

ಕೋಲಾರ ತಾಲ್ಲೂಕಿನ ಹೊಗರಿ ಗೊಲ್ಲಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಸಮವಸ್ತ್ರ ನೀಡಿದರು.
ಕೋಲಾರ: ಪ್ರತಿಯೊಬ್ಬರೂ ಮಕ್ಕಳಲ್ಲಿ ದೇವರನ್ನು ಕಾಣಬೇಕು. ಅವರ ಶೈಕ್ಷಣಿಕ ಅಭಿವೃದ್ಧಿಗೆ ಕೈಲಾದ ನೆರವು ನೀಡಬೇಕು ಎಂದು ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಹೇಳಿದರು.
ತಾಲ್ಲೂಕಿನ ಹೊಗರಿ ಗೊಲ್ಲಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಓದುವ ಹೆಚ್ಚಿನ ಸಂಖ್ಯೆಯ ಮಕ್ಕಳು ಬಡ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಅವರಿಗೆ ಸರ್ಕಾರದಿಂದ ಕೆಲವು ಸೌಲಭ್ಯಗಳು ದೊರೆಯುತ್ತವೆ. ಅವುಗಳ ಜತೆಗೆ ದಾನಿಗಳು ಕೈ ಜೋಡಿಸಿದಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಹಾಯವಾಗುತ್ತದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ವೆಂಕಟಶಿವಪ್ಪ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿರುವ ಎಸ್.ಆರ್.ಧರ್ಮೇಶ್ ತಮ್ಮ ವೇತನದ ಸ್ವಲ್ಪ ಭಾಗವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಟ್ಟಿದ್ದಾರೆ. ಪ್ರತಿ ತಿಂಗಳೂ ರೂ.10 ಸಾವಿರ ಪಕ್ಕಕ್ಕಿಟ್ಟು ಮಕ್ಕಳ ಅಗತ್ಯಗಳನ್ನು ಖರೀದಿಸಿ ಕೊಡುತ್ತಿದ್ದಾರೆ. ಅವರ ಸಮಾಜ ಸೇವೆ ಹಾಗೂ ಬಡವರ ಬಗ್ಗೆ ಇರುವ ಕಳಕಳಿ ಸ್ತುತ್ಯಾರ್ಹ ಎಂದು ಹೇಳಿದರು.
ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ, ಪುಸ್ತಕ ಓದಬೇಕು. ತಾವು ಓದಿದ ಶಾಲೆ, ಶಿಕ್ಷಕರು ಹಾಗೂ ಪೋಷಕರಿಗೆ ಒಳ್ಳೆ ಹೆಸರು ತರಬೇಕು. ದಾನಿಗಳು ನೀಡುವ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ವೆಂಕಟಶಿವಪ್ಪ, ಆರ್.ನಾರಾಯಣಪ್ಪ, ಶ್ರೀನಿವಾಸಪ್ಪ ಮುಖ್ಯ ಶಿಕ್ಷಕ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಗೋಪಾಲ್ ಶಿಕ್ಷಕಿ ಆರ್.ನಿಮಾಲ ಇದ್ದರು.