ಕೋಲಾರ:- ಜಿಲ್ಲಾದ್ಯಂತ 65 ಕೇಂದ್ರಗಳಲ್ಲಿ ಶನಿವಾರ ನಡೆದ ದ್ವಿತೀಯ ಭಾಷಾ ವಿಷಯದ ಪರೀಕ್ಷೆಯೊಂದಿಗೆ ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ಮುಕ್ತಾಯವಾಗಿದ್ದು, ಇದಕ್ಕೆ ಸಹಕಾರ ನೀಡಿದ ಜಿಲ್ಲಾಡಳಿತ,ಜಿಪಂ,ಪೋಲೀಸ್ ಇಲಾಖೆ, ಆರೋಗ್ಯ ಇಲಾಖೆ, ಪೋಷಕರು, ಶಿಕ್ಷಕರು,ವಿದ್