ಕೋಲಾರ: ಜಿಲ್ಲಾ ಕೇಂದ್ರದಲ್ಲಿ ವಿಜಯ ದಶಮಿ ಹಬ್ಬವನ್ನು ಕೋಲಾರಮ್ಮ ದೇವತೆಯ ಜಂಬೂಸವಾರಿ ಸಾರಥ್ಯದಲ್ಲಿ ಗ್ರಾಮ ದೇವತೆಗಳ ಮೆರವಣಿಗೆಯೊಂದಿಗೆ ಸೌಹಾರ್ದತೆಯುತವಾಗಿ ಶಾಂತಿಯಿಂದ ಆಚರಿಸಲು ದಸರಾ ಸಮಿತಿ ಗುರಿ ಹೊಂದಿದೆ ಎಂದು ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ತಿಳಿಸಿದರು.
ನಗರದ ಶಾರದಾ ಚಿತ್ರಮಂದಿರದ ಹಿಂಭಾಗದ ಕೃಷ್ಣ ರೆಸಿಡೆನ್ಸಿ ಮುಂಭಾಗದ ವೇದಿಕೆಯಲ್ಲಿ ಗ್ರಾಮೀಣ ದಸರಾ ಖ್ಯಾತಿಯ ಕೊಂಡರಾಜನಹಳ್ಳಿ ಬನ್ನಿವೃಕ್ಷ್ಯ ಪೂಜೆಯಲ್ಲಿ ಪಾಲ್ಗೊಂಡ ನಗರದ ವಿವಿಧ ಬಡಾವಣೆಗಳ ದೇವರ ಉತ್ಸವ ಮೂರ್ತಿಗಳಿಗೆ ಸ್ವಾಗತ ಕೋರಿ, ದೇವಾಲಯದ ಮುಖ್ಯಸ್ಥರನ್ನು ಸನ್ಮಾನಿಸುವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.
ಕೋಲಾರದಲ್ಲಿ ಯಾವುದೇ ಹಬ್ಬ ಆಚರಿಸುವಾಗ ವಿವಾದ ಅಥವಾ ಭಯದ ವಾತಾವರಣ ಇರುತ್ತಿತ್ತು. ಆದರೆ ಇದೀಗ ದಸರಾ ಸಮಿತಿ ರಚಿಸಿ ಪಕ್ಷಾತೀತವಾಗಿ, ಜಾತ್ಯತೀತವಾಗಿ ಹಾಗೂ ಸೌರ್ಹಾದಯುತವಾಗಿ ನಾಡಹಬ್ಬವನ್ನು ಇಂದು ಆಚರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿಯಾಡಲಾಗಿದೆ, ಇದು ಮುಂದಿನ ವರ್ಷಗಳಲ್ಲಿ ದೊಡ್ಡ ಮಟ್ಟದ ನಾಡಹಬ್ಬದ ಉತ್ಸವಕ್ಕೆ ನಾಂದಿಯಾಡಲಿದೆ ಎಂದರು.
ದಸರಾ ಸಮಿತಿ ಅಧ್ಯಕ್ಷ ಕೆ.ಆರ್.ಧನರಾಜ್ ಮಾತನಾಡಿ, ದಸರಾ ಸಮಿತಿ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳಲು ತಿಳಿಸಿದಾಗ ಆಲೋಚಿಸಿದ್ದೆ ಆದರೆ ಈ ಕಾರ್ಯಕ್ರಮ ನೋಡಿದ ನಂತರ ಒಳ್ಳೆಯ ಕೆಲಸ ಮಾಡಿದೆ ಎಂಬ ಖುಷಿ ಇದೆ, ದಸರಾ ಸಮಿತಿವತಿಯಿಂದ ಬನ್ನಿಪೂಜೆ ಮೆರವಣಿಗೆಯಲ್ಲಿ ಪಾಲ್ಗೊಂಡ ಉತ್ಸವ ಮೂರ್ತಿಗಳ ದೇವಾಲಯಗಳ ಆಡಳಿತ ಮಂಡಳಿಯ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸುವ ಮೂಲಕ ಸಣ್ಣಪ್ರಮಾಣದಲ್ಲಿ ದಸರಾ ಮೆರವಣಿಗೆಗೆ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ಅದ್ದೂರಿಯಾಗಿ ನಡೆಸಲು ಉತ್ತಮ ವೇದಿಕೆ ಕಲ್ಪಿಸಿಕೊಟ್ಟಂತಾಗಿದೆ ಎಂದರು.
ನಗರಸಭಾ ಸದಸ್ಯ ಸಾಧಿಕ್ ಪಾಷಾ ಮಾತನಾಡಿ, ತಾನು ಚಿಕ್ಕಂದಿನಲ್ಲಿದ್ದಾಗ ದೇವರ ಮೆರವಣಿಗೆಗಳು ಬೀದಿಗೆ ಬಂದರೆ ನೋಡಿ ಖುಷಿ ಪಟ್ಟಿದ್ದುಂಟು, ಅಂತಹ ಅದೇ ವೈಭವ ಇಂದು ಕಾಣುತ್ತಿದ್ದೇನೆ, ಇಂತಹ ಸೌಹಾರ್ದತೆಯ ಕಾರ್ಯಕ್ರಮಕ್ಕೆ ಮುಂದಿನ ದಿನಗಳಲ್ಲಿ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೊಂಡರಾಜನಹಳ್ಳಿಯ ಬನ್ನಿಮಂಟಪ ಪೂಜೆಗೆ ಆಗಮಿಸುವ ನಗರದ ಎಲ್ಲ ದೇವಾಲಯಗಳ ಉತ್ಸವ ಮೂರ್ತಿಗಳ ಮೆರವಣಿಗೆ ನೇತೃತ್ವ ವಹಿಸಿದ ಗಣ್ಯರನ್ನು, ಪೊಲೀಸ್ ಬಂದೋಬಸ್ತ್ ಒದಗಿಸಿದ ವೃತ್ತ ನಿರೀಕ್ಷಕ ಹರೀಶ್, ಉಪನಿರೀಕ್ಷಕ ಅಣ್ಣಯ್ಯರನ್ನು ಸನ್ಮಾನಿಸಲಾಯಿತು.
ಐಟಿಐ ಶಿವಕುಮಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ಮುಖಂಡರಾದ ಮು.ರಾಘವೇಂದ್ರ, ಸಮಿತಿ ಸದಸ್ಯರಾದ ಆರ್.ವೆಂಕಟೇಶ್, ಆರ್.ಕಿಶೋರ್‍ಕುಮಾರ್, ಎನ್.ಮುನಿವೆಂಕಟಯಾದವ್, ಎನ್.ಹರೀಶ್‍ಬಾಬು, ಜಯಕರ್ನಾಟಕದ ತ್ಯಾಗರಾಜ್, ಚಿತ್ರನಟ ಶಬರೀಷ್ ಶೆಟ್ಟಿ ಮತ್ತಿತರರಿದ್ದರು.