ಹೆಣ್ಣು ಮಕ್ಕಳು ಚುನಾವಣೆ ಬಂದಾಗ ಹಣ ಆಮಿಷಗಳಿಗೆ ಸ್ವಾಭಿಮಾನ ಬಲಿ ಕೊಡದಿರಿ -ಬ್ಯಾಲಹಳ್ಳಿ ಗೋವಿಂದಗೌಡ ಕರೆ

ಶುದ್ದ ಮನಸ್ಸಿನಿಂದ ಮತ ಚಲಾಯಿಸಿ ದೇಶ,ಸಮಾಜ ಉಳಿಸಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಬದುಕುವ ಜನ ಚುನಾವಣೆ ಬಂದಾಗ ತಮ್ಮ ಸ್ವಾಭಿಮಾನವನ್ನು ಆಮಿಷಗಳಿಗೆ ಬಲಿಕೊಡದೇ ಶುದ್ಧ ಮನಸ್ಸಿನಿಂದ ಮತ ಚಲಾಯಿಸುವ ಮೂಲಕ ಸಮಾಜ ಹಾಗೂ ದೇಶವನ್ನು ಉಳಿಸಬೇಕಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ ಗೋವಿಂದಗೌಡ ಕರೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಡಿಸಿಸಿ ಬ್ಯಾಂಕ್ ವತಿಯಿಂದ ಸ್ತ್ರೀ ಶಕ್ತಿ ಗುಂಪುಗಳಿಗೆ ಎರಡು ಕೋಟಿ ರೂ ಬಡ್ಡಿರಹಿತ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಇಂದಿನ ಪರಿಸ್ಥಿತಿಯಲ್ಲಿ ಸಮಾಜಸೇವೆಗೆ ಇಲ್ಲಿ ಬೆಲೆ ಇಲ್ಲ, ಬರಿ ಹಣ ಆಮಿಷಗಳಿಗೆ ಬಲಿಯಾಗುವ ಪರಿಸ್ಥಿತಿ ಎದುರಾಗುತ್ತಿದೆ, ಇದರಿಂದ ದೇಶ ಹಾಗೂ ಸಮಾಜಕ್ಕೆ ಕಂಟಕ ಎಂದು ಅಭಿಪ್ರಾಯಪಟ್ಟ ಅವರು, ಮಹಿಳೆಯರು ಮನಸ್ಸು ಮಾಡಿದರೆ ಮಾತ್ರ ರಾಜಕಾರಣದಲ್ಲಿನ ಕೊಳಕನ್ನು ಸ್ವಚ್ಚಪಡಿಸಬಹುದು ಎಂದರು.
ಸಮಾಜದಲ್ಲಿ ಹೆಣ್ಣಿಗೆ ಗೌರವ ನೀಡಿದರೇ ಸಮಾಜಕ್ಕೆ ಗೌರವ ನೀಡಿದಂತೆ ಚುನಾವಣೆ ಸಂದರ್ಭದಲ್ಲಿ ಹೆಣ್ಣುಮಕ್ಕಳನ್ನು ಹಣದ ಆಮಿಷಗಳಿಗೆ ಯಾಮಾರಿಸುವರು ಇದ್ದಾರೆ, ಅಂತಹ ಆಸೆಗಳಿಗೆ ಮಾರು ಹೋಗಬಾರದು ಸ್ವಾಭಿಮಾನದಿಂದ ಬದುಕನ್ನು ಕಟ್ಟಿಕೊಂಡು ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂದರು.
ಹೆಣ್ಣು ಮಕ್ಕಳಿಗೆ ಎರಡು ಲಕ್ಷ ಸಾಲ ನೀಡುವ ಶಕ್ತಿ ಡಿಸಿಸಿ ಬ್ಯಾಂಕ್‍ಗೆ ಇದೆ ಆದರೆ ಸಾಲ ಮರುಪಾವತಿ ಉಳಿತಾಯ, ಹಾಗೂ ವಹಿವಾಟನ್ನು ಡಿಸಿಸಿ ಬ್ಯಾಂಕ್ ನಲ್ಲಿ ಪ್ರತಿಯೊಬ್ಬರೂ ಮಾಡುವಂತಾಗಬೇಕು, ಸಾಲ ನೀಡಲು ಅಲೆದಾಡಿಸಿ ಜನರ ರಕ್ತ ಹೀರುವ ಖಾಸಗಿ ಬ್ಯಾಂಕುಗಳಿಂದ ದೂರವಿರಿ, ಸಹಕಾರಿ ರಂಗವನ್ನು ಉಳಿಸಿ ಬೆಳೆಸುವ ಮೂಲಕ ನಿಮ್ಮ ಠೇವಣಿ ಹಣ ಇಲ್ಲೇ ಇಟ್ಟು, ಮತ್ತಷ್ಟು ತಾಯಂದಿರಿಗೆ ನೆರವಾಗಲು ನೀವೂ ಕಾರಣರಾಗಿ ಎಂದು ಕಿವಿ ಮಾತು ಹೇಳಿದರು.
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕಿನಿಂದ ಪ್ರತಿನಿತ್ಯ 5 ಕೋಟಿ ರೂಪಾಯಿ ವ್ಯವಹಾರ ನಡೆಯುತ್ತಿದ್ದು, ಇದಕ್ಕೆ ಮೂಲ ಶಕ್ತಿ ಹೆಣ್ಣು ಮಕ್ಕಳು, ತಾಲೂಕಿನ ಚಿನ್ನಾಪುರ ಗ್ರಾಮದ ದಲಿತ ಹೆಣ್ಣು ಮಕ್ಕಳು ಎರಡು ಜಿಲ್ಲೆಗೆ ಮಾದರಿಯಾಗಿದ್ದಾರೆ, 50 ಸಾವಿರದಿಂದ 2 ಲಕ್ಷ ಸಾಲ ಪಡೆದಿದ್ದಾರೆ, ಅವರ ಸ್ವಾಭಿಮಾನದ ಬದುಕು ಇತರರಿಗೆ ಮಾದರಿಯಾಗಿದ್ದು, ಉಳಿತಾಯದ ಹಣ ಡಿಸಿಸಿ ಬ್ಯಾಂಕಿನಲ್ಲೇ ಇಟ್ಟು ಬ್ಯಾಂಕನ್ನು ಬೆಳೆಸಿ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ದೇಶದಲ್ಲಿ ಭದ್ರತೆ ರಹಿತವಾಗಿ ಸಾಲ ಕೊಟ್ಟ ಇತಿಹಾಸ ಕೋಲಾರ ಡಿಸಿಸಿ ಬ್ಯಾಂಕ್‍ಗೆ ಮಾತ್ರವಿದೆ, ಹೆಣ್ಣು ಮಕ್ಕಳೇ ನಮ್ಮ ಬ್ಯಾಂಕಿಗೆ ಭದ್ರತೆಯಾಗಿದ್ದಾರೆ, ಆ ನಂಬಿಕೆಯಿಂದಳೇ 900 ಕೋಟಿ ಸಾಲವನ್ನು ತಾಯಂದಿರಿಗೆ ನೀಡಿದ್ದೇವೆ, ಅದೇ ತಾಯಂದಿರು ಇಂದು ಸುಮಾರು 325 ಕೋಟಿ ಉಳಿತಾಯ ಮಾಡಿದ್ದಾರೆ ಎಂದು ಅಭಿನಂದಿಸಿದರು.
ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್, ಬ್ಯಾಂಕ್ ನಿಮಗೆ ಬಡ್ಡಿರಹಿತ ಸಾಲ ನೀಡುವ ಮೂಲಕ ನಿಮಗೆ ಆರ್ಥಿಕ ಶಕ್ತಿ ತುಂಬುತ್ತಿದೆ, ಈ ಹಣವನ್ನು ನೀವು ಆಧಾಯೋತ್ಪನ್ನ ಚಟುವಟಿಕೆಗಳಿಗೆ ಬಳಸಿ, ಆರ್ಥಿಕವಾಗಿ ಶಕ್ತಿ ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ನಿರ್ದೇಶಕ ಯಲವಾರ ಸೊಣ್ಣೇಗೌಡ, ಡಿಸಿಸಿ ಬ್ಯಾಂಕ್ ನಿಮಗೆ ಮಧ್ಯವರ್ತಿಗಳ ಹಾವಳಿಯಿಲ್ಲದೇ ಸಾಲ ನೀಡುತ್ತಿದೆ, ನೀವು ಯಾರಿಗೂ ಲಂಚ ನೀಡಬೇಕಾಗಿಲ್ಲ, ನಿಮ್ಮ ಉಳಿತಾಯ ಖಾತೆಗೆ ನೇರವಾಗಿ ಸಾಲದ ಹಣ ಬರುತ್ತಿದೆ, ಈ ನೆರವು ಸದುಪಯೋಗಪಡಿಸಿಕೊಂಡು ಬ್ಯಾಂಕಿನಲ್ಲೇ ಉಳಿತಾಯ ಮಾಡಿ ಎಂದು ಕೋರಿದರು.
ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕಿ ಅರುಣಮ್ಮ, ಡಿಸಿಸಿಬ್ಯಾಂಕ್ ಮಹಿಳೆಯರಿಗೆ ಶಕ್ತಿ ತುಂಬಿದೆ, ಮೀಟರ್ ಬಡ್ಡಿ ದಂಧೆಯಿಂದ ರಕ್ಷಣೆ ಒದಗಿಸಿದೆ, ಈ ಬ್ಯಾಂಕ್ ನಮ್ಮ ದೇವಾಲಯ, ತವರು ಮನೆ ಎಂದು ಭಾವಿಸೋಣ, ಬ್ಯಾಂಕಿಗೆ ಮೋಸ ಮಾಡದೇ ಸಾಲವನ್ನು ಸಮರ್ಪಕವಾಗಿ ಮರುಪಾವತಿಸಿ, ನಮ್ಮ ಉಳಿತಾಯದ ಹಣ ಇಲ್ಲೇ ಇಟ್ಟು ಶಕ್ತಿ ತುಂಬೋಣ ಎಂದರು.
ಗೋವಿಂದಗೌಡರು
ಶಾಸಕರಾಗಬೇಕು
ಕಾರ್ಯಕ್ರಮದಲ್ಲಿ ಚಿನ್ನಾಪುರ ಮಹಿಳಾ ಸಂಘದ ಸದಸ್ಯೆ ನಾರಾಯಣಮ್ಮ ಮಾತನಾಡಿ, ಮಧ್ಯವರ್ತಿಗಳ ಹಾವಳಿಯಿಲ್ಲದೇ ಸಾಲದ ಪ್ರತಿ ಪೈಸೆಯೂ ನಮ್ಮ ಉಳಿತಾಯ ಖಾತೆಗೆ ಸೇರುವಂತೆ ಮಾಡಿರುವ ಗೋವಿಂದಗೌಡರು ಶಾಸಕರಾಗಬೇಕು, ಮಹಿಳೆಯರು ಯಾರ್ಯಾರೋ ನೀಡುವ ಹಣ ಆಮಿಷಗಳಿಗೆ ಬಲಿಯಾಗದೇ ಅವರನ್ನು ಆಯ್ಕೆ ಮಾಡುವ ಸಂಕಲ್ಪ ಮಾಡಬೇಕು ಎಂದು ತಿಳಿಸಿ, ಬ್ಯಾಂಕ್ ಅಧ್ಯಕ್ಷರೇ ಶಾಸಕರಾದರೆ ನಮಗೆ ಈಗ ನೀಡುತ್ತಿರುವ 5 ಲಕ್ಷ ಬಡ್ಡಿರಹಿತ ಸಾಲ 10 ಲಕ್ಷಕ್ಕೇರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೋಲಾರ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ನೂರಾರು ಮಹಿಳೆಯರು ಪಾಲ್ಗೊಂಡಿದ್ದು, ಸಾಲದ ಚೆಕ್‍ಗಳನ್ನು ಪಡೆದುಕೊಂಡರು.