ಕೋಲಾರ:- ರಾಜ್ಯಕ್ಕೆ ಪ್ರಥಮ ಮುಖ್ಯಮಂತ್ರಿಯನ್ನು ನೀಡಿದ ಹಾಗೂ ಅಪ್ರತಿಮ ಜನನಾಯಕರ ಹುಟ್ಟಿಗೆ ಕಾರಣವಾದ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳು ಇಂದು ಮತ ಮಾರಾಟಕೇಂದ್ರಗಳಾಗುತ್ತ ವೆ ಎಂಬ ಕೆಟ್ಟ ಪರಂಪರೆಗೆ ಸಾಕ್ಷಿಯಾಗುತ್ತಿದ್ದು, ಇಂತಹ ಕಳಂಕವನ್ನು ಹೋಗಲಾಡಿಸಲು ಮಹಿಳೆಯರು ಸಂಕಲ್ಪ ಮಾಡಬೇಕು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.
ನಗರದ ಕೋಲಾರಮ್ಮ ದೇವಾಲಯದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿದ ನಂತರ 22 ಮಹಿಳಾ ಸಂಘಗಳಿಗೆ 1.20ಕೋಟಿರೂ ಸಾಲ ವಿತರಿಸಿ ಅವರು ಮಾತನಾಡಿ, ಪ್ರಥಮ ಮುಖ್ಯಮಂತ್ರಿ ಕೆಸಿರೆಡ್ಡಿ, ಜನನಾಯಕರಾದ ಸಿ.ಬೈರೇಗೌಡರು, ವೆಂಕಟಗಿರಿಯಪ್ಪ, ನಾಗಿರೆಡ್ಡಿ ಸೇರಿದಂತೆ ಅನೇಕ ಮಹನೀಯರಿದ್ದ ಅವಿಭಜಿತ ಜಿಲ್ಲೆಯ ಘನತೆ ಉಳಿಸುವ ಕೆಲಸವನ್ನು ಮುಂಬರುವ ಚುನಾವಣೆಯಲ್ಲಿ ಮಾಡಿ ತೋರಿಸಿ ಎಂದು ಕಿವಿಮಾತು ಹೇಳಿದರು.
ಚುನಾವಣೆ ವೇಳೆ ಮತಕ್ಕೆ ಹಣ ನೀಡುವ ಮೂಲಕ ಯಾಮಾರಿಸುವ ಜನರನ್ನು ಧಿಕ್ಕರಿಸಬೇಕು. ಒಳ್ಳೆಯ ಕೆಲಸ ಮಾಡುವವರನ್ನು ಆಯ್ಕೆ ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ. 500 ಅಥವಾ 1000 ಪಡೆದು ಮತ ಹಾಕಿದರೆ ನಿಮಗೆ ಉಪಯೋಗವಾಗುವುದಿಲ್ಲ ಎಂದು ಎಚ್ಚರಿಸಿದರು.
ಅಂಬೇಡ್ಕರರು ಸಂವಿಧಾನದಲ್ಲಿ ಮತದಾನದ ಹಕ್ಕು ನೀಡಿದ್ದಾರೆ. ಗೌರವವಾಗಿ ಮತ ಹಾಕಿದರೆ ಮಾತ್ರವೇ ಜಿಲ್ಲೆಯ ರಾಜಕಾರಣ ಬದಲಾಗುತ್ತದೆ. ಕೈಚಾಚುವುದು ಬಿಡಿ. ಬೈರೇಗೌಡರ ಕಾಲದಲ್ಲಿ ದೇವಾಲಯದಲ್ಲಿ ಪೂಜೆ ಮಾಡಿ, ಎಲೆ-ಅಡಿಕೆ ಕೊಡುತ್ತಿದ್ದಂತಹ ವಾತಾವರಣ ಮತ್ತೆ ಸೃಷ್ಠಿಯಾಗಬೇಕು ಎಂದು ಕೋರಿದರು.
ಮಂಗಳೂರು ಭಾಗಕ್ಕೆ ಹೋದರೆ ಹಣ ನೋಡುವುದಿಲ್ಲ, ಒಳ್ಳೆಯ ಜನರನ್ನು ಆಯ್ಕೆ ಮಾಡುತ್ತಾರೆ.
ಜಿಲ್ಲೆಯ ಮಾನ ಮರ್ಯಾದೆ ಉಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಅದರ ಜತೆಗೆ ಡಿಸಿಸಿ ಬ್ಯಾಂಕನ್ನೂ ಉಳಿಸಬೇಕು. ನೀವು ಹಣ ಪಡೆದು ಮತ ಹಾಕಿದ್ದೇ ಆದಲ್ಲಿ ಬೇರೆ ಭಾಗಕ್ಕೆ ಹೋದರೆ ಕೋಲಾರ ಜಿಲ್ಲೆಯ ಜನರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದರು.
