ವರದಿ : ಕೆ.ಜಿ.ವೈದ್ಯ,ಕುಂದಾಪುರ
ಕುಂದಾಪುರ : ಧರ್ಮ ಮತ್ತು ಸಂಸ್ಕೃತಿಗಳಿಗೆ ಅವಿನಾಭಾವ ಸಂಬಂಧವಿದೆ. ಧರ್ಮದ ತಳಹದಿಯ ಮೇಲೆ ನಮ್ಮ ಉದಾತ್ತ ಸಂಸ್ಕೃತಿ ಬೆಳೆದುಬಂದಿದೆ. ನಮ್ಮಲ್ಲಿನ ವಿಭಿನ್ನ ಕಲೆಗಳಾದ ಸಂಗೀತ, ನಾಟ್ಯ, ಯಕ್ಷಗಾನ ಇತ್ಯಾದಿಗಳು ಸಂಸ್ಕೃತಿಯ ಪ್ರತೀಕ. ಇತರ ಕಲೆಗಳಂತೆ ಯಕ್ಷಗಾನ ಕಲಿಯಲು ಮೊದಲು ನಿರ್ದಿಷ್ಟ ತರಗತಿಗಳಿರಲಿಲ್ಲ. ಆದರೆ ಈಗ ಯಕ್ಷಗಾನ ಕಲೆಯನ್ನು ಸುಲಭವಾಗಿ ಕಲಿಯುವುದು ಸಾಧ್ಯ. ಶಾಲಾ ಪಠ್ಯದಲ್ಲೂ ಯಕ್ಷಗಾನದ ವಿಷಯ ಅಳವಡಿಸಲಾಗಿದ್ದು, ಇದರಿಂದ ಮಕ್ಕಳು ಪೌರಾಣಿಕ ಜ್ಞಾನ ಹೊಂದಲು ಸಾಧ್ಯವಾಗಿದೆ ಎಂದು ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಾಲಯದ ಮಾಜಿ ಆಡಳಿತ ಧರ್ಮದರ್ಶಿ ಮಾರ್ಕೊಡು ಗೋಪಾಲಕೃಷ್ಣ ಶೆಟ್ಟಿ ಹೇಳಿದರು.
ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಕಲಾ ಬಳಗದ ಆಶ್ರಯದಲ್ಲಿ ನಡೆಸಲಾಗುತ್ತಿರುವ ಏಳನೇ ವರ್ಷದ ಯಕ್ಷಗಾನ ತರಬೇತಿ ತರಗತಿಗಳನ್ನು ಉದ್ಘಾಟಿಸಿ ಅವರು ಶುಭ ಹಾರೈಸಿದರು.
ಯಕ್ಷಗಾನ ಗುರು ಕಡ್ಲೆ ಗಣಪತಿ ಹೆಗಡೆ ಮಾತನಾಡಿ, ಯಕ್ಷಗಾನ ಕುಣಿತದ ಹೆಜ್ಜೆಗಳು, ತಾಳ ಇತ್ಯಾದಿ ತರಬೇತಿಯ ಪ್ರಾರಂಭಿಕ ಹಂತಗಳನ್ನು ವಿವರಿಸಿದರು. ಪ್ರತಿ ಆದಿತ್ಯವಾರ ಮಧ್ಯಾನ್ಹ 3.30 ರಿಂದ 5. 30 ರವರೆಗೆ ಶ್ರೀ ಕೋಟಿಲಿಂಗೇಶ್ವರ ದೇವಳ ವಠಾರದಲ್ಲಿ ತರಗತಿಗಳು ನಡೆಯುತ್ತವೆ ಎಂದರು.
ಜಿ ಎಸ್ ಬಿ ಸಮುದಾಯದ ಮುಂದಾಳು, ಯಕ್ಷಗಾನ ಕಲಾಪೋಷಕ ರಂಗನಾಥ ಭಟ್, ಬಿ. ಎಂ. ಗುರುರಾಜ ರಾವ್, ಹಂದಕುಂದ ಅಶೋಕ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು ಶುಭ ಹಾರೈಸಿದರು.
ಕಲಾ ಬಳಗದ ಅಧ್ಯಕ್ಷ, ಚಲನ ಚಿತ್ರ ನಿರ್ದೇಶಕ ಕೋಟೇಶ್ವರ ಶ್ರೀಧರ ಉಡುಪ ಸಭಾಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷ ಡಾ. ರಾಜೇಶ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ನಾರಾಯಣ ಭಂಡಾರಿ ಸ್ವಾಗತಿಸಿದರು. ಕೆ. ಜಿ. ವೈದ್ಯ ಕಾರ್ಯಕ್ರಮ ನಿರೂಪಿಸಿ, ಯೋಗೀಶ್ ಆಚಾರ್ಯ ವಂದಿಸಿದರು.