

ಶ್ರೀನಿವಾಸಪುರದಲ್ಲಿ ಸೋಮವಾರ ಏರ್ಪಡಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಸಮಾರಂಭವನ್ನು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಉದ್ಘಾಟಿಸಿದರು.
5 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ – ಜಿ.ಕೆ.ವೆಂಕಟಶಿವಾರೆಡ್ಡಿ
14ಎಸ್ವಿಪಿ2ಇಪಿ
ಶ್ರೀನಿವಾಸಪುರದಲ್ಲಿ ಸೋಮವಾರ ಡಾ. ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದ ಅಂಗವಾಗಿ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಶ್ರೀನಿವಾಸಪುರ: ಪಟ್ಟಣದಲ್ಲಿ ರೂ.5 ಕೋಟಿ ವೆಚ್ಚದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕಿನ ಯುವ ಸಮುದಾಯಕ್ಕೆ ಉದ್ಯೋಗ ಒದಗಿಸುವ ದೃಷ್ಟಿಯಿಂದ 5 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಲಯ ನಿರ್ಮಿಸಲಾಗುವುದು. ಅದಕ್ಕೆ ಪೂರಕವಾದ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಎಂದು ಹೇಳಿದರು.
ತಾಲ್ಲೂಕಿನ ನಾಗರಿಕರು ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು ಬೆಂಬಲಿಸಬೇಕು. ಯಾವುದೇ ಕಾರಣದಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅಡ್ಡಿಪಡಿಸಬಾರದು. ಹೆಚ್ಚಿನ ಸಂಖ್ಯೆಯ ವಿದ್ಯಾವಂತ ಯುವಕರು ಕೃಷಿಗೆ ಬೆನ್ನುತೋರಿಸಿ, ಉದ್ಯೋಗ ಹುಡುಕಿಕೊಂಡು ನಗರಗಳ ಕಡೆ ಮುಖ ಮಾಡಿರುವುದು ದುರದೃಷ್ಟ ಸಂಗತಿಯಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಮಹಾನ್ ಮಾನವತಾವಾದಿ. ಅವರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಸಂವಿಧಾನವನ್ನು ರಚಿಸುವುದರ ಮೂಲಕ ಸಮಾಜದ ಎಲ್ಲ ವರ್ಗದ ಜನರ ಗೌರವಕ್ಕೆ ಪಾತ್ರರಾಗಿರುವ ಅಂಬೇಡ್ಕರ್ ಪ್ರತಿಯೊಬ್ಬರಿಗೂ ಸ್ಫೂರ್ತಿಯ ಸೆಲೆಯಾಗಿದ್ದಾರೆ ಎಂದು ಹೇಳಿದರು.
ತಹಶೀಲ್ದಾರ್ ಜಿ.ಎನ್.ಸುಧೀದ್ರ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಬಹುದೊಡ್ಡ ಓದುಗರಾಗಿದ್ದರು. ಅವರ ಪುಸ್ತಕ ಪ್ರೇಮ ಯುವ ಸಮುದಾಯಕ್ಕೆ ಮಾದರಿಯಾಗಿದೆ. ತಮ್ಮ ಅಪಾರವಾದ ಜ್ಞಾನ ಹಾಗೂ, ಅಧ್ಯಯನದ ಮೂಲಕ ದೇಶಕ್ಕೆ ಸರ್ವಶ್ರೇಷ್ಠ ಸಂವಿಧಾನ ನೀಡಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ವೈದ್ಯೆ ಡಾ. ಚಂದ್ರಕಳಾ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಶಿಕ್ಷಣ, ಸಂಘಟಣೆ ಮತ್ತು ಹೋರಾಟ ಅವರ ಧ್ಯೇಯವಾಕ್ಯವಾಗಿದೆ. ಅದನ್ನು ಪ್ರತಿಯೊಬ್ಬರೂ ಪಾಲಿಸಿದಲ್ಲಿ ಜೀವನದಲ್ಲಿ ಬಯಸಿದ್ದನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಕುಮಾರಿ, ಪುರಸಭಾಧ್ಯಕ್ಷ ಬಿ.ಆರ್.ಭಾಸ್ಕರ್, ಮುಖ್ಯಾಧಿಕಾರಿ ವಿ.ನಾಗರಾಜ್, ಸಮಾಜ ಕಲ್ಯಾಣಾಧಿಕಾರಿ ಎನ್.ರಾಜೀವ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ಸಿಡಿಪಿಒ ಜ್ಯೋತಿ, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಎಪಿಎಂಸಿ ವ್ಯವಸ್ಥಾಪಕ ಎಂ.ಸುನಿಲ್ ಕುಮಾರ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಸುಬಾನ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಕೆ.ಮಂಜು, ಆರ್.ಎನ್.ನರಸಿಂಹಯ್ಯ, ದಿಲಿತ ಮುಖಂಡರಾದ ಎನ್.ಮುನಿಸ್ವಾಮಿ, ರಾಮಾಂಜಮ್ಮ, ವರ್ತನಹಳ್ಳಿ ವೆಂಕಟೇಶ್, ಈರಪ್ಪ, ಮುನಿವೆಂಕಟಪ್ಪ ಶ್ರೀನಿವಾಸ್, ಕೃಷ್ಣಪ್ಪ, ಅನಂತ ಕುಮಾರ್, ವಿ.ಮುನಿಯಪ್ಪ, ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮ, ಸಿಪಿಐ ಗೊರವನಕೊಳ್ಳ, ಸಿಪಿಐ ಶಿವಕುಮಾರ್, ಗಾಂಡ್ಲಹಳ್ಳಿ ಚಲಪತಿ, ಹೇಮಂತ ಕುಮಾರ್, ಅಸ್ಲಂ ಇದ್ದರು.
ಪಟ್ಟಣದಲ್ಲಿ, ತಾಲ್ಲೂಕಿನ ಬೇರೆ ಬೇರೆ ಕಡೆಗಳಿಂದ ತರಲಾಗಿದ್ದ ಅಂಬೇಡ್ಕರ್ ಭಾವಚಿತ್ರ ಒಳಗೊಂಡ ಪಲ್ಲಕಿಗಳ ಮೆರವಣಿಗೆ ಏರ್ಪಡಿಸಲಾಗಿತ್ತು. ವಿವಿಧ ಸಾಂಸ್ಕøತಿಕ ಚಟುವಟಿಕೆಗಳನ್ನು ಪ್ರದರ್ಶಿಸಲಾಯಿತು.