ಪ್ರತಿವಾರದ ಉಳಿತಾಯದ ಹಣವನ್ನು ಹೆಚ್ಚಾಗಿ ಕಟ್ಟಿದರೆ ನಿಮಗೇ ಅನುಕೂಲವಾಗುತ್ತದೆ. ಪ್ರಚಾರಕ್ಕೆ ಅಥವಾ ಖುಷಿಗೋಸ್ಕರ ಸಾಲ ನೀಡುವುದಲ್ಲ, ಹೆಣ್ಣುಮಕ್ಕಳ ಜೀವನ ಉತ್ತಮವಾಗಿರಬೇಕೆನ್ನುವ ನಿಟ್ಟಿನಲ್ಲಿ ಸಾಲ ನೀಡಲಾಗುತ್ತಿದೆ. ಪ್ರತಿವಾರ ಕಡ್ಡಾಯವಾಗಿ ಸಭೆ ನಡೆಸಿ ಉಳಿತಾಯದ ಹಣ ಹೆಚ್ಚು ಮಾಡಬೇಕು. ಪ್ರತಿ ತಿಂಗಳು ಬ್ಯಾಂಕ್ ಗೆ ಹಣ ಕಟ್ಟಬೇಕು. ಉಳಿತಾಯ ಹಣ ಹೆಚ್ಚಾಗಿದ್ದರೆ ಯಾರಿಗಾದರೂ ನೀವೇ 2 ಲಕ್ಷರೂ ಹಣವನ್ನು ಬೇಕಾದರೂ ಕೊಡುವ ಮಟ್ಟಕ್ಕೆ ಬೆಳೆಯುತ್ತೀರಿ ಎಂದು ಸಲಹೆ ನೀಡಿದರು.
10 ಲಕ್ಷ ರೂ ಸಾಲ ಉದ್ಯಮಕ್ಕೆ ಚಿಂತನೆ
ಡಿಸಿಸಿ ಬ್ಯಾಂಕ್ ನಾಗನಾಳ ಸೋಮಣ್ಣ ಮಾತನಾಡಿ, ಉತ್ತಮವಾಗಿ ವಹಿವಾಟು, ವ್ಯವಹಾರ ಮಾಡುವ ಸಂಘಗಳಿಗೆ 10 ಲಕ್ಷರೂ ಸಾಲ ನೀಡುವ ಕೆಲಸವಾಗಲಿದೆ. ಎಲ್ಲಾ ಸಂಘಗಳನ್ನು ಸೇರಿಸಿ ಯಾವುದಾದರೂ ಉದ್ಯಮವನ್ನು ಮಾಡಲು ಬ್ಯಾಲಹಳ್ಳಿ ಗೋವಿಂದಗೌಡರು ಚಿಂತನೆ ನಡೆಸಿದ್ದು, ಅದರಿಂದಾಗಿ ಅನೇಕರಿಗೆ ಉದ್ಯೋಗವೂ ಸಿಗುವಂತಾಗುತ್ತದೆ ಎಂದು ಹೇಳಿದರು.
ಸರಕಾರವು ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ. ಶೇ.6ರಷ್ಟು ಮಂದಿಗೆ ಸರಕಾರಿ ಉದ್ಯೋಗ ಸಿಕ್ಕಿದರೆ, ಉಳಿದವರು ಖಾಸಗಿ, ಸ್ವಯಂ ಉದ್ಯೋಗಗಳ ಮೇಲೆ ಅವಲಂಭಿತರಾಗಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕ್ ವ್ಯಾಪ್ತಿಯ ಸಂಘಗಳು ಅನೇಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ನೀವೂ ಮುಂದಾದರೆ ನಾವೂ ಸೇರಿದಂತೆ ಸರಕಾರವು ನಿಮ್ಮ ಜತೆಗಿರುತ್ತದೆ ಎಂದರು.
ಇತ್ತೀಚೆಗೆ ಕೊಡಗು ಡಿಸಿಸಿ ಬ್ಯಾಂಕ್‍ನವರು ಕೋಲಾರ ಡಿಸಿಸಿ ಬ್ಯಾಂಕಿಗೆ ಬಂದು ವೀಕ್ಷಣೆ ನೀಡಿದ್ದಾರೆ. ಕಾರಣ ಯಾವುದೇ ಭದ್ರತೆಯಿಲ್ಲದೆ 5, 10 ಲಕ್ಷರೂ ಸಾಲವನ್ನು ಯಾವ ರೀತಿ ನೀಡುತ್ತಿದ್ದಾರೆ ಎಂದು ಆಶ್ಚರ್ಯ ಪಡುತ್ತಿದ್ದಾರೆ.
