ಎಪ್ಸನ್ ಕಂಪನಿಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ 1ಲಕ್ಷ ನೋಟ್‍ ಪುಸ್ತಕಗಳ ಕೊಡುಗೆ : ಸರ್ಕಾರಿ ಶಾಲೆಗಳ ಡಿಜಟಲೀಕರಣಕ್ಕೆ ವಿವಿಧ ಕಂಪನಿಗಳ ಸಹಕಾರ-ಎಸ್ಪಿ ದೇವರಾಜ್

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ,  ಸಂಪಾದಕರು: ಬರ್ನಾಡ್ ಡಿ’ಕೋಸ್ತಾ

ಕೋಲಾರ:- ಸ್ವರ್ಧಾತ್ಮಕ ಜಗತ್ತಿನಲ್ಲಿ ಕಲಿಕೆಯಲ್ಲಿ ಮಕ್ಕಳು ಸದೃಢರಾಗಲು ಕಂಪ್ಯೂಟರ್ ಶಿಕ್ಷಣ ಅತ್ಯಗತ್ಯವಾಗಿದ್ದು, ವಿವಿಧ ಕಂಪನಿಗಳ ಸಹಕಾರ ಪಡೆದ ಆಯ್ದ ಶಾಲೆಗಳ ಡಿಜಟಲೀಕರಣಕ್ಕೆ ಕ್ರಮವಹಿಸೋಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ತಿಳಿಸಿದರು.
ತಾಲ್ಲೂಕಿನ ವೇಮಗಲ್ ಸರ್ಕಾರಿಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಕ ಗೆಳೆಯರ ಬಳಗದ ಆಶ್ರಯದಲ್ಲಿ ಎಪ್ಸನ್ ಕಂಪನಿ ಕೊಡುಗೆಯಾಗಿ ನೀಡಿರುವ 1 ಲಕ್ಷಕ್ಕೂ ಹೆಚ್ಚು ನೋಟ್ ಪುಸ್ತಕ ವಿತರಿಸಿ ಅವರು ಮಾತನಾಡುತ್ತಿದ್ದರು.
ವಿವಿಧ ಕಂಪನಿಗಳ ಸಹಕಾರ ಪಡೆದು ಆಯ್ದ ಶಾಲೆಗಳನ್ನು ಡಿಜಟಲೀಕರಣಗೊಳಿಸಲು ಆದಷ್ಟು ಶೀಘ್ರ ರೂಪರೇಷೆ ಸಿದ್ದಪಡಿಸಲು ಸೂಚಿಸಿದ ಅವರು,ಪ್ರಾಥಮಿಕ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ಸಿಕ್ಕರೆ ಮಕ್ಕಳಿಗೆ ಉತ್ತಮ ಬುನಾದಿ ಹಾಕಿದಂತಾಗುತ್ತದೆ ಎಂದರು.
ಕೋಲಾರಕ್ಕೆ ಸಂಬಂಧವೇ ಇಲ್ಲದ ಎಪ್ಸನ್ ಕಂಪನಿ ಜಿಲ್ಲೆಗೆ ಇಷ್ಟೊಂದು ನೆರವು ನೀಡಲು ಮುಂದೆ ಬಂದಿರುವುದು ಶ್ಲಾಘನೀಯ, ವಿಷಯ ಸಣ್ಣದಾದರೂ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳ ಮಕ್ಕಳಲ್ಲಿ ಇದು ಅತ್ಯಂತ ಸಂತೋಷ ನೀಡುವ ಕಾರ್ಯಕ್ರಮ ಎಂದು ತಿಳಿಸಿದರು.

ಶಿಕ್ಷಕರ ಜವಾಬ್ದಾರಿ ಬಹಳ ದೊಡ್ಡದು


ಸಣ್ಣವಯಸ್ಸಿನಲ್ಲೇ ಕಲಿಸುವ ಶಿಸ್ತು ಜೀವನಕ್ಕೆ ಅಡಿಪಾಯವಿದ್ದಂತೆ, ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಶಿಸ್ತು, ಸ್ವಚ್ಚತೆ ಬೆಳೆಸಿದರೆ ಅವರು ಸಮಾಜಕ್ಕೆ ಆಸ್ತಿಯಾಗುತ್ತಾರೆ ಮತ್ತು ಉತ್ತಮ ಪ್ರಜೆಗಳಾಗಲು ಸಹಕಾರಿ ಎಂದರು.
ಸಮಾಜದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಗುರುವಿಗೆನೀಡುವ ಗೌರವ ಕಡಿಮೆಯಾಗುವುದಿಲ್ಲ, ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಲಘುವಾಗಿ ಪರಿಗಣಿಸಿದಾಗ ಮಕ್ಕಳು ದಾರಿ ತಪ್ಪುತ್ತಾರೆ ಎಂದು ಎಚ್ಚರಿಸಿದ ಅವರು, ಮಕ್ಕಳನ್ನು ಸಮಾಜ,ದೇಶಕ್ಕೆ ಆಸ್ತಿಯನ್ನಾಗಿ ಮಾಡಿ ಎಂದು ಕಿವಿಮಾತು ಹೇಳಿದರು.

