ಕೋಲಾರ:- ಹಣಕ್ಕಾಗಿ ಮತ ಮಾರಾಟ ಬೇಡ, ಸ್ವಾಭಿಮಾನದಿಂದ ನಿಮ್ಮ ಹಕ್ಕು ಚಲಾಯಿಸಿ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ನೈತಿಕತೆ ಉಳಿಸಿಕೊಳ್ಳುವ ಮೂಲಕ ಸಮಾಜದ ಪರಿವರ್ತನೆಗೆ ಹೆಣ್ಣು ಮಕ್ಕಳು ಸಂಕಲ್ಪ ಮಾಡಬೇಕು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.
ತಾಲ್ಲೂಕಿನ 27 ಮಹಿಳಾ ಸ್ವಸಹಾಯ ಸಂಘಗಳಿಗೆ 1.90 ಕೋಟಿ ರೂ ಶೂನ್ಯಬಡ್ಡಿ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಮತ ಮಾರಿಕೊಂಡರೆ ಅಭಿವೃದ್ದಿ ಶೂನ್ಯವಾಗುತ್ತದೆ, ಹಣಕ್ಕಾಗಿ ಕೈಚಾಚುವ ಮೂಲಕ ನಮ್ಮ ಸ್ವಾಭಿಮಾನವನ್ನೇ ಬಲಿಕೊಡುವುದು ಬೇಡ, ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ನಮ್ಮ ಮತ ಮಾರಾಟಕ್ಕಿಲ್ಲ ಎಂದು ಘೋಷಿಸಬೇಕು, ಅಭಿವೃದ್ದಿಗೆ ಸ್ಪಂದಿಸುವ, ಸೇವಾ ಮನೋಭಾವ ಇರುವ ವ್ಯಕ್ತಿಗೆ ಮತ ಹಾಕುವ ಮೂಲಕ ಈ ಸಮಾಜ ಉಳಿಸುವ ಮತ್ತು ಪರಿವರ್ತಿಸುವ ಹೊಣೆಗಾರಿಕೆ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಸಾಲದ ಹಣದಿಂದ ಹಬ್ಬ ಮಾಡದಿರಿ
ಸಾಲ ಪಡೆಯುವುದು ಬದುಕುಕಟ್ಟಿಕೊಳ್ಳಲು, ಈ ಹಣ ಸದ್ಬಳಕೆಯಾಗಿ ನೀವು ಸ್ವಾವಲಂಬನೆ ಸಾಧಿಸಿದರೆ ಮಾತ್ರ ಸಾರ್ಥಕತೆ ಎಂದ ಅವರು, ಹಬ್ಬದ ಸಂದರ್ಭದಲ್ಲಿ ಸಾಲ ನೀಡಿದ್ದಾರೆ ಎಂದು ಆಡಂಬರದಿಂದ ಹಬ್ಬ ಆಚರಿಸಿ ಸಾಲದ ಹಣ ದುರ್ಬಳಕೆ ಮಾಡಿಕೊಂಡರೆ ಅದು ನಿಮ್ಮ ಪ್ರಗತಿಗೆ ಮುಳ್ಳಾದೀತು ಎಂದು ಎಚ್ಚರಿಸಿದರು.
ಚಿನ್ನಾಪುರ ದಲಿತ ಕುಟುಂಬಗಳ ಮಹಿಳೆಯರ ಸ್ವಾಭಿಮಾನದ ಬದುಕು ಹಾಗೂ ಸಾಲ ಮರುಪಾವತಿಯಲ್ಲಿನ ಬದ್ದತೆ ಇಡೀ ಅವಿಭಜಿತ ಜಿಲ್ಲೆಗೆ ಆದರ್ಶವಾಗಿದೆ, ಇಂದು ಮಹಿಳೆಯರು 1.5 ಲಕ್ಷದವರೆಗೂ ಉಳಿತಾಯ ಮಾಡಿದ್ದಾರೆ, ಇಂತಹ ಮಹಿಳೆಯರೇ ಡಿಸಿಸಿ ಬ್ಯಾಂಕಿಗೆ ಶ್ರೀರಕ್ಷೆಯಾಗಿದ್ದಾರೆ, ಅವರ ಸಂಘಗಳಿಗೆ 10 ಲಕ್ಷ ಸಾಲ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ 20 ಲಕ್ಷ ಸಾಲ ನೀಡುವುದಾಗಿ ಘೋಷಿಸಿದರು.
ಚಿನ್ನಾಪುರದ ರೇಣುಕಾ ಯಲ್ಲಮ್ಮ ದೇವಾಲಯದ ಮುಂಭಾಗ ಪ್ರತಿ ನಿತ್ಯ ಸಭೆ ನಡೆಸುವ ಮಹಿಳೆಯರು ಆರ್ಥಿಕ ಚಟುವಟಿಕೆ ನಡೆಸುವ ಮೂಲಕ ಉಳಿತಾಯದಲ್ಲೂ ಸಾಧನೆ ಮಾಡಿದ್ದಾರೆ, ಭದ್ರತೆರಹಿತ ಸಾಲ ನೀಡಲು ಮುಂದಾದಾಗ ಭಯವಿತ್ತು ಆದರೆ ಆ ಭಯವನ್ನು ಹೆಣ್ಣು ಮಕ್ಕಳು ಹೋಗಲಾಡಿಸಿದ್ದಾರೆ, ತಮ್ಮ ತವರು ಮನೆಯೆಂದು ಭಾವಿಸಿ ಬ್ಯಾಂಕನ್ನು ಉಳಿಸಿ ಬೆಳೆಸಿದ್ದಾರೆ ಎಂದರು.
