ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯ ಪಾಲನೆ ಇಂದಿನ ಅಗತ್ಯವಾಗಿದೆ : ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್

ಶ್ರೀನಿವಾಸಪುರ: ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ತಾಲ್ಲೂಕು ದಲಿತ ಮುಖಂಡರ ಸಭೆಯಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಶಕ್ತಿ ಹಾಗೂ ಜ್ಞಾನ ಸರ್ವಕಾಲಿಕ ಮಾದರಿಯಾಗಿದೆ ಎಂದು ಹೇಳಿದರು.
ದಲಿತ ಸಮುದಾಯ ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಬೇಕು. ಅದಕ್ಕೆ ಬಾಬಾಸಾಹೇಬರಿಂದ ಪ್ರೇರಣೆ ಪಡೆದುಕೊಳ್ಳಬೇಕು. ಅದಕ್ಕೆ ಅವರ ಬದುಕು ತಿಳಿಯಬೇಕು. ಭಾವ ಅರಿಯಬೇಕು. ಆಶಯ ನಿಜಗೊಳಿಸಬೇಕು ಎಂದು ಹೇಳಿದರು.
ಫೆ.19 ರಂದು ಮಾಲೂರಿನಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಬರಹಗಳು, ಭಾಷಣಗಳು ಹಾಗೂ ಅನುಭವಗಳ ಧ್ವನಿಸುರಳಿ ಬಿಡುಗಡೆ ಮಾಡಲಾಗುವುದು. ಆ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಅದರಲ್ಲೂ ಯುವ ಸಮುದಾಯ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಶಾಮ್ ಆಡಿಯೋಸ್ ಸಂಸ್ಥಾಪಕ ಸಿದ್ಧಾರ್ಥ ಆನಂದ್ ಮಾತನಾಡಿ, ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡುವ ಉದ್ದೇಶದಿಂದ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ವಿಷಯಗಳ ಕುರಿತು ಆಡಿಯೋ ಮಾಡಲಾಗಿದೆ. ಅದು ಹೆಮ್ಮೆಯ ಸಂಗತಿಯಾಗಿದೆ. ಬಾಬಾಸಾಹೆಬರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ರಚಿಸಿದ ಮಾದರಿ ಸಂವಿಧಾನ ದೇಶದ ಜನರ ಆಶಾಕಿರಣವಾಗಿದೆ. ಜನರು ಕಾರ್ಯಕ್ರಮ ಯಶಸ್ಸಿಗೊಳಿಸಬೇಕು ಎಂದು ಹೇಳಿದರು.
ಮುಖಂಡರಾದ ಎನ್.ತಿಮ್ಮಯ್ಯ, ಈರಪ್ಪ, ರಾಮಮೂರ್ತಿ, ಸದಾಶಿವ, ನರಸಿಂಹಮೂರ್ತಿ, ನಿರಂಜನ್, ನರಸಿಂಹ, ಎಂ.ವೆಂಕಟೇಶ್, ಎನ್.ರಾಮಕೃಷ್ಣಪ್ಪ, ಶಿವಕುಮಾರ್, ವೇಣು, ಅಪ್ಪಲ್ಲ ಇದ್ದರು.