿದರು.
ನಾಡು ದಸರಾ ಸಡಗರದಲ್ಲಿ ಮೀಯುತ್ತಿದೆ. ಸರ್ವ ಜನಾಂಗದ ಶಾಂತಿಯ ತೋಟದ ಕಲ್ಪನೆ ಸಾಕಾರಗೊಂಡಿದೆ. ಇದು ಕನ್ನಡ ನಾಡಿನ ಹೆಮ್ಮೆ. ಮನುಷ್ಯ ಮಾನವೀಯ ಮೌಲ್ಯ ಬಿಡದೆ ನಡೆಯಬೇಕು. ಎಲ್ಲರೊಂದಿಗೆ ಬೆರೆತು ಬದುಕಬೇಕು. ದುಷ್ಟರಿಂದ ದೂರವಿರಬೇಕು ಎಂಬುದಕ್ಕೆ ಈ ಹಬ್ಬ ಸಾಕ್ಷಿಯಾಗಿದೆ ಎಂದು ಹೇಳಿದರು.
ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗುರುರಾಜರಾವ್, ಹರಿ, ಮುರಳಿ, ವಸುಂದರಾದೇವಿ, ಪ್ರಧಾನ ಅರ್ಚಕ ಸುಬ್ರಮಣಿ, ಗೋಪಿನಾಥರಾವ್ ಇದ್ದರು.