ಕೋಲಾರ:- ಚುನಾವಣೆ ಹತ್ತಿರವಾಗುತ್ತಿದ್ದು, ಕೆಲವು ರಾಜಕೀಯ ಪಕ್ಷಗಳ ಹಣವಂತ ಮುಖಂಡರು ಮತ ಖರೀದಿಗೆ ಬಂದಾಗ ಸ್ವಾಭಿಮಾನ ಬಲಿಕೊಟ್ಟು ಅವರಿಗೆ ಸಂಘದ ಸದಸ್ಯರ ಸಂಖ್ಯೆ, ಮತ್ತಿತರ ಮಾಹಿತಿ ನೀಡಿ ಅಪಹಾಸ್ಯಕ್ಕೆ ಗುರಿಯಾಗದೇ ಬುದ್ದಿಹೇಳಿ ಕಳುಹಿಸಿ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.
ನಗರದ ಸಾಯಿಬಾಬಾ ಮಂದಿರದಲ್ಲಿ ದಕ್ಷಿಣ ಕಸಬಾ ರೇಷ್ಮೆಬೆಳೆಗಾರರ ಹಾಗೂ ರೈತರ ಸಹಕಾರ ಸಂಘದ ಆಶ್ರಯದಲ್ಲಿ 34 ಮಹಿಳಾ ಸಂಘಗಳಿಗೆ 1.75 ಕೋಟಿ ರೂ ಶೂನ್ಯ ಬಡ್ಡಿ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಹೆಣ್ಣು ಮಕ್ಕಳು ಸ್ವಾಭಿಮಾನದ ಬದುಕು ನಡೆಸುತ್ತಿದ್ದೀರಿ, ಡಿಸಿಸಿ ಬ್ಯಾಂಕನ್ನು ಉಳಿಸಿ ಬೆಳೆಸಿರುವವರೂ ನೀವೆ, ನೀವು ಬದುಕು ಕಟ್ಟಿಕೊಳ್ಳಲು ಡಿಸಿಸಿ ಬ್ಯಾಂಕ್ ಬಡ್ಡಿರಹಿತ ಸಾಲ ಸೌಲಭ್ಯ ನೀಡುತ್ತಿದೆ, ನೀವು ಮತ್ತೊಬ್ಬರ ಬಳಿ ಕೈಚಾಚುವುದು ಬೇಕಾಗಿಲ್ಲ ಎಂದ ಅವರು, ಸ್ವಾವಲಂಬಿ ಬದುಕಿಗೆ ನೆರವಾಗಲು ಬ್ಯಾಂಕ್ ಸದಾ ಸಿದ್ದವಿದೆ ಎಂದು ಭರವಸೆ ನೀಡಿದರು.
ಚುನಾವಣೆ ಹತ್ತಿರವಾಗುತ್ತಿದೆ, ಕೆಲವು ರಾಜಕೀಯ ನಾಯಕರು ಓಟಿಗಾಗಿ ಹಣ, ಆಮಿಷವೊಡ್ಡಿದರೆ ಧಿಕ್ಕರಿಸಿ ಎಂದು ಕಿವಿಮಾತು ಹೇಳಿದ ಅವರು, ಮತ ಮಾರಾಟ ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹವಾಗಿದೆ, ಮಹಿಳೆಯರೇ ಈ ಅನಿಷ್ಟವನ್ನು ತೊಲಗಿಸುವ ಶಕ್ತಿ ಹೊಂದಿದ್ದೀರಿ, ನಿಮ್ಮಿಂದ ಮಾತ್ರ ಪ್ರಜಾತಂತ್ರ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಪ್ರತಿ ವಾರ ಸಭೆ ಮಾಡಬೇಕು, ಸಂಘದ ಎಲ್ಲಾ ಸದಸ್ಯರೂ ಜವಾಬ್ದಾರಿ ಹೊರಬೇಕು, ಸಾಲದ ಕಂತುಗಳನ್ನು ಸಮರ್ಪಕವಾಗಿ ಪಾವತಿಸುವ ಮೂಲಕ ಬಡ್ಡಿಯಿಂದ ಪಾರಾಗಿ ಅಸಲು ಪಾವತಿಸಿ ಆರ್ಥಿಕವಾಗಿ ಶಕ್ತಿ ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿ, ಸಾಲ ಮಾತ್ರವಲ್ಲ, ವಾಣಿಜ್ಯ ಬ್ಯಾಂಕುಗಳಲ್ಲಿರುವ ನಿಮ್ಮ ಉಳಿತಾಯ ಖಾತೆಯನ್ನು ಡಿಸಿಸಿ ಬ್ಯಾಂಕಿಗೆ ಅಥವಾ ಸೊಸೈಟಿಗೆ ಬದಲಿಸಿ, ಅಲ್ಲೇ ಉಳಿತಾಯ ಮಾಡಿ, ನಿಮಗೆ ಮತ್ತಷ್ಟು ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು.
ಮೀಟರ್ ಬಡ್ಡಿ ಶೋಷಣೆ ತಪ್ಪಿಸಲು ಬ್ಯಾಂಕ್‍ನಿಂದ ಬಡ್ಡಿ ರಹಿತ ಸಾಲ ನೀಡಿದ್ದೇವೆ, ನೀವು ಖಾಸಗಿಯವರಿಗೆ ಸಾಲಕ್ಕೆ ನೀಡುತ್ತಿದ್ದ ಬಡ್ಡಿಯಷ್ಟು ಕಂತು ಪಾವತಿಸಿದರೆ ಸಾಕು ಇಡೀ ನಿಮ್ಮ ಸಾಲ ತೀರುತ್ತದೆ. ಹಾವುದೇ ಕಾರಣಕ್ಕೂ ಖಾಸಗಿಯವರ ಬಳಿ ಸಾಲಕ್ಕೆ ಹೋಗಬೇಡಿ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಸಾಲವನ್ನು ಸಮರ್ಪಕವಾಗಿ ಮರುಪಾವತಿ ಮಾಡಿದರೆ ಹೊಸಬರಿಗೆ ಸಾಲ ಕೊಡಬಹುದು ಎರಡು ಜಿಲ್ಲೆಯಲ್ಲಿ 7 ಲಕ್ಷ ಮಹಿಳೆಯರಿಗೆ ಸಾಲ ನೀಡಿದ್ದೇವೆ, ಸಾಲದ ಹಣ ನೇರ ನಿಮ್ಮ ಉಳಿತಾಯ ಖಾತೆಗೆ ಸಂದಾಯವಾಗುತ್ತದೆ, ಮಧ್ಯವರ್ತಿಗಳ ಹಾವಳಿ ಇಲ್ಲ ನೀವು ಯಾರಿಗೂ ಲಂಚ ನೀಡಬೇಕಾಗಿಲ್ಲ, ಎಟಿಎಂ ಮೂಲಕ ಅಗತ್ಯವಾದಷ್ಟು ಹಣ ಪಡೆದುಕೊಂಡು ಸದುಪಯೋಗಪಡಿಸಿಕೊಳ್ಳಿ ಎಂದು ಕೋರಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ಕೊಡುವ ಸಾಲದಿಂದ ಹಸು ಸಾಕಿ, ಇಲ್ಲವೇ ಆದಾಯ ತರುವ ಇತರೆ ಸ್ವಾವಲಂಬಿ ಬದುಕು ಮಾಡಿಕೊಳ್ಳಿ, ಒಟ್ಟಾರೆ ಪಡೆದ ಸಾಲದಿಂದ ನಿಮ್ಮ ಜೀವನ ಹಸನಾಗಬೇಕು, ಸಾಲದ ಹೊರೆಯಿಂದಲೂ ನೀವು ಬಿಡುಗಡೆ ಹೊಂದಬೇಕು ಎಂಬುದೇ ಡಿಸಿಸಿ ಬ್ಯಾಂಕಿನ ಧ್ಯೇಯವಾಗಿದೆ. ಸಾಲ ಪಡೆಯುವುದು ಮಾತ್ರವಲ್ಲ ಬ್ಯಾಂಕಿನಲ್ಲಿ ಉಳಿತಾಯ ಮಾಡಬೇಕು ಬ್ಯಾಂಕ್ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಆರ್ಥಿಕವಾಗಿ ನೀವು ಕುಟುಂಬಕ್ಕೆ ಮತ್ತು ಬ್ಯಾಂಕ್ ಗೆ ಶಕ್ತಿ ತುಂಬಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ವಾಣಿಜ್ಯ ಬ್ಯಾಂಕುಗಳಲ್ಲಿ ನಿಮ್ಮ ಜಮೀನು ಅಡವಿಟ್ಟು ಸಾಲ ಪಡೆಯಬೇಕು, ಆದರೆ ಡಿಸಿಸಿ ಬ್ಯಾಂಕ್ ಯಾವುದೇ ಭದ್ರತೆಯಿಲ್ಲದೇ ಮಹಿಳೆಯರ ಪ್ರಾಮಾಣಿಕತೆಯನ್ನು ನಂಬಿ ಸಾಲ ನೀಡಿದೆ. ಅದೇ ನಂಬಿಕೆ ನೀವು ಉಳಿಸಿಕೊಳ್ಳಿ, ಪಡೆದ ಸಾಲವನ್ನು ಸ್ವಯಂ ಉದ್ಯೋಗಕ್ಕೆ ಬಳಸಿಕೊಳ್ಳಿ, ಆರ್ಥಿಕವಾಗಿ ಸಬಲರಾಗಿ ಚುನಾವಣೆಗಳು ಬಂದಾಗ ಮಹಿಳೆಯರು ಸ್ವಾಭಿಮಾನ ಕಳೆದುಕೊಂಡು ಓಟಿಗಾಗಿ ಹಣಕ್ಕೆ ಕೈಚಾಚಬೇಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು ಮಾತನಾಡಿ, ಕೋಲಾರ ಡಿಸಿಸಿ ಬ್ಯಾಂಕ್ ಮಹಿಳೆಯರಿಗೆ ನೀಡಿರುವಷ್ಟು ಸಾಲ ದೇಶದ ಯಾವುದೇ ಡಿಸಿಸಿ ಬ್ಯಾಂಕ್ ನೀಡಿಲ್ಲ, ಭದ್ರತೆಯಿಲ್ಲದ ಹಾಗೂ ಬಡ್ಡಿರಹಿತ ಸಾಲ ನೀಡಿದೆ, ತಾಯಂದಿರು ಇದರ ಸದುಪಯೋಗ ಮಾಡಿಕೊಂಡು ಅನೇಕರು ಬದುಕು ಕಟ್ಟಿಕೊಂಡಿದ್ದಾರೆ, ಸಾಲದ ಪ್ರಮಾಣ ಹೆಚ್ಚಿಸಲು ಪ್ರಯತ್ನ ನಡೆದಿದೆ ಎಂದರು.
ಕಾರ್ಯಕ್ರಮದಲ್ಲಿ ಕಸಬಾ ಸೊಸೈಟಿ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸಪ್ಪ, ಉಪಾಧ್ಯಕ್ಷ ಶ್ರೀನಿವಾಸಪ್ಪ, ನಿರ್ದೇಶಕರಾದ ದೊಡ್ಡಹಸಾಳ ವೆಂಕಟೇಶಪ್ಪ, ಚಿಕ್ಕಹಸಾಳದ ಶ್ರೀನಿವಾಸಪ್ಪ ಚಿಕ್ಕಹಸಾಳ, ಶ್ರೀರಾಮರೆಡ್ಡಿ, ಈಕಂಬಳ್ಳಿ ನಾರಾಯಣಸ್ವಾಮಿ, ಪದ್ಮಮ್ಮ, ಸೊಸೈಟಿ ಸಿಇಒ ವೆಂಕಟೇಶ್, ಸಿಬ್ಬಂದಿ ಚರಣ್, ಅರುಣ್, ರಾಮಮೂರ್ತಿ ಮತ್ತಿತರರು ಹಾಜರಿದ್ದರು.