ಸ್ವಾವಲಂಬನೆಗೆ ಹಣ ಬಳಸಿಕೊಳ್ಳಿ
ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಭದ್ರತೆ ರಹಿತ ಸಾಲ ನೀಡುತ್ತಿದ್ದು, ಇದು ಹೆಣ್ಣು ಮಕ್ಕಳ ಸಬಲೀಕರಣಕ್ಕೆ ನೀಡುತ್ತಿದ್ದೇವೆ, ಪಡೆದ ಸಾಲವನ್ನು ಕುರಿ,ಕೋಳಿ,ಹಸು ಸಾಕಾಣಿಕೆ, ಟೈಲರಿಂಗ್, ಬ್ಯೂಟಿ ಪಾರ್ಲರ್ ಮತ್ತಿತರ ಸ್ವಯಂ ಉದ್ಯೋಗ ಸೃಷ್ಟಿಗೆ ಬಳಸಿಕೊಳ್ಳಿ, ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸುವ ಮೂಲಕ ನಂಬಿಕೆ ಉಳಿಸಿಕೊಂಡು ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಲ ಸೌಲಭ್ಯ ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಉಳಿತಾಯ ಹೆಚ್ಚು ಮಾಡಿ, ಬ್ಯಾಂಕ್ ಸಾಲ ವಿಳಂಬವಾದರೆ ನಿಮ್ಮ ಸಂಘವೇ ಉಳಿತಾಯದ ಹಣದಿಂದ ಕಷ್ಟದಲ್ಲಿರುವ ಸದಸ್ಯರಿಗೆ ಸಾಲ ನೀಡಬಹುದಾಗಿದೆ, ಹಣ ದುರುಪಯೋಗಕ್ಕೆ ಅವಕಾಶ ನೀಡದೇ ಸಂಘ ಬಲಗೊಳಿಸಿ, ಸಾಲದ ಕಂತು ಪಾವತಿ ಪಾರದರ್ಶಕವಾಗಿರಬೇಕು, ಎಲ್ಲಾ ಸದಸ್ಯರು ಈ ಕುರಿತು ಗಮನಹರಿಸಬೇಕು ಎಂದರು.
ಡಿಸಿಸಿ ಬ್ಯಾಂಕ್ಬ ಡವರಿಗೆ ಆಸರೆ
ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ವಾಣಿಜ್ಯ ಬ್ಯಾಂಕುಗಳು ಬಡವರಿಗೆ ಸಾಲ ನೀಡೊಲ್ಲ, ಉಳ್ಳವರಿಗೆ ಮಾತ್ರವೇ ಅಲ್ಲಿ ಸಾಲ ಸಿಗೋದು, ಡಿಸಿಸಿ ಬ್ಯಾಂಕ್ ಮಾತ್ರ ಬಡವರ ಕೈಹಿಡಿಯುವ ಕೆಲಸ ಮಾಡುತ್ತಿದೆ ಎಂದರು.
ಮಹಿಳೆಯರನ್ನು ಕೂರಿಸಿ ಸೀರೆ,ತಾಂಬೂಲದೊಂದಿಗೆ ಸಾಲ ಒದಗಿಸುವ ಹೃದಯವಂತಿಕೆ ಬ್ಯಾಲಹಳ್ಳಿ ಗೋವಿಂದಗೌಡರಿಗಿದೆ, ಇಡೀ ರಾಜ್ಯದಲ್ಲೇ ಧೈರ್ಯದಿಂದ ಬಡ ಮಹಿಳೆಯರಿಗೆ 800 ಕೋಟಿಗೂ ಹೆಚ್ಚು ಭದ್ರತೆ ರಹಿತ ಸಾಲ ನೀಡಿರುವುದೇ ಅದಕ್ಕೆ ಸಾಕ್ಷಿಯಾಗಿದೆ, ಸಮರ್ಪಕ ಮರುಪಾವತಿ ಮೂಲಕ ನಂಬಿಕೆ ಉಳಿಸಿಕೊಳ್ಳಿ ಬ್ಯಾಂಕಿಗೆ ಶಕ್ತಿ ತುಂಬಿ ಎಂದು ಕೋರಿದರು.
ಬ್ಯಾಂಕಿನ ಗೋಪಾಲಕೃಷ್ಣ ನಿರೂಪಿಸಿ, ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಕಸಬಾ ದಕ್ಷಿಣ ಸೊಸೈಟಿ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸಪ್ಪ ಸೇರಿದಂತೆ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.