ಕೋಲಾರ: ಪೋಷಕರು ಅಂಗವಿಕಲ ಮಕ್ಕಳಿಗೆ ವೈಜ್ಞಾನಿಕ ಸಾಧನ ಕೊಡಿಸುವುದರ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಹೇಳಿದರು.
ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ ಭಾನುವಾರ ಏರ್ಪಡಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿಕಲಚೇತನರ ಬಗ್ಗೆ ಅನುಕಂಪ ಇದ್ದರೆ ಸಾಲದು, ಅವರಿಗೆ ಅಗತ್ಯವಾದ ನೆರವು ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಶೀಗಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಎಸ್.ಆರ್.ಧರ್ಮೇಶ್ ಪ್ರತಿ ತಿಂಗಳೂ ತಮ್ಮ ಸಂಬಳದಲ್ಲಿ ರೂ.10 ಸಾವಿರ ಉಳಿಸಿ, ಶಾಲಾ ಮಕ್ಕಳು ಹಾಗೂ ಸಮಾಜ ಸೇವಾ ಕಾರ್ಯಗಳಿಗೆ ಬಳಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಶ್ರವಣ ದೋಷ ಇರುವ ಮಕ್ಕಳಿಗೆ ಸ್ವಯಂ ಪ್ರೇರಣೆಯಿಂದ ಶ್ರವಣ ಸಾಧನಗಳನ್ನು ನೀಡಿದ್ದಾರೆ. ಅವುಗಳ ಪ್ರಯೋಜನ ಪಡೆದು ಶ್ರವಣ ಶಕ್ತಿ ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.
ದಾನಿ ಧರ್ಮೇಶ್ ಶ್ರವಣ ದೋಷವುಳ್ಳ ಮಕ್ಕಳಿಗೆ ಶ್ರವಣ ಸಾಧನ ವಿತರಿಸಿ ಮಾತನಾಡಿ, ನಾನು ಮಕ್ಕಳಲ್ಲಿ ದೇವರನ್ನು ಕಾಣುತ್ತೇನೆ. ನೆರವಿನ ಅಗತ್ಯವುಳ್ಳ ಮಕ್ಕಳು ಹಾಗೂ ಬಡವರಿಗೆ ಕೈಲಾದ ನೆರವು ನೀಡುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡಿದ ತೃಪ್ತಿ ಸಿಗುತ್ತದೆ ಎಂದು ಹೇಳಿದರು.
ಅಂಗವಿಕಲತೆ ಸಹಜವಾಗಿ ಬರುವ ದೈಹಿಕ ನ್ಯೂನ್ಯತೆಯೇ ಹೊರತು ಶಾಪವಲ್ಲ. ಬದಲಾದ ಪರಿಸ್ಥಿತಿಯಲ್ಲಿ ವಿಕಲ ಚೇತನರನ್ನು ಸದೃಢಗೊಳಿಸಲು ಅಗತ್ಯವಾದ ವೈಜ್ಞಾನಿಕ ಸಲಕರಣೆಗಳು ಬಂದಿವೆ. ಅವುಗಳ ಮಾಹಿತಿ ಪಡೆದು ಕೊಡಿಸಿದಲ್ಲಿ ದೈಹಿಕ ಸಾಮಥ್ರ್ಯ ಹೆಚ್ಚಲು ಸಾಧ್ಯವಾಗುತ್ತದೆ. ಎಷ್ಟೋ ಮಂದಿ ವಿಕಲ ಚೇತನರು ಪ್ರಯತ್ನದ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಅಂಥ ಸಾಧಕರ ಬಗ್ಗೆ ತಿಳಿದುಕೊಳ್ಳಬೇಕು. ಅವರು ನಡೆದ ಹಾದಿಯಲ್ಲಿ ಹೆಜ್ಜೆ ಹಾಕಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಕಲ ಚೇತನ ಮಕ್ಕಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಲಾಯಿತು. ಶ್ರವಣ ಸಾಧನ ಬಳಸುವುದರ ಬಗ್ಗೆ ತಿಳಿಸಿಕೊಡಲಾಯಿತು.
ಸಮಾರಂಭದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಅಧಿಕಾರಿಗಳಾದ ಪ್ರವೀಣ್, ಶಂಕರಪ್ಪ, ಚಂದ್ರಯ್ಯ, ಗಂಗಾಧರ್, ನಾಗರಾಜ್ ಇದ್ದರು.