ಶ್ರೀನಿವಾಸಪುರ: ಡಾ. ಬಿ.ಆರ್.ಅಂಬೇಡ್ಕರ್ ಸರ್ವರ ಹಿತ ಕಾಯುವ ಸಂವಿಧಾನ ನೀಡುವುದರ ಮೂಲಕ ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆಗಳಿಂದ ಬುಧವಾರ ಏರ್ಪಡಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರ 67ನೇ ಮಹಾಪರಿನಿರ್ವಾಣ ಸಮಾರಂಭದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ತಮ್ಮ ಜೀವನದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು. ಓದಿನ ಮೂಲಕ ಜ್ಞಾನ ಪ್ರಭೆಯಾಗಿ ಕಂಗೊಳಿಸಿದರು. ಅವರ ಆದರ್ಶ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಸ್ತ್ರೀ ರೋಗ ತಜ್ಞೆ ಡಾ. ಚಂದ್ರಕಳಾ ಮಾತನಾಡಿ, ಪ್ರತಿಯೊಬ್ಬರೂ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನಡೆಯಬೇಕು. ಸ್ವಾಭಿಮಾನದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು. ಹಾಗೆ ಮಾಡಿದಾಗ ಮಾತ್ರ ಬಾಬಾಸಾಹೇಬರಿಗೆ ಗೌರವ ನೀಡಿದಂತಾಗುತ್ತದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ನರಸಿಂಹಮೂರ್ತಿ, ಸಮಾಜ ಕಲ್ಯಾಣಾಧಿಕಾರಿ ರಾಜೇಶ್, ತೋಟಗಾರಿಕೆ ಹಾಯಕ ನಿರ್ದೇಶಕ ಎ.ಬೈರೆಡ್ಡಿ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಪುರಸಭೆ ಸದಸ್ಯ ಭಾಸ್ಕರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಜಿ.ನರಸಿಂಹಯ್ಯ, ವಿವಿಧ ದಲಿತ ಸಂಘಟನೆಗಳ ಮುಖಂಡರಾದ ತಿಮ್ಮಯ್ಯ, ಟಿ.ನಾರಾಯಣಸ್ವಾಮಿ, ಎನ್.ಚಲಪತಿ, ಅನಂತ ಕುಮಾರ್, ಸದಾಶಿವ, ಆಂಜಿ, ಸಂತೋಷ್, ವೆಂಕಟರವಣಪ್ಪ, ನರಸಿಂಹಮೂರ್ತಿ, ವೆಂಕಟೇಶ್ ಇದ್ದರು.