ಕಲಿಕೆಗೆ ಬಡತನ ಅಡ್ಡಿಯಾಗದಿರಲಿ


ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ಪ್ರದೀಪ್‍ಕುಮಾರ್ ಮಾತನಾಡಿ, ಮಕ್ಕಳ ಕಲಿಕೆಗೆ ಬಡತನ ಅಡ್ಡಿಯಾಗಬಾರದು, ಎಪ್ಸನ್ ಕಂಪನಿ ಜಿಲ್ಲೆಯೊಂದಿಗೆ ಹೊಂದಿರುವ ಸಂಬಂಧ ಮುಂದುವರೆಸಿಕೊಂಡು ಹೋಗಲಿ ಎಂದು ಆಶಿಸಿದ ಅವರು,ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಶಿಕ್ಷಕ ಗೆಳೆಯರ ಬಳಗ ವಿವಿಧ ಕಂಪನಿಗಳು-ಶಾಲೆಗಳ ನಡುವೆ ಸೇತುವೆಯಾಗಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಅಭಿನಂದಿಸಿದರು.
ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ಮಾತನಾಡಿ, ನಾನೂ ಸರ್ಕಾರಿ ಶಾಲೆಯಲ್ಲೇ ಓದಿದ್ದು, ನನಗೆ ಬಡ ಮಕ್ಕಳ ನೋವಿನ ಸಂಕಷ್ಟದ ಅರಿವಿದೆ, ಸರ್ಕಾರಿ ಶಾಲೆಗಳ ಕುರಿತು ಪೋಷಕರಲ್ಲಿನ ನಂಬಿಕೆ ಬಲಗೊಳಿಸಿ, ದಾಖಲಾತಿ ಹೆಚ್ಚಳದ ಮೂಲಕ ಸಮಾನ ಶಿಕ್ಷಣಕ್ಕಾಗಿ ಈ ಶಾಲೆಗಳನ್ನು ಉಳಿಸುವ ಸದುದ್ದೇಶದಿಂದ ಶಿಕ್ಷಕ ಗೆಳೆಯರ ಬಳಗ ಈ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಗೆಳೆಯರ ಬಳಗದ ಉಪಾಧ್ಯಕ್ಷ ವೀರಣ್ಣಗೌಡ, ಶಿಕ್ಷಕ ಗೆಳೆಯರ ಬಳಗ ಕಳೆದ 15 ವರ್ಷಗಳಿಂದ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ದುಡಿಯುತ್ತಿದೆ, ಎಪ್ಸನ್ ಕಂಪನಿ ಕಳೆದ 6 ವರ್ಷಗಳಿಂದ ತಾಲ್ಲೂಕಿನ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿ ವರ್ಷ ಸುಮಾರು 1 ಲಕ್ಷ ನೋಟ್ ಪುಸ್ತಕ ನೀಡುತ್ತಿದ್ದು, ಇದರ ಜತೆಗೆ ಈ ಬಾರಿ 42 ಶಾಲೆಗಳಿಗೆ 52 ವಾಟರ್‍ಫಿಲ್ಟರ್ ನೀಡುವ ಮೂಲಕ ಮಕ್ಕಳಿಗೆ ಶುದ್ದ ಕುಡಿಯುವ ನೀರು ಒದಗಿಸಿದೆ ಎಂದು ಅಭಿನಂದಿಸಿದರು.
ಇದೀಗ ಈ ವರ್ಷ ತಾಲ್ಲೂಕಿನ 19 ಕ್ಲಸ್ಟರ್‍ಗಳ 220 ಸರ್ಕಾರಿ ಶಾಲೆಗಳಿಗೆ ಒಟ್ಟು 1,01220 ಪುಸ್ತಕಗಳನ್ನು ಪ್ರತಿ ವಿದ್ಯಾರ್ಥಿಗೆ ತಲಾ 6 ಪುಸ್ತಕದಂತೆ ಎಪ್ಸನ್ ಕಂಪನಿ ಒದಗಿಸಿದ್ದು, ಕಂಪನಿ ಅಧಿಕಾರಿಗಳಾದ ರಾಜೇಂದ್ರ ಮತ್ತಿತತರರಿಗೆ ಧನ್ಯವಾದ ಸಲ್ಲಿಸಿದರು.
ಎಸ್ಪಿ ದೇವರಾಜ್ ಅವರು 12 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಎಸಿಪಿಯಾಗಿದ್ದಾಗ ತಾಲ್ಲೂಕಿನ 32 ಶಾಲೆಗಳಿಗೆ ಗ್ರಂಥಾಲಯ ಪುಸ್ತಕ ಕೊಡುಗೆ ನೀಡಿದ್ದನ್ನು ಸ್ಮರಿಸಿದ ಅವರು,ತಾಲ್ಲೂಕಿನ ಮಕ್ಕಳಿಗೆ ಅಗತ್ಯ ಶೈಕ್ಷಣಿಕ ಪರಿಕರ ಸಿಗಲು ರಾಜಸ್ತಾನ್ ಕಾಸ್ಮ ಫೌಂಡೇಷನ್ ಕಂಪನಿ ಪರಿಚಯಿಸಿದ್ದೇ ಅವರು ಎಂದು ತಿಳಿಸಿ, ಜಿಲ್ಲೆಯಲ್ಲಿ ಕೋಮು ಸಾಮರಸ್ಯ,ಯುಗಾದಿ ಉತ್ಸವ, ಸಂಚಾರಿ ಸಮಸ್ಯೆ ನಿರ್ವಹಣೆ,ತಂದೆ,ತಾಯಿ ಹೆಸರಲ್ಲಿ ಐಎಎಸ್,ಐಪಿಎಸ್ ಕೋಚಿಂಗ್ ಕೇಂದ್ರ ಸ್ಥಾಪನೆ ಮತ್ತಿತರ ಸಾಮಾಜಿಕ ಕಾರ್ಯಗಳು ನಮಗೆ ಪ್ರೇರಣೆಯಾಗಿವೆ ಎಂದರು.
ಇಸಿಒ ಹಾಗೂ ಸಮಾಜಸೇವಕ ಬೈರೆಡ್ಡಿ, ಶಾಲೆಗಳಿಗೆ ಪುಸ್ತಕ ಪಡೆಯಲು ಬಂದ 150ಕ್ಕೂ ಹೆಚ್ಚು ಶಿಕ್ಷಕರಿಗೆ ಊಟದ ವ್ಯವಸ್ಥೆ ಕಲ್ಪಿಸಿ ಹೃದಯವಂತಿಕೆ ಮೆರೆದಿದ್ದು, ಪುಸ್ತಕ ವಿತರಣೆಯಲ್ಲಿ ಶಿಕ್ಷಕರಾದ ಸೋಮಶೇಖರ್, ಬಳಗದ ಕಾರ್ಯದರ್ಶಿ ಗೋವಿಂದ್, ಬಾಬುರಾವ್, ವೆಂಕಟಾಚಲಪತಿ, ಸೀರೆಸಂದ್ರನಾಗರಾಜ್, ಕೆಂಬೋಡಿ ಮಂಜುನಾಥ್, ಕೃಷ್ಣಪ್ಪ,ಚಿಕ್ಕಣ್ಣ ಮತ್ತಿತರರು ಶ್ರಮಿಸಿದರು.
ಕಾರ್ಯಕ್ರಮದಲ್ಲಿ ಎಪ್ಸನ್ ಕಂಪನಿ ಅಧಿಕಾರಿಗಳಾದ ರಾಜೇಂದ್ರ, ವಿಜಯ್‍ಗೋವಿಂದ್, ವೇಲಾನಂದ್, ಸ್ಯಾಮುಯಲ್,ಇಸಿಒಗಳಾದ ಆರ್.ಶ್ರೀನಿವಾಸನ್, ಬೈರೆಡ್ಡಿ, ಮುಖ್ಯಶಿಕ್ಷಕ ವೆಂಕಟೇಶ್, ಸಿಆರ್‍ಪಿ ಗೋವಿಂದ್,ಶಿಕ್ಷಕ ಗೆಳೆಯರ ಬಳಗದ ಸೋಮಶೇಖರ್, ವೆಂಕಟಾಚಲಗೌಡ, ವೆಂಕಟರಾಂ ಮತ್ತಿತರರಿದ್ದರು.