ವರದಿ ; ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ : ಡಾ | ಬಿ.ಆರ್ . ಅಂಬೇಡ್ಕರ್ ಅವರು ಬರೆದ ಸಂವಿಧಾನ ಮತ್ತು ಅವರ ಸಾಮಾಜಿಕ ಚಿಂತನೆ ಪ್ರಸ್ತುತ ಸಮಾಜದಲ್ಲಿ ಆಳ್ವಿಕೆಗೆ ಬಂದಿದೆ . ದೀನ ದಲಿತರಿಗೆ ಶಿಕ್ಷಣವನ್ನು ತಲುಪುವಂತೆ ಮಾಡಲು ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಅವರು ಒತ್ತು ನೀಡಿದರು . ಅಂಬೇಡ್ಕರ್ ಅವರು ದೇಶದ ಸಂವಿಧಾನಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಶ್ರೀನಿವಾಸಗೌಡ ಅವರು ತಿಳಿಸಿದರು . ಇಂದು ನಗರದ ಶ್ರೀ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಸಮಾಜ ಕಲ್ಯಾಣ ಇಲಾಖೆ ಹಾಗೂ ಡಾ || ಬಿ.ಆರ್ . ಅಂಬೇಡ್ಕರ್ ಅಭಿವೃದ್ಧಿ ನಿಗಮ ಇವರ ಸಂಯುಕ್ತಾಶ್ರಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್ . ಅಂಬೇಡ್ಕರ್ ರವರ 130 ನೇ ಜನ್ಮ ದಿನಾಚರಣೆಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು . ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ದೀನದಲಿತರಿಗಾಗಿ ಹೋರಾಡಿದರು ಮತ್ತು ಲಿಂಗ ಸಮಾನತೆಯನ್ನು ಬಲವಾಗಿ ನಂಬಿದ್ದರು . ಅವರು ಶಿಕ್ಷಣದ ಮೂಲಕ ಮಹಿಳೆಯ ಸಬಲೀಕರಣಕ್ಕಾಗಿ ಒತ್ತಾಯಿಸಿದರು . ಸಮಾಜದ ಎಲ್ಲಾ ಜನರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾನತೆಯನ್ನು ಖಾತ್ರಿ ಪಡಿಸಿಕೊಳ್ಳಲು ಮತ್ತು ಜಾತಿ ಅಡೆತಡೆಗಳನ್ನು ನಿವಾರಿಸಲು ಶ್ರಮಿಸಿದರು ಎಂದು ತಿಳಿಸಿದರು . ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ ಎಲ್ಲರೂ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಉತ್ತಮ ಜೀವನ ನಡೆಸಬೇಕು . ಇಡೀ ಪ್ರಪಂಚ ಮೆಚ್ಚುವಂತಹ ಸಂವಿಧಾನವನ್ನು ಭಾರತಕ್ಕೆ ಕೊಡುಗೆಯಾಗಿ ಅಂಬೇಡ್ಕರ್ ಅವರು ನೀಡಿದ್ದಾರೆ . ಸಂವಿಧಾನದ ಆಶಯದಂತೆ ಎಲ್ಲಾ ಜನಾಂಗದವರು ಜೊತೆ ಗೂಡಿ ಸಾಂವಿಧಾನಿಕ ಮೌಲ್ಯಗಳಾದ ಸ್ವಾತಂತ್ರ್ಯ , ಸಮಾನತೆ , ಭ್ರಾತೃತ್ವ ಮನೋಭಾವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು . ಸಂವಿಧಾನವೇ ನಮ್ಮೆಲ್ಲರ ಧರ್ಮವಾಗಬೇಕು ಹಾಗೂ ಅದರ ಚೌಕಟ್ಟಿನಲ್ಲಿಯೇ ಸಾಗಬೇಕೆಂದರು . ಕೋಲಾರ ಜಿಲ್ಲೆ ದಲಿತ ಸಂಘಟನೆಗಳ ತವರೂರಾಗಿದ್ದು , ಜಿಲ್ಲೆಯ ಸಮಸ್ಯೆಗಳನ್ನು ಸಂಘಟಿತರಾಗಿ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು . ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು ಅವರು ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸರ್ಕಾರದಿಂದ ಸಿಗುವ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಮತ್ತು ಎಲ್ಲರೂ ಸಮಾನತೆಯಿಂದ ಬಾಳಬೇಕು ಎಂದು ಹೇಳಿದರು . ಜಿಲ್ಲಾಧಿಕಾರಿಗಳಾದ ಡಾ | ಆರ್.ಸೆಲ್ವಮಣಿ ಅವರು ಮಾತನಾಡಿ ಭಾರತ ಸ್ವಾತಂತ್ರ್ಯ ಪಡೆಯಲು ಅನೇಕ ಹೋರಾಟಗಳು , ತ್ಯಾಗ , ಬಲಿದಾನ ನಡೆದಿವೆ . ಸ್ವಾತಂತ್ರ್ಯ ಬಂದ ನಂತರ ಒಗ್ಗಟ್ಟಿನಿಂದ ಒಕ್ಕೂಟ ವ್ಯವಸ್ಥೆ ಮೂಡಿ ಬರಲು ಹಾಗೂ ಜಾಗತಿಕವಾಗಿ ಭಾರತ ದೇಶ ಉತ್ತುಂಗಕ್ಕೆ ಏರಲು ಸಂವಿಧಾನ ಮೂಲ ಕಾರಣ . ಸಮಾಜ ಸುಧಾರಕ , ಶಿಕ್ಷಣ ತಜ್ಞ ಅರ್ಥಶಾಸ್ತ್ರಜ್ಞ ರಾಜಕಾರಣಿ ಮತ್ತು ಕಾನೂನು ತಜ್ಞರಾಗಿ ದೇಶದ ಯುವಕರಿಗೆ ಮಾದರಿ ಮತ್ತು ನಿಜವಾದ ಸ್ಫೂರ್ತಿಯಾದ ಅಂಬೇಡ್ಕರ್ ಅವರ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಪೂರಕವಾಗಬೇಕೆಂದು ಕರೆ ನೀಡಿದರು . ಪ್ರೊ || ನಾರಾಯಣಸ್ವಾಮಿ ಅವರು ಡಾ || ಬಿ.ಆರ್ . ಅಂಬೇಡ್ಕರ್ ಅವರ ಕುರಿತು ಉಪನ್ಯಾಸ ನೀಡಿ , ಈ ದೇಶದ ಎಲ್ಲಾ ಜನಾಂಗದವರ ಶ್ರೇಯೋಭಿವೃದ್ಧಿಗಾಗಿ ಅಂಬೇಡ್ಕರ್ ಅವರು ಶ್ರಮಿಸಿದರು . ಸಂವಿಧಾನ ಪೂಜಿಸುವಂತಹದಲ್ಲ , ಅನುಸರಿಸುವಂತಹದು ಎಂದು ತಿಳಿಸಿದರು . ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸುತ್ತಿರುವ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಕಾರ್ಯಕ್ರಮಗಳ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು . ಡಾ | ಬಿ.ಆರ್ . ಅಂಬೇಡ್ಕರ್ ಅವರ ಜೀವನ ಹಾಗೂ ಸಂವಿಧಾನ ಕುರಿತು ಆಶುಭಾಷಣ ಸ್ಪರ್ಧೆ , ಭಾಷಣ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು . ಕಾರ್ಯಕ್ರಮಕ್ಕೂ ಮುನ್ನಾ ನಗರದ ಬಂಗಾರಪೇಟೆ ವೃತ್ತದಲ್ಲಿರುವ ಡಾ || ಬಿ.ಆರ್ . ಅಂಬೇಡ್ಕರ್ ಅವರ ಪುತ್ಥಳಿಗೆ ಎಲ್ಲಾ ಗಣ್ಯರು ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು . ಬಂಗಾರಪೇಟೆ ವೃತ್ತದಿಂದ ಶ್ರೀ ಟಿ.ಚನ್ನಯ್ಯ ರಂಗಮಂದಿರದವರೆಗೆ ಪಲ್ಲಕ್ಕಿಗಳ ಮೆರವಣಿಗೆ ನಡೆಯಿತು . ಕಾರ್ಯಕ್ರಮದಲ್ಲಿ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಓಂಶಕ್ತಿ ಚಲಪತಿ , ಕೋಲಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಸೂಲೂರು ಎಂ.ಆಂಜಿನಪ್ಪ , ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ನಾಗರಾಜ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕರಿಗಳಾದ ಕಾರ್ತಿಕ್‌ರೆಡ್ಡಿ , ಉಪ ವಿಭಾಗಾಧಿಕಾರಿಗಳಾದ ಸೋಮಶೇಖರ್ , ತಹಶೀಲ್ದಾರ್ ಶೋಭಿತಾ , ನಗರಸಭೆ ಎನ್.ಎಂ. ಆಯುಕ್ತರಾದ ಆರ್.ಶ್ರೀಕಾಂತ್ , ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಾಲಾಜಿ , ದಲಿತ ಸಂಘಟನೆಗಳ ಮುಖಂಡರುಗಳು , ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.