ಕೋಲಾರ: ಸ್ವಾತಂತ್ರ್ಯ ಹೋರಾಟದ ತೀವ್ರತೆಯನ್ನು ತಗ್ಗಿಸಲು ಬ್ರಿಟೀಷರು ಹಿಂದೂ ಮುಸ್ಲಿಂ ವಿಭಜನೆ ಮಾಡಿ ಆಡಳಿತ ನಡೆಸಿದರು, ಒಡೆದು ಆಳುವ ನೀತಿ ಅಂದಿನಿಂದ ಇಂದಿನವರೆವಿಗೂ ಮುಂದುವರೆದಿದೆ ಎಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.
ನಗರದ ಬೊಂಬು ಬಜಾರ್ ಟಿಪ್ಪು ಸುಲ್ತಾನ್ ಬೀದಿಯಲ್ಲಿ ಜಮೀಯತ್ ಉಲೇಮಾ ಆಯೋಜಿಸಿದ್ದ ಸ್ವಾತಂತ್ರ್ಯ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
1757 ರ ಪ್ಲಾಸಿ ಕದನ ಸಿರಾಜುದ್ದೌಲನಿಂದ ಹಿಡಿದು 1857 ರ ಸಿಪಾಯಿ ದಂಗೆ ಆನಂತರ ದೇಶಕ್ಕೆ 1947 ಸ್ವಾತಂತ್ರ್ಯ ಬರುವವರೆವಿಗೂ ನಡೆದ ವಿವಿಧ ಹಂತಗಳ ಹೋರಾಟದಲ್ಲಿ ಮುಸ್ಲಿಂಮರು ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಬ್ರಿಟೀಷರ ವಿರುದ್ಧ ಮೊದಲು ತಿರುಗಿ ಬಿದ್ದು ಹೋರಾಟಕ್ಕೆ ನಾಂದಿ ಹಾಡಿದ್ದೆ ಮುಸ್ಲಿಂ ದೊರೆಗಳೆಂದು ಹೇಳಿದರು.
ಒಂದು ಹಂತದಲ್ಲಿ ಸಿಪಾಯಿ ದಂಗೆಯಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದನ್ನು ಗಮನಿಸಿದ ಬ್ರಿಟೀಷರು ಅದಕ್ಕೆ ಮುಸ್ಲಿಂ ದಂಗೆ ಎಂದೇ ಹೆಸರಿಟ್ಟಿದ್ದರು. ಸಿಪಾಯಿ ದಂಗೆಯ ನಂತರ ಹಿಂದು ಮುಸ್ಲಿಂ ಐಕ್ಯತೆಯನ್ನು ಒಡೆಯಲು ಬ್ರಿಟೀಷರು ಇಂಡಿಯನ್ ಮುಸ್ಲಿಮ್ಸ್ ಎಂಬ ಪುಸ್ತಕವನ್ನು ಬರೆಯುವ ಮೂಲಕ ಒಬ್ಬರ ಮೇಲೆ ಒಬ್ಬರನ್ನು ಎತ್ತಿ ಕಟ್ಟಿದರು. ಅದು ದೇಶಕ್ಕೆ ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರವೂ ಮುಂದುವರೆದಿದೆ, ಇದನ್ನು ಅರ್ಥ ಮಾಡಿಕೊಂಡು ಹಿಂದು ಮುಸ್ಲಿಂಮರು ಐಕ್ಯತೆಯಿಂದ ದೇಶದ ಪ್ರಗತಿಯಲ್ಲಿ ತೊಡಗಬೇಕೆಂದು ಹೇಳಿದರು.
ಭಾರತ ದೇಶಕ್ಕೆ ತ್ರಿವರ್ಣ ಧ್ವಜವನ್ನು ಹೈದರಾಬಾದ್ ರಾಷ್ಟ್ರಪ್ರೇಮಿ ಮುಸ್ಲಿಂ ಕುಟುಂಬದ ಸುರಯ್ಯಾ ತ್ಯಾಬ್ಜಿ ಎಂಬ ಹೆಣ್ಣು ಮಗಳು ರೂಪಿಸಿಕೊಟ್ಟರೆಂಬ ಮಾಹಿತಿಯೇ ಹೆಚ್ಚಿನ ಮಂದಿಗೆ ತಿಳಿದಿಲ್ಲ, ತ್ಯಾಬ್ಜಿ ಕುಟುಂಬವು ಹೈದರಾಬಾದ್ ನಿಜಾಮರ ವಿರೋಧದ ನಡುವೆಯೂ ಹಿಂದುಸ್ತಾನ್‍ದ ಮೇಲಿನ ಪ್ರೀತಿಯನ್ನು ಬಿಟ್ಟುಕೊಟ್ಟಿರಲಿಲ್ಲ ಎಂದು ವಿವರಿಸಿದರು.
ಸ್ವಾತಂತ್ರ್ಯ ಅಮೃತಮಹೋತ್ಸವ ಸಂದರ್ಭದಲ್ಲಿ ಆ.13 ರಿಂದ 15 ರ ಸಂಜೆಯವರೆವಿಗೂ ರಾಷ್ಟ್ರಧ್ವಜವನ್ನು ಎಲ್ಲೆಡೆ ಹಾರಿಸಲು ಅನುಮತಿಸಲಾಗಿದೆ, ಆದರೆ, ಆನಂತರವೂ ತ್ರಿವರ್ಣ ಧ್ವಜವನ್ನು ಹಾರಿಸುತ್ತಾ ಅಪಮಾನ ಮಾಡುವುದನ್ನು ತಡೆಯಬೇಕು, ಹಾರಿಸಿರುವ ಬಾವುಟಗಳನ್ನು ಗೌರವದಿಂದ ಇಳಿಸಿ ಸಂರಕ್ಷಿಸಬೇಕು ಎಂದು ವಿವರಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಜೆ.ಜಿ.ನಾಗರಾಜ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರುವ ಮುಸಲ್ಮಾನ್ ದೊರೆಗಳನ್ನು ಸ್ಮರಿಸುತ್ತಾ ಅವರ ಹಾದಿಯಲ್ಲಿ ಪ್ರತಿಯೊಬ್ಬರು ದೇಶ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಆಚಾರ್ಯ ಚಿನ್ಮಯಾನಂದ ಅವಧೂತರು ಮಾತನಾಡಿ, ಸ್ವಾತಂತ್ರ್ಯ ಹೋರಾಟದ ನೈಜ ಇತಿಹಾಸವನ್ನು ಅರ್ಥ ಮಾಡಿಕೊಂಡು ಕನಿಷ್ಠ ಕೋಲಾರ ಜಿಲ್ಲೆಯಲ್ಲಾದರೂ ಹಿಂದು ಮುಸ್ಲಿಂಮರು ಐಕ್ಯತೆಯಿಂದ ರಾಷ್ಟ್ರಕ್ಕೆ ಮಾದರಿಯಾಗಬೇಕೆಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಸಂತ ಮೇರಿಯಮ್ಮ ಚರ್ಚ್‍ನ ಫಾದರ್ ವಿವಿಧ ಮಸೀ„ಗಳ ಮೌಲ್ವಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ಹಾಡು ಮತ್ತು ಸ್ವಾತಂತ್ರ್ಯ ಅಮೃತ ಮಹೋತ್ಸವ ಕುರಿತು ಉಪನ್ಯಾಸ ನೀಡಿದರು.
ಬೊಂಬು ಬಜಾರ್ ಸುತ್ತಮುತ್ತಲಿನ ನೂರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
1708ಕೆಎಲ್‍ಆರ್‍ಪಿ-
ಕೋಲಾರ ನಗರದ ಬೊಂಬು ಬಜಾರ್ ಟಿಪ್ಪು ಸುಲ್ತಾನ್ ಬೀದಿಯಲ್ಲಿ ಜಮೀಯತ್ ಉಲೇಮಾ ಆಯೋಜಿಸಿದ್ದ ಸ್ವಾತಂತ್ರ್ಯ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂಮರ ಪಾತ್ರ ಹಾಗೂ ತ್ರಿವರ್ಣ ಧ್ವಜ ಕುರಿತಂತೆ ಮಾತನಾಡಿದರು.