ಕೋಲಾರ,ಡಿ.22: ಇಂಗ್ಲೀಷ್‍ನಿಂದ ಮಾತ್ರ ವೃತ್ತಿ ಮತ್ತು ಬದುಕಿನಲ್ಲಿ ಯಶಸ್ಸು ಸಾಧ್ಯ ಎಂಬ ಭ್ರಮೆ ಬೇಡ, ಸಾಧಕ ಮಹನೀಯರೆಲ್ಲರೂ ಕನ್ನಡದಲ್ಲೇ ಮುಂದೆ ಬಂದವರು ಎಂಬುವುದನ್ನು ಮರೆಯಬಾರದು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಿ.ದೇವರಾಜ ಅವರು ತಿಳಿಸಿದರು.
ಮುಳಬಾಗಿಲು ತಾಲೂಕಿನ ಎಂ.ಅಗ್ರಹಾರ ಗ್ರಾಮದಲ್ಲಿ ದಿಟ್ಟ ಕನ್ನಡಿಗರ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ್ದ 3ನೇ ವರ್ಷದ ಕನ್ನಡ ನಾಡ ಹಬ್ಬ, ಉಚಿತ ಆರೋಗ್ಯ ಶಿಬಿರ ಹಾಗೂ ವಿದ್ಯಾರ್ಥಿಗಳಿಗೆ ಲೇಖನಿ ಸಾಮಾಗ್ರಿಗಳ ವಿತರಣೆ ಸಮಾರಂಭವನ್ನು, ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳ ಮೇಲೆ ತಂದೆ-ತಾಯಿ ಜವಾಬ್ದಾರಿ ಹೇಗಿದೆಯೋ ಹಾಗೆ ಮುಂದೆ ಮಕ್ಕಳೂ ಸಹ ತಮ್ಮನ್ನು ಸಾಕಿ-ಸಲುಹಿ ವಿದ್ಯಾಭ್ಯಾಸ ನೀಡಿ ಬೆಳೆಸಿದ, ತಂದೆ-ತಾಯಿಯನ್ನು ಕ್ಷೇಮದಿಂದ ನೋಡಿಕೊಳ್ಳುವ ಜವಾಬ್ದಾರಿ, ಮಕ್ಕಳ ಮೇಲೆಯೂ ಇದೆ ಎಂಬುವುದನ್ನು ಮರೆಯಬಾರದು ಎಂದು ಕಿವಿ ಮಾತು ಹೇಳಿದರು.
ದಿನನಿತ್ಯದ ಜೀವನದಲ್ಲಿ ಕಲಿಯುವ ಪಾಠ ನಮಗೆ ದಾರಿದೀಪವಾಗುತ್ತದೆ ಅದನ್ನು ಅರಿತು-ಅನುಸರಿಸಿ ಬೆಳೆಯುವವನೇ ಸಾರ್ಥಕತೆಯ ಸಾಧಕನಾಗುತ್ತಾನೆ. ಹಾಗೆಯೇ ತಮಗೆ ಏಕೆ ಕಷ್ಟಗಳ ಎಂಬ ಕೀಳರಿಮೆ ಬೇಡ. ಬದುಕು ಮತ್ತು ವೃತ್ತಿಯಲ್ಲಿ ತಾಳ್ಮೆ, ಶ್ರದ್ಧೆ ಇದ್ದಲ್ಲಿ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಹಾಗೆಯೇ ಇನ್ನೊಬ್ಬ ಮನುಷ್ಯನ ಕಷ್ಟಕ್ಕೆ ಸಕಾಲಕ್ಕೆ ಸ್ಪಂದಿಸುವುದೇ ಮಾನವತೆಯ ಗುಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೋಚಿಮಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಮಾತನಾಡಿ, ಕನ್ನಡ ಪ್ರಾಚೀನ ಭಾಷೆಯಾಗಿದ್ದು ಕನ್ನಡದಲ್ಲಿ ಸಿಕ್ಕಿರುವಷ್ಟು ಜ್ಞಾನಪೀಠ ಪ್ರಶಸ್ತಿಗಳು ಬೇರಾವ ಭಾಷೆಗೆ ದೊರಕದಿರುವುದು ಕನ್ನಡ ಸಾಹಿತ್ಯದ ಶ್ರೀಮಂತಿಕೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕನ್ನಡ, ಸಾಹಿತ್ಯ, ಕಲೆ, ಸಂಸ್ಕøತಿ, ಕವಿಪುಂಗವರು, ಲೇಖಕರು, ಸಾಹಿತಿಗಳು, ಹೋರಾಟಗಾರರು, ಚಿಂತಕರ ಸಂಖ್ಯೆ ಹಾಗೂ ಅವರ ಕ್ಷೇತ್ರದ ಕೊಡುಗೆ ಅಪಾರವಾದದ್ದು ಹಾಗೂ ಸಾಗರದಷ್ಟು ವ್ಯಾಪ್ತಿಯನ್ನು ಹೊಂದಿದೆ ಎಂದರು.
ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಎಂ.ಎಸ್.ಶ್ರೀನಿವಾಸರೆಡ್ಡಿ ಮಾತನಾಡಿ, ಗಡಿಭಾಗದಲ್ಲಿ ಸಹಜವೆಂಬಂತೆ ಭಾಷೆ ತೆಲುಗಾದರೂ ಕನ್ನಡದ ಅಸ್ಮಿತೆ-ಅಸ್ತಿತ್ವದ ವಿಚಾರದಲ್ಲಿ ಕನ್ನಡತನವನ್ನು ಇಲ್ಲಿನವರು ಯಾರೂ ಬಿಟ್ಟುಕೊಡಲಾರರು. ಹಾಗೆಯೇ ಕನ್ನಡ ಭಾಷೆ, ಗಡಿ, ಜಲ ವಿಚಾರಕ್ಕೆ ಧಕ್ಕೆ ಬಂದಾಗ ಎಲ್ಲರೂ ಒಂದಾಗುತ್ತಾರೆ ಎಂಬುವುದು ಹೆಮ್ಮೆಯ ಸಂಗತಿ ಎಂದರು.
ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ವಿ.ರಘುಪತಿರೆಡ್ಡಿ ಮಾತನಾಡಿ, ಕನ್ನಡವು ಮಾತೃ ಭಾಷೆಯಾಗಿ ಪ್ರಥಮ ಆದ್ಯತೆಯಾಗಿರಬೇಕೆ ವಿನ: ಬೇರೆ ಭಾಷೆಯನ್ನು ತೆಗಳುವ, ದ್ವೇಷಿಸುವಂತಾಬಾರದು ಎಂದ ಅವರು, ಗ್ರಾಮೀಣ ಭಾಗದಲ್ಲಿ ಇಂದು ಆಧುನೀಕರಣ ನೆಪದಲ್ಲಿ ಇಂಗ್ಲೀಷ್‍ನ ಬೆನ್ನು ಹತ್ತಿ ನಗರಗಳತ್ತ ವಲಸೆ ಹೋಗುತ್ತಿರುವುದು, ಗ್ರಾಮೀಣ ಶೈಲಿಯ ಬದುಕನ್ನು ಬಿಟ್ಟು ನವ ಜೀವನ ಹೆಸರಿನಲ್ಲಿ ಜೀವನ ಶೈಲಿಯನ್ನು ಬದಲಾಯಿಸುತ್ತಿರುವುದು ಆತಂಕದ ಸಂಗತಿ ಎಂದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಿ.ವಿ.ಶ್ಯಾಮೇಗೌಡ ಮಾತನಾಡಿ, ಮುಳಬಾಗಿಲು ತಾಲೂಕು ಸೇರಿದಂತೆ ಕರ್ನಾಟಕದ ಗಡಿಭಾಗದಲ್ಲಿ ಇಂದಿಗೂ ಸಹ ಕನ್ನಡ ತನ್ನ ಕಸ್ತೂರಿ ಕಂಪನ್ನು ಬೀರುತ್ತಿದೆ ಎಂದ ಅವರು, ಕನ್ನಡ ಶಾಲೆಗಳನ್ನು ಬಲಪಡಿಸಿ ಕನ್ನಡದಲ್ಲೇ ವಿದ್ಯಾಭ್ಯಾಸ, ಪರೀಕ್ಷೆ ಹಾಗೂ ವೃತ್ತಿಗೆ ಮೊದಲ ಆದ್ಯತೆ ಆಗಬೇಕೆಂದರು.
ಕಾರ್ಯಕ್ರಮದಲ್ಲಿ ಅಗ್ರಹಾರ ವಿಶ್ವನಾಥ್, ಕೆ.ಬಿ.ನಾರಾಯಣಸ್ವಾಮಿ, ಮಾರಪ್ಪ, ಬಸವರಾಜ, ಮಂಜುನಾಥ್, ರಾಚಣ್ಣ, ಅಂಬರೀಶ್, ಸುಬ್ರಮಣ್ಯಂ, ಗೋಪಾಲರೆಡ್ಡಿ, ರಾಜಶೇಖರ್, ವಂಶೋದಯ ಆಸ್ಪತ್ರೆಯ ಡಾ.ಅರವಿಂದ್, ನಾಗರಾಜ್, ಆನಂದ್, ಹನುಮನಹಳ್ಳಿ ನಾಗರಾಜ್ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದ್ದರು.