ಅತ್ತೂರು ಸಂತ ಲಾರೆನ್ಸ್ ಬಸಿಲಿಕದ  ವಾರ್ಷಿಕ ಮಹೋತ್ಸವಕ್ಕೆ ಚಾಲನೆ

JANANUDI.COM NETWORK

ಕಾರ್ಕಳ, ಅತ್ತೂರ್: ವಾಡಿಕೆಯಂತೆ ಜನವರಿ ಕೊನೆಯ ವಾರದಲ್ಲಿ ನಡೆಯಬೇಕಾಗಿದ್ದ ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಮಹೋತ್ಸವವು ಕೋವಿಡ್ ಸೋಂಕಿನ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಇದೀಗ ಫೆಬ್ರವರಿ 20 ರಂದು ಭಾನುವಾರ ವಿಜೃಂಭಣೆಯಿಂದ ಆರಂಭಗೊಂಡಿತು.ಅತ್ತೂರು ಮಹೋತ್ಸವವು ಐದು ದಿನಗಳ ಕಾಲ 20 ರಿಂದ 24 ರವೆರೆಗೆ ನಡೆಯಲಿದೆ.
ಫೆಬ್ರವರಿ 20 ರಂದು ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಮಹೋತ್ಸವಕ್ಕೆ ಚಾಲನೆ ದೊರೆಯಿತು. ಪುಣ್ಯಕ್ಷೇತ್ರದ ಮುಖ್ಯ ಗುರುಗಳಾದ ವಂದನೀಯ ಅಲ್ಬನ್ ಡಿ’ಸೋಜಾರವರು ಧ್ವಜಾರೋಹಣವನ್ನು ನಡೆಸಿ ಸಂತ ಲಾರೆನ್ಸರ ಪವಿತ್ರ ಅವಶೇಷವನ್ನು ಮೆರವಣ ಗೆಯಲ್ಲಿ ಕೊಂಡೊಯ್ದು ಸಾರ್ವಜನಿಕರ ದರ್ಶನಕ್ಕಾಗಿ ಮಂಟಪದಲ್ಲಿ ಪ್ರತಿಷ್ಠಾಪಿಸಿದರು.
ದಿನದ ಪ್ರಮುಖ ಸಾಂಭ್ರಮಿಕ ಬಲಿಪೂಜೆಗಳನ್ನು ಶಿವಮೊಗ್ಗದ ಧರ್ಮಾಧ್ಯಕ್ಷ ಪರಮಪೂಜ್ಯ ಡಾ| ಫ್ರಾನ್ಸಿಸ್ ಸೆರಾವೊ ಮತ್ತು ಮಂಗಳೂರಿನ ಧರ್ಮಾಧ್ಯಕ್ಷ ಪರಮಪೂಜ್ಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾರವರು ನೆರವೇರಿಸಿ ಪ್ರಬೋಧನೆ ನೀಡಿದರು. ಮಹೋತ್ಸವದ ಮೊದಲ ದಿನ ಮಕ್ಕಳಿಗಾಗಿ ಮೀಸಲಿಡಲಾಗಿತ್ತು. ಮಕ್ಕಳಿಗಾಗಿ ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಯಿತು. ಅಂತೆಯೇ ತಮ್ಮ ತಮ್ಮ ಪುಟಾಣ ಮಕ್ಕಳೊಂದಿಗೆ ನೂರಾರು ಮಾತೆಯಂದಿರು ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.
ದಿನದ ಇತರ ಬಲಿಪೂಜೆಗಳನ್ನು ವಂದನೀಯ ರೊಯ್ ಡಿ’ಸೋಜಾ, ಕಲ್ಮಾಡಿ; ವಂದನೀಯ ಜೇಸನ್ ಪಿಂಟೊ, ಶಿರ್ವಾ ಮತ್ತು ವಂದನೀಯ ಅನಿಲ್ ಕಿರಣ್, ಮುಲ್ಕಿ ಇವರು ನೆರವೇರಿಸಿದರು. ದಿನದ ಏಕೈಕ ಕನ್ನಡ ಬಲಿಪೂಜೆಯನ್ನು ಚಿಕ್ಕಮಗಳೂರಿನ ವಂದನೀಯ ಜಾರ್ಜ್ ಮೊನಿಸ್‍ರವರು ನೆರವೇರಿಸಿದರು.
ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿ ದಿನದ ಅಂತಿಮ ಬಲಿಪೂಜೆಯನ್ನು ಸಂಜೆ 7 ಗಂಟೆಗೆ ನೆರವೇರಿಸಿ ಮಹೋತ್ಸವದ ಪ್ರಥಮ ದಿನದ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಲಾಯಿತು.
ಮಹೋತ್ಸವದ ಮುಂದಿನ ನಾಲ್ಕು ದಿನಗಳಲ್ಲಿ (ಸೋಮವಾರದಿಂದ ಗುರುವಾರ) ಬೆಳಿಗ್ಗೆ 8,10,12 ಹಾಗೂ ಮಧ್ಯಾಹ್ನ 2, 4 ಮತ್ತು 7 ಗಂಟೆಗೆ ಬಲಿಪೂಜೆಗಳು ನೆರವೇರಲಿವೆ.