ನಾನು ಅಹಮದಾಬಾದ್‍ಗೆ ಹೋಗಿದ್ದಾಗ ಈ ವಿಚಾರ ಪ್ರಸ್ತಾಪಿಸಿದಾಗ ನಿಮ್ಮ ಅಧ್ಯಕ್ಷರಿಗೆ ಒಂದು ಗುಂಡಿಗೆ ಇದೆಯಾ ಅಥವಾ ಎರಡು ಗುಂಡಿಗೆ ಇದೆಯಾ ಇಷ್ಟು ಸಾಲ ನೀಡಿದ್ದೀರಿ ಎಂದು ಪ್ರಶ್ನಿಸಿದ್ದರು. ಆಗ ನಮ್ಮ ಜಿಲ್ಲೆಗಳ ಹೆಣ್ಣುಮಕ್ಕಳು ಪ್ರಾಮಾಣಿಕವಾಗಿದ್ದಾರೆ ಎಂದು ಹೇಳಿದ್ದೆ. ಅದೇ ಅಭಿಮಾನ, ಗೌರವವನ್ನು ನೀವು ಉಳಿಸಿಕೊಂಡು ಹೋಗಬೇಕೆಂದು ಕೋರಿದರು.
ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಈಗಾಗಲೇ 2-3 ಬಾರಿ ಸಾಲ ಪಡೆದಿದ್ದೀರಿ, ಅದೆಲ್ಲದ್ದಕ್ಕೂ ಉಳಿತಾಯದ ಹಣ ಕಾರಣವಾಗಿದೆ. ಆದರೆ, ಉಳಿತಾಯದ ಮೊತ್ತ ಮಾತ್ರ ಹಾಗೆಯೇ ಇದೆ. 10ರೂ ಬದಲಾಗಿ 20ರೂ ಕಟ್ಟುವವರಾಗಿದ್ದರೆ ಇಂದು 2 ಲಕ್ಷರೂ ಹಣ ಇರುತ್ತಿತ್ತು.
ಈಗಲೂ ಕಾಲಮೀರಿಲ್ಲ, ಈಗಿನಿಂದಲೇ ಹೆಚ್ಚಳ ಮಾಡಿಕೊಂಡರೆ ತುರ್ತು ಸಂದರ್ಭದಲ್ಲಿ ಬ್ಯಾಂಕ್ ನೀಡುವ ಸಾಲಕ್ಕೆ ಕಾಯದೆ ಅದನ್ನೇ ನಿಮ್ಮ ಸದಸ್ಯರು ಸಾಲವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದ ಅವರು, ನಿಮ್ಮ ಸಂಘಕ್ಕೆ ಪಡೆದಿರುವ ತಲಾ 5 ಲಕ್ಷರೂಗಳನ್ನು ಬೇರೆ ಬೇರೆ ಕಾರ್ಯಗಳಿಗೆ ಬಳಸಿಕೊಳ್ಳದೆ ಸ್ವಯಂ ಉದ್ಯೋಗಗಳನ್ನು ಆರಂಭಿಸಿದರೆ ಅನುಕೂಲ, ಲಾಭ ಆಗುತ್ತದೆ ಎಂದು ಸಲಹೆ ನೀಡಿದರು.
ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ಕೋಲಾರ ಡಿಸಿಸಿ ಬ್ಯಾಂಕ್ ಹೆಣ್ಣು ಮಕ್ಕಳು ಸಾಲ ಪಡೆದು, ಪ್ರಾಮಾಣಿಕವಾಗಿ ಮರುಪಾವತಿ ಮಾಡುತ್ತಿರುವುದಲ್ಲಿ ವಿಶ್ವದಲ್ಲೇ ಮಾದರಿಯಾಗಿದ್ದೀರಿ. ಉಳಿತಾಯದ ಹಣಕ್ಕೆ ಶೇ.7ರಷ್ಟು ಬಡ್ಡಿಯನ್ನೂ ನಾವು ಕೊಡುವುದರಿಂದಾಗಿ ಹೆಚ್ಚಾಗಿ ಉಳಿತಾಯದ ಹಣ ಇರಿಸಬೇಕು. ಡಾ.ಸುಧಾಮೂರ್ತಿ ಮೊದಲು ಸಣ್ಣ ಪ್ರಮಾಣದಲ್ಲಿ ಬಂಡವಾಳ ಹೂಡಿ ಸ್ವಯಂ ಉದ್ಯೋಗ ಆರಂಭಿಸಿ ಇಂದು ವಿಶ್ವದಲ್ಲೇ ಖ್ಯಾತಿರಾಗಿದ್ದಾರೆ. ಅಂತೆಯೇ ಸ್ವಯಂ ಉದ್ಯೋಗದ ಕಡೆಗೆ ನಮ್ಮ ಜಿಲ್ಲೆಗಳಲ್ಲಿಯೂ ಮಹಿಳೆಯರು ಹೆಚ್ಚಿನ ಆದ್ಯತೆ ನೀಡಿದರೆ ನಿಮ್ಮ ಕುಟುಂಬದ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಅಭಿಪ್ರಾಪಟ್ಟರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಅಂಬರೀಶ್, ಮೇಲ್ವಿಚಾರಕ ಅಮೀನಾ, ಕೇಂದ್ರ ಕಚೇರಿಯ ಪದ್ಮಮ್ಮ, ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.