ಮಹಿಳಾ ಹಕ್ಕುಗಳ ವಿಚಾರ ಸಂಕಿರಣದಲ್ಲಿ ವಿಭಾಗಾಧಿಕಾರಿ ಕರೆ ಮಕ್ಕಳಲ್ಲಿ ಹೆಣ್ಣ,ಗಂಡೆಂಬ ಭೇದ ತೊರದಿರಿ-ಸೋಮಶೇಖರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಮಕ್ಕಳನ್ನು ಪೋಷಕರು ಹೆಣ್ಣು ಗಂಡು ಮಗು ತಾರತಮ್ಯ ಇಲ್ಲದಂತೆ ಸಮಾನತೆಯಿಂದ ಬೆಳೆಸಿ ಆತ್ಮವಿಶ್ವಾಸ ತುಂಬಬೇಕೆಂದು ಉಪವಿಭಾಗಾಧಿಕಾರಿ ಸೋಮಶೇಖರ್ ಹೇಳಿದರು.
ದಲಿತ ಸಂಘರ್ಷ ಸಮಿತಿ ಕರ್ನಾಟಕ, ದಲಿತ ಮಹಿಳಾ ಒಕ್ಕೂಟ ಕರ್ನಾಟಕ ಆಶ್ರಯದಲ್ಲಿ ಕಾರಂಜಿಕಟ್ಟೆ ಬಡಾವಣೆಯ ಧರ್ಮರಾಯಸ್ವಾಮಿ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಮಹಿಳಾ ಹಕ್ಕುಗಳ ಮತ್ತು ಸಂವಿಧಾನ ಉಳಿವಿಗಾಗಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭಾರತೀಯ ಪ್ರಾಚೀನ ಯುಗದಲ್ಲಿ ಮಹಿಳೆಯರಿಗೆ ಸಮಾನವಾದ ಅವಕಾಶಗಳಿದ್ದವು ಆದರೆ ಮಧ್ಯಯುಗದ ಸಂದರ್ಭದಲ್ಲಿ ಮಹಿಳೆಯರ ಸ್ಥಿತಿ ಶೋಚನೀಯವಾಯಿತು, ಆಧುನಿಕ ಯುಗದಲ್ಲಿ ಮಹಿಳೆಯರು ಹೋರಾಟದಿಂದ ಹಲವಾರು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ, ಆದರೆ, ಇನ್ನೂ ಅಸಮಾನತೆ ಇದೆ, ಸಮಾನತೆಯ ಪರಿವರ್ತನೆ ಮನೆಯಿಂದಲೇ ಆರಂಭವಾಗಬೇಕಿದೆಯೆಂದರು.
ಮಹಿಳೆಯರು ತಮ್ಮ ಮೇಲೆ ಆಗುತ್ತಿರುವ ಶೋಷಣೆ ದೌರ್ಜನ್ಯ ವಿರುದ್ಧ ಸಂಘಟಿತರಾಗಿ ಧ್ವನಿ ಎತ್ತಬೇಕು ಆಗಲೇ ಶೋಷಣೆಯನ್ನು ತಡೆಗಟ್ಟಲು ಸಾಧ್ಯವಾಗುತ್ತದೆ, ನಿರ್ಭಯಾ ಕಾನೂನಿನ ನಂತರ ಮಹಿಳೆಯರ ಶೋಷಣೆಯ ವಿರುದ್ಧ ಕಾನೂನಾತ್ಮಕವಾಗಿ ರಕ್ಷಣೆ ಪಡೆಯಲು ಸಾಧ್ಯವಾಗಿದೆಯೆಂದರು.
ಮಹಿಳೆಯರು ಸಾಮಾಜಿಕವಾಗಿ ಮಾತ್ರವಲ್ಲದೆ ಆರ್ಥಿಕವಾಗಿ, ಕೈಗಾರಿಕೋದ್ಯಮಿಗಳಾಗಿ, ಆಡಳಿತಗಾರರಾಗಿ ಹೊರ ಹೊಮ್ಮಬೇಕಾಗಿದೆಯೆಂದು ಸಲಹೆ ನೀಡಿದರು.
ಕೋಲಾರ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಇಂದಿಗೆ 110 ವರ್ಷಗಳ ಹಿಂದೆ ಮಹಿಳಾ ಪರ ಹೋರಾಟ ಆರಂಭವಾಗಿ ಮಹಿಳಾ ದಿನಾಚರಣೆಯಾಯಿತು, ಭಾರತದ ಇತಿಹಾಸದಲ್ಲಿ ಮಹಿಳೆಯರು ಹಕ್ಕುಗಳಿಗಾಗಿ ಹೋರಾಟ ನಡೆಸದೇ ಇದ್ದರೂ ಡಾ.ಅಂಬೇಡ್ಕರ್ ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಿದ್ದಾರೆಂದರು. ಇಂದು ಸಂವಿಧಾನವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕಿದೆಯೆಂದರು.

ಮಹಿಳಾ ಸಾಂತ್ವಾನ ಸಹಾಯವಾಣಿ ಅಧ್ಯಕ್ಷೆ ಮಮತಾರೆಡ್ಡಿ ಮಾತನಾಡಿ, ಸಂವಿಧಾನವನ್ನು ಉಳಿಸಿಕೊಳ್ಳುವುದು ಹಾಗೂ ಮಹಿಳೆಯರು ಹಕ್ಕುಗಳಿಗಾಗಿ ಹೋರಾಟ ನಡೆಸುವುದು ಒಂದೇ ನಾಣ್ಯದ ಎರಡು ಮುಖಗಳಾಗಿವೆ, ಏಳು ದಶಕಗಳ ನಂತರವೂ ಮಹಿಳೆಯರು ಹಕ್ಕುಗಳಿಗಾಗಿ ಬೇಡಿಕೆ ಇಡುವುದು ನಾಚಿಕೆಗೇಡಿನ ವಿಚಾರ, ಇದಕ್ಕೆ ಸಮಾಜವೇ ಹೊಣೆಯಾಗಿದೆ, ಈ ತಪ್ಪನ್ನು ಈಗಲಾದರೂ ಸರಿಪಡಿಸಿಕೊಳ್ಳೋಣ ಎಂದರು.
ಸಂವಿಧಾನ ಆಶಯ ಮತ್ತು ಮಹಿಳಾ ಹಕ್ಕುಗಳು ಕುರಿತು ವಕೀಲರು ಹಾಗೂ ಹಕ್ಕುಗಳ ಹೋರಾಟಗಾರ್ತಿ ಎಂ.ವಿ.ರತ್ನಮ್ಮ ಹಾಗೂ ಮಹಿಳಾ ದೌರ್ಜನ್ಯ ತಡೆ ಹಾಗೂ ಸಬಲೀಕರಣ ವಿಷಯ ಕುರಿತು ಸರಕಾರಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಕೇಂದ್ರದ ಪ್ರಾಂಶುಪಾಲರಾದ ಎಸ್.ವಿಜಯಮ್ಮ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಸಂಸ ಕರ್ನಾಟಕ ರಾಜ್ಯ ಸಂಚಾಲಕ ಅಣ್ಣಯ್ಯವಹಿಸಿದ್ದರು.
ವೇದಿಕೆಯಲ್ಲಿ ದಸಂಸ ಕರ್ನಾಟಕ ಜಿಲ್ಲಾ ಸಂಚಾಲಕಿ ಲಕ್ಷ್ಮಿ, ಮುಖಂಡರಾದ ಉಮಾದೇವಿ, ಚಿಕ್ಕವಲಗಮಾದಿ ಲಕ್ಷ್ಮಮ್ಮ, ಹಿರೇಕರಪನಹಳ್ಳಿ ಯಲ್ಲಪ್ಪ, ಮುನಿಕೃಷ್ಣ, ದೊಡ್ಡಮಲ್ಲೇ ರವಿ, ಉಮಾದೇವಿ, ಮುನಿಸ್ವಾಮಿ, ಶಬರೀನ್‍ತಾಜ್, ಶಿಲ್ಪ, ಪಲ್ಲವಿ, ಮಂಜುಳಾ, ಮೀನಾಕುಮಾರಿ, ಇತರರು ಉಪಸ್ಥಿತರಿದ್ದರು.
ರೇಣುಕಾ ಕಾರ್ಯಕ್ರಮ ನಿರೂಪಿಸಿದರು. ಮಹಿಳೆಯರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಿದವು
.