ಕೋಲಾರ ತಾಲ್ಲೂಕಿನ ಹುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ದಾನಿ ಧರ್ಮೇಶ್ ವಿವಿಧ ಸೌಲಭ್ಯ ವಿತರಿಸಿದರು.

ಬಡ ಮಕ್ಕಳಲ್ಲಿ ದೇವರನ್ನು ಕಾಣಬೇಕು

ಕೋಲಾರ: ಮಕ್ಕಳಲ್ಲಿ ದೇವರನ್ನು ಕಾಣಬೇಕು. ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನೆರವಾದರೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ಶಿಕ್ಷಕ ಹಾಗೂ ದಾನಿ ಧರ್ಮೇಶ್ ಹೇಳಿದರು.
ತಾಲ್ಲೂಕಿನ ಹುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ, ತಟ್ಟೆ ಲೋಟ ಹಾಗೂ ಲೇಖನ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಬುದ್ಧಿವಂತ ಮಕ್ಕಳಿದ್ದಾರೆ. ಆದರೆ ಬಡತನದಿಂದಾಗಿ ಅವರ ಪ್ರಗತಿಗೆ ಹಿನ್ನಡೆ ಉಂಟಾಗುತ್ತಿದೆ. ಸರ್ಕಾರದ ಸೌ¯ಭ್ಯದ ಜತೆಗೆ ಸಮುದಾಯ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ಮುಂದಾಗಬೇಕು ಎಂದು ಹೇಳಿದರು.
ಇಸಿಒ ನಂಜುಂಡಗೌಡ ಮಾತನಾಡಿ, ಧರ್ಮೇಶ್ ಪ್ರತಿ ತಿಂಗಳೂ ತಮ್ಮ ಸಂಬಳದಲ್ಲಿ ರೂ.10 ಸಾವಿರ ಉಳಿಸಿ ವಿದ್ಯಾರ್ಥಿಗಳಿಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಿ ದಾನ ಮಾಡುತ್ತಾರೆ. ಸಮುದಾಯದ ಆರೋಗ್ಯ ಹಾಗೂ ಪರಿಸರ ರಕ್ಷಣೆಗೆ ಪೂರಕವಾದ ಕಾರ್ಯಕ್ರಮಗಳಿಗೂ ಆರ್ಥಿಕ ನೆರವು ನೀಡುತ್ತಿದ್ದಾರೆ. ಅಂಥ ಕೊಡುಗೈ ದಾನಿಗಳು ಇರುವುದು ಮಕ್ಕಳ ಸೌಭಾಗ್ಯ ಎಂದು ಹೇಳಿದರು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳು ದಾನಿಗಳು ನೀಡುವ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಬೇಕು. ಮಕ್ಕಳ ಹಿತ ಬಯಸುವ ವ್ಯಕ್ತಿಗಳು ನಿಜವಾದ ದಾನಿಗಳು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಅವರು ಬುದ್ಧಿವಂತರಾದರೆ ದೇಶಕ್ಕೆ ಅದರಿಂದ ಒಳ್ಳೆಯದಾಗುತ್ತದೆ ಎಂದು ಹೇಳಿದರು.
ಇಸಿಒ ಕೆ.ಶ್ರೀನಿವಾಸ್ ಮಾತನಾಡಿ, ಧರ್ಮೇಶ್ ಅವರು ಎಲೆ ಮರೆ ಕಾಯಿಯಂತೆ, ಪ್ರಚಾರ ಬಯದೆ ದಾನ ಮಾಡುತ್ತಿದ್ದಾರೆ. ಈಗಾಗಲೇ ನೂರಾರು ವಿದ್ಯಾರ್ಥಿಗಳು ಅವರ ಸಹಾಯ ಪಡೆದು ಶೈಕ್ಷಣಿಕವಾಗಿ ಮುಂದುವರಿಯುತ್ತಿದ್ದಾರೆ ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಜಿ.ಶ್ರೀನಿವಾಸನ್, ಸಾಹಿತಿ ಆರ್.ಚೌಡರೆಡ್ಡಿ, ಎಸ್‍ಡಿಎಂಸಿ ಅಧ್ಯಕ್ಷ ಜಗದೀಶ್, ಸದಸ್ಯರಾದ ಶ್ರೀರಾಂ, ಕವಿತಾ, ಸುಶೀಲ, ಶಿಕ್ಷಕಿಯರಾದ ಆರತಿ, ಶಾಮಲಮ್ಮ ಇದ್ದರು.