JANANUDI.COM NETWORK
ಕುಂದಾಪುರ,ಆ.13: ಅನುಪಮಾ ಪ್ರಸಾದ್ ಅವರ ‘ಪಕ್ಕಿಹಳ್ಳದ ಹಾದಿಗುಂಟ’ ಕಾದಂಬರಿಯು ಮೂರು ತಲೆಮಾರಿನ ಕಥೆಯನ್ನು ಹೇಳುತ್ತಾ 20ನೇ ಶತಮಾನದ ನಮ್ಮ ಭಾರತದ ಚಿತ್ರಣವನ್ನು ಸೂಕ್ಷ್ಮವಾಗಿ ಬಿತ್ತರಿಸುತ್ತದೆ ಎಂದು ಹಿರಿಯ ಲೇಖಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಹೇಳಿದರು.
ಅವರು ಆಗಸ್ಟ್ 13ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
‘ಪಕ್ಕಿಹಳ್ಳದ ಹಾದಿಗುಂಟ’ಕಾದಂಬರಿಯು ಹಲವು ಕಾದಂಬರಿಕಾರರ ಕಾದಂಬರಿಗಳಿಗೆ ಹೋಲಿಸಬಹುದು ಆದರೆ ಮೂರು ತಲೆಮಾರಿನ ಸಂಗತಿಗಳನ್ನು ನೈಜತೆಗೆ ಹತ್ತಿರವಾಗಿ ಬಿತ್ತರಿಸುತ್ತದೆ ಎಂಬುದು ಮನಸಿಗೆ ಸ್ಪಷ್ಟವಾಗಿ ಕಾಣುತ್ತದೆ. ಒಂದು ವಿಚಿತ್ರ ಸಂವೇದನೆಯೊಂದಿಗೆ ಕಾದಂಂಬರಿ ಓದಿಸಿಕೊಂಡು ಹೋಗುತ್ತದೆ. ಅಲ್ಲಿನ ಪಾತ್ರಗಳು ಮತ್ತು ಹಲವು ದಷ್ಟಿಕೋನಗಳಲ್ಲಿ ಕಥೆಯನ್ನು ಹೇಳುವ ಶೈಲಿ ಈ ಕಾದಂಬರಿಯಲ್ಲಿದೆ. ಹಾಗೆಯೇ ಈ ಕಾದಂಬರಿಯಲ್ಲಿ ಯಾವ ಪಾತ್ರವು ಮುಖ್ಯವಲ್ಲ. ಆದರೆ ಎಲ್ಲಾ ಪಾತ್ರಗಳು ಅತ್ಯಂತ ಮುಖ್ಯವೆನಿಸುತ್ತದೆ. ಜೀವನದ ಪರಿ ಹಳ್ಳ ನದಿಯಾಗಿ ಸಮುದ್ರ ಸೇರುವ ಪರಿ ಹಾದಿಗುಂಟ ಮನುಷ್ಯನ ಅನೇಕ ಸಂಚಲನಗಳನ್ನು ಹೊರಗೆಡವುತ್ತದೆ. ಗತಕಾಲವನ್ನು ಹೇಳುವುದು ಕಾಲದ ನೀರಿನಲ್ಲಿ ಸದ್ದಿಲ್ಲದೇ ಜಯಿಸಿದಂತೆ. ಕಾದಂಬರಿಯ ಕೊನೆಯ ಭಾಗದಲ್ಲಿ ಮನುಷ್ಯ ಜೀವನದ ಜೀವಂತಿಕೆ ಇರುವುದು ನದಿಗಳ ಜೀವಸೆಲೆಗಳಲ್ಲಿ ಎಂಬುದನ್ನು ಕಾದಂಬರಿ ಹೇಳುತ್ತದೆ. ಪುಟ್ಟ ಗ್ರಾಮದಲ್ಲಿನ ಎಂಡೋಸಲ್ಫಾನ್ ಜೀವನವನ್ನು ದುಃಖಕ್ಕೆ ವಿಷಕ್ಕೆ ತಳ್ಳಿದಂತೆ ಭಾರತದ ಬದುಕು ವಿಷಮಯವಾಗುತ್ತಿದೆ ಎನ್ನುವುದರ ಮೂಲಕ ಭಾರತದ ಚಿತ್ರಣವನ್ನು ಕಟ್ಟಿಕೊಡುತ್ತದೆ ಎಂದು ಹೇಳಿದರು.
ಇಲ್ಲಿ ಭಾಷೆಯ ಬಳಕೆಯು ಸಹ ವಿಶಿಷ್ಟವಾಗಿದೆ. ಅಲ್ಲಿನ ಸ್ಥಳಿಯ ಭಾಷೆಯಿಂದ ಶಿಷ್ಟ ಕನ್ನಡದವರೆಗೆ ಭಾಷೆಯನ್ನು ಮತ್ತು ಅದರ ಹಿರಿಮೆಯನ್ನು ಈ ಕಾದಂಬರಿ ಪರಿಚಯಿಸುತ್ತದೆ. ಸುಮಾರು 200 ಹೊಸ ಶಬ್ದಗಳು ದೊರಕಿದವು. ಇಲ್ಲಿ ಮೂರು ತಲೆಮಾರುಗಳ ಸಾಂಗತ್ಯ ಕಾಣುತ್ತದೆ ಹೇಗೆಂದರೆ ಮೂರು ತಲೆಮಾರಿನ ಭಾಷೆ ಜೀವನ, ನಿಸರ್ಗ ಹೀಗೆ ಪ್ರತಿಯೊಂದು ಅಂಶಗಳ ಬದಲಾವಣೆಯನ್ನು ದಾರಿ ದಾರಿಗೆ ಪುಟ್ಟ ಪಕ್ಕಿಹಳ್ಳದಿಂದ ದೂರದ ಗಂಗಾನದಿಯವರೆಗಿನ ಕಾಲದ ಬದಲಾವಣೆಯನ್ನು ಓದುಗನ ಹತ್ತಿರಕ್ಕೆ ತರುತ್ತದೆ. ಕಾದಂಬರಿಯಿಂದ ಸತ್ಯದರ್ಶನವಾಗುತ್ತದೆ ಆದರೆ ಕಾದಂಬರಿಯನ್ನು ಇನ್ನೂ ಸಹ ವಿಸ್ತರಿಸಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅನುಪಮಾ ಪ್ರಸಾದ್ ಅವರು ಮಾತನಾಡಿ ಸಾಹಿತ್ಯ ಅಂದರೆ ಅದೊಂದು ಬೆಳಕು. ಸಾಹಿತ್ಯದಿಂದ ಸಣ್ಣ ಬತ್ತಿಯನ್ನು ಹಚ್ಚಬಹುದು ಕಿಡಿಯಿಂದ ಕಾಳ್ಗಿಚ್ಚನ್ನು ಹಚ್ಚಬಹುದು ಸಾಹಿತ್ಯ ಅಷ್ಟೊಂದು ಪರಿಣಾಮವನ್ನು ಬೀರುತ್ತದೆ. ಸಾಹಿತ್ಯ ನನಗೆ ಉಸಿರು ಕೊಟ್ಟಿದೆ ಒಟ್ಟಿನಲ್ಲಿ ಸಾಹಿತ್ಯದ ಬರವಣಿಗೆ ನನಗೆ ಎಲ್ಲವನ್ನೂ ಕೊಟ್ಟಿದೆ ಎಂದು ಹೇಳಿದರು.
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಅವರು ಮಾತನಾಡಿ ಪ್ರತಿಯೊಬ್ಬರು ಕಾದಂಬರಿಯನ್ನು ಓದಬೇಕು. ಇಂದಿನ ವಿದ್ಯಾರ್ಥಿಗಳು ಸಾಹಿತ್ಯವನ್ನು ಓದುವಂತಹ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಶ್ರೀ ಕೆ.ದೇವದಾಸ್ ಕಾಮತ್ ವಹಿಸಿದ್ದರು ಮತ್ತುಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಡಾ.ಪ್ರಸಾದ್ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಲೋನಾ ಉಪಸ್ಥಿತರಿದ್ದರು.
ಹಿರಿಯ ಲೇಖಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ, ಲೇಖಕ ದೇವುಪತ್ತಾರ್ ಮತ್ತು ಲೇಖಕ ನರೇಂದ್ರ ರೈ ದೇರ್ಲ ಅವರು ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯ ನಿರ್ಣಾಯಕರಾಗಿದ್ದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಂಯೋಜಕಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ.ರೇಖಾ ಬನ್ನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ವಂದಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ರೋಹಿಣಿ ಹೆಚ್.ಬಿ ಕಾರ್ಯಕ್ರಮ ನಿರ್ವಹಿಸಿದರು.