ವರದಿ : ಮಝರ್, ಕುಂದಾಪುರ
ಕುಂದಾಪುರ : ಉಡುಪಿಯಲ್ಲಿ ಜೆ ಎಮ್ ಜೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಿದಜಾರ್ಜ್ ಡಿ. ಅಲ್ಮೇಡಾ ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು (26.05.2021) ಬುಧವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾದರು. ಮೂಲತಃ ಕುಂದಾಪುರ ಪಡುಕೋಣೆಯವರಾಗಿದ್ದ ಇವರು ತ್ರಾಸಿಯಲ್ಲಿ ನೆಲೆಸಿ 30 ವರ್ಷಗಳ ಕಾಲ ಕುವೈಟಿನ ದರ್ ಅಲ್ ಸಫಿ ಆಸ್ಪತ್ರೆಯಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ದುಡಿದಿದ್ದರು. ಈ ಸಂದರ್ಭದಲ್ಲಿ ನೂರಾರು ಯುವಕರನ್ನು ವಿದೇಶಕ್ಕೆ ಕರೆದೊಯ್ದು ಉದ್ಯೋಗ ನೀಡಿದ್ದರು. ಜಾರ್ಜ್ ಡಿ.ಅಲ್ಮೇಡಾ ಅವರು ವೃತಿಯಲ್ಲಿ ತೋರಿದ ಶ್ರೇಷ್ಠ ವೈಯುಕ್ತಿಕ ಸಾಧನೆ ಹಾಗೂರಾಷ್ಟ್ರದ ಅಭಿವೃದ್ಧಿ ಗೆ ನೀಡಿದ ಕೊಡುಗೆಗಾಗಿ ಅಮೆರಿಕಾದ ಅಂತಾರಾಷ್ಟ್ರೀಯ ತಮಿಳು ಯೂನಿವರ್ಸಿಟಿ ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದ ಇವರು, ಗ್ಲೋಬಲ್ ಎಕಾನಮಿಕ್ಸ್ ಪ್ರೋಗ್ರೆಸ್ &ರಿಸರ್ಚ್ ಎಸೋಸಿಯೇಷನ್ ವತಿಯಿಂದ ಮದರ್ ಥೆರೆಸಾ ಎಕ್ಸ ಲೆನ್ಸ್ ಅವಾರ್ಡ್ 2010 ಪ್ರಶಸ್ತಿ ಪುರಸ್ಕೃತ ರಾಗಿದ್ದರು..ರಾಷ್ಟ್ರಮಟ್ಟದಲ್ಲಿ 100 ಮಂದಿ ಸಾಧಕರಿಗೆ ಮಾತ್ರ ಈ ಪ್ರಶಸ್ತಿ ನೀಡಲಾಗಿದ್ದು ಕರ್ನಾಟಕದಲ್ಲಿ ಜಾರ್ಜ್ ಡಿ. ಅಲ್ಮೇಡಾ ಮಾತ್ರ ಈ ಪ್ರಶಸ್ತಿ ಪಡೆದಿದ್ದಾರೆ. ಇರಾಕ್ ಕುವೈಟಿನ ಮೇಲೆ ಯುದ್ಧ ಸಾರಿದ ಸಮಯದಲ್ಲಿ ವಿಮಾನ ಹಾಗೂ ರಸ್ತೆ ಮೂಲಕ ಹಲವಾರು ಭಾರತೀಯರನ್ನು ಸ್ವದೇಶಕ್ಕೆ ಕರೆ ತಂದ ಹೆಗ್ಗಳಿಕೆಯೂ ಇವರದ್ದಾಗಿದೆ. ತದ ನಂತರ ಭಾರತದಲ್ಲಿಯೇ ನೆಲೆಸಿದ ಇವರು.90ರ ದಶಕಅಂತ್ಯದಲ್ಲಿ ಉಡುಪಿಯಲ್ಲಿ ಜೆಎಂಜೆ ಎಂಬ ಹೆಸರಿನ ಅತ್ಯಾಧುನಿಕ ಆಸ್ಪತ್ರೆ ಸ್ಥಾಪಿಸಿ ಅದರ ಆಡಳಿತ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನಲ್ಲಿ ಜೆಎಂಜೆ ವಸತಿ ಸಮುಚ್ಚಯ ಮತ್ತು ವಾಣಿಜ್ಯ ಸಂಕೀರ್ಣ ಗಳನ್ನು ನಿರ್ಮಿಸಿದ್ದರು. ಉತ್ತಮ ವಾಗ್ಮಿ,ಚಿಂತಕರಾಗಿದ್ದ ಇವರು ತ್ರಾಸಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ,ಚರ್ಚ್ ನ್ ಆಡಳಿತ ಮಂಡಳಿಯ ಪ್ರಮುಖರಾಗಿ ಸೇವೆ ಸಲ್ಲಿಸಿದ್ದರು.ಇಬ್ಬರು ಗಂಡು ಮಕ್ಕಳ ಸಹಿತ ಅಪಾರ ಅಭಿಮಾನಿಗಳನ್ನು ಇವರು ಅಗಲಿದ್ದಾರೆ ಕೋವಿಡ್ ಮಾರ್ಗ ಸೂಚಿಯಂತೆ ಇವರ ಅಂತ್ಯ ಸಂಸ್ಕಾರವು ಗುರುವಾರ (27.06.2021) ರಂದು ತ್ರಾಸಿ ಚರ್ಚ್ ನಲ್ಲಿ ಜರಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.