

ಕುಂದಾಪುರ; ಭಾರತೀಯ ಇತಿಹಾಸ ತಜ್ಞ, ಶಿಕ್ಷಣ ತಜ್ಞ, ದೆಹಲಿಯ ಕೇಶವನ್ ವೆಳುತ್ತಾಟ್ ಅವರನ್ನು ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನಲ್ಲಿ ಫೆ. ೨೧ ರಿಂದ ಮೂರು ದಿನಗಳ ಕಾಲ ನಡೆಯುವ “ಕರ್ನಾಟಕ ಇತಿಹಾಸ ಪರಿಷತ್ತು ೩೫ನೇ ವಾರ್ಷಿಕ ಮಹಾ ಅಧಿವೇಶನ”ದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಕೇರಳ ಮೂಲದ ಇವರು, ಮಧ್ಯಯುಗದ ದಕ್ಷಿಣ ಭಾರತೀಯ ಇತಿಹಾಸದಲ್ಲಿ ವಿಶೇಷ ಪರಿಣಿತರು. ಶಾಸನ ತಜ್ಞರು. ಸಂಸ್ಕೃತ, ತಮಿಳು, ಕನ್ನಡ, ಮಲೆಯಾಳಂ ಭಾಷೆ ಅರಿತಿರುವ ಇವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಆನಂತರ ದೆಹಲಿ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದರು. ಇವರು ದೇಶದ ಹಲವು ವಿಶ್ವ ವಿದ್ಯಾನಿಲಯಗಳಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿದ್ದಾರೆ. ಹಲವು ಗ್ರಂಥಗಳನ್ನು ಬರೆದಿದ್ದಾರೆ. ಕ್ಯಾಲಿಕಟ್ ವಿ.ವಿ.ಯಿಂದ ಸ್ನಾತ್ತಕೋತ್ತರ ಪದವಿ ಹಾಗೂ ಡಾಕ್ಟರೇಟ್, ಜವಹರಲಾಲ್ ನೆಹರು ವಿ.ವಿ. ಯಿಂದ ಎಂ.ಫಿಲ್. ಪದವಿ ಪಡೆದ ಇವರು ದೇಶದ ಶ್ರೇಷ್ಠ ಇತಿಹಾಸ ಹಾಗೂ ಶಿಕ್ಷಣ ತಜ್ಞ, ಶಾಸನತಜ್ಞರಲ್ಲಿ ಪ್ರಮುಖರಾಗಿದ್ದಾರೆ.