

ಕೋಲಾರ,ಮಾ.01: ಹಿರಿಯ ಪತ್ರಕರ್ತರ ಕೆ.ಬಿ ಜಗದೀಶ್ ಅವರ ಪತ್ರಿಕೋದ್ಯಮದಲ್ಲಿನ ಸೇವೆ ಹಾಗೂ ಶ್ರಮಕ್ಕೆ ಇವತ್ತು ಪ್ರಶಸ್ತಿ ಬಂದಿದೆ ಅವರ ಮಾರ್ಗದರ್ಶನ ಕಿರಿಯ ಪತ್ರಕರ್ತರಿಗೆ ಪ್ರಸ್ತುತ ಸಂದರ್ಭದಲ್ಲಿ ಅತ್ಯವಶ್ಯಕವಾಗಿದೆ ಎಂದು ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್. ಗಣೇಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರಾಜ್ಯ ಸಂಘದಿಂದ ಎಂ.ನಾಗೇಂದ್ರ ರಾವ್ ಹೆಸರಿನಲ್ಲಿ ಕೊಡುಮಾಡುವ ದತ್ತಿನಿಧಿ ಪ್ರಶಸ್ತಿಗೆ ಭಾಜನರಾದ ಕೆ.ಬಿ ಜಗದೀಶ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಪತ್ರಕರ್ತರಿಗೆ ಕೊಡುವ ಪ್ರಶಸ್ತಿಗಳಲ್ಲಿ ಕೋಲಾರ ಜಿಲ್ಲೆಯವರು ಇದ್ದೇ ಇರ್ತಾರೆ ಇಂದು ಜಗದೀಶ್ ಅವರಿಗೆ ಪ್ರಶಸ್ತಿ ಬಂದಿರುವುದು ಅವರ ಮೂವತ್ತು ವರ್ಷಗಳ ಶ್ರಮಕ್ಕೆ ಕೊಟ್ಟ ಗೌರವವಾಗಿದೆ ಎಂದರು.
ಜಗದೀಶ್ ಅವರು ಬದುಕಿನ 50 ವರ್ಷಗಳಲ್ಲಿ ಆನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ ಪತ್ರಕರ್ತನಾಗಿ, ರಾಜಕಾರಣಿಯಾಗಿ, ಜೊತೆಗೆ ಉದ್ಯಮಿಯಾಗಿ ಪ್ರಯತ್ನ ಪಟ್ಟರು ಕೊನೆಯಲ್ಲಿ ಪತ್ರಕರ್ತನಾಗಿ ಯಶಸ್ಸು ಕಂಡಿದ್ದಾರೆ. ವೃತ್ತಿ ಜೀವನದಲ್ಲಿ ಛಲ ಬಿಡದೇ ಪ್ರಯತ್ನ ಪಟ್ಟಿದ್ದರ ಫಲ ಇವತ್ತು ಅವರು ಈ ಹಂತಕ್ಕೆ ಬಂದಿದ್ದಾರೆ ಮುಂದೆಯೂ ಹಿರಿಯ, ಕಿರಿಯ ಪತ್ರಕರ್ತರಿಗೆ ಮಾರ್ಗದರ್ಶನ ನೀಡಿ ಜೊತೆಗೆ ಕರೆದುಕೊಂಡು ಹೋಗಲಿ ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ನಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇದ್ದರೆ ಪ್ರಶಸ್ತಿಗಳು ತಾವಾಗಿಯೇ ಹುಡುಕಿಕೊಂಡು ಬರತ್ತವೆ ಎಂಬುದಕ್ಕೆ ಕೆ.ಬಿ ಜಗದೀಶ್ ಅವರು ಉದಾಹರಣೆ ಆಗಿದ್ದಾರೆ ಯುವ ಪತ್ರಕರ್ತರು ಇಂತಹವರನ್ನು ಮಾದರಿಯಾಗಿಸಿಕೊಂಡು ತಾವು ಸಹ ಉತ್ತಮ ಸುದ್ದಿಗಳನ್ನು ಮಾಡುವತ್ತ ಗಮನಹರಿಸಬೇಕೆಂದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಚಂದ್ರಶೇಖರ್ ಮಾತನಾಡಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರಶಸ್ತಿಗಳು ಘೋಷಣೆ ಮಾಡಿದಾಗ ಅದರಲ್ಲಿ ಕೋಲಾರ ಜಿಲ್ಲೆಯ ಪತ್ರಕರ್ತರ ಹೆಸರು ಘೋಷಣೆಯಾಗುತ್ತಿರುವುದು ಹೆಮ್ಮೆಯ ವಿಚಾರ. ಇದೇ ರೀತಿ ಯುವ ಪತ್ರಕರ್ತರು ಸನ್ಮಾನಿತರನ್ನ ಮಾದರಿಯಾಗಿ ತೆಗೆದುಕೊಂಡು ಕೆಲಸ ಮಾಡಬೇಕೆಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಎಂ.ವಾಸುದೇವಹೊಳ್ಳ ಮಾತನಾಡಿ, ಕಳೆದ 35 ವರ್ಷಗಳಿಂದ ಜಗದೀಶ್ ಅವರನ್ನು ನೋಡಿಕೊಂಡು ಬಂದಿದ್ದೇನೆ. ಎಲ್ಲೂ ಸಹ ಯಾವುದಕ್ಕೂ ಲಾಭಿ ಮಾಡಿದವರಲ್ಲ, ತಾನಾಯಿತು. ತನ್ನ ಕೆಲಸವಾಯಿತು ಎಂದು ತನ್ನ ವೃತ್ತಿ ಧರ್ಮವನ್ನು ಪಾಲಿಸಿಕೊಂಡು ಬಂದವರು. ಇಂತಹ ವೃತ್ತಿನಿರತ ಪತ್ರಕರ್ತ ಕೆ.ಬಿ.ಜಗದೀಶ್ ಅವರಿಗೆ ಪ್ರಶಸ್ತಿ ಸಿಕ್ಕಿರುವುದು ಸಂತಸದ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಲ್ಲಾ ಪತ್ರಕರ್ತರು ಉಪಸ್ಥಿತರಿದ್ದರು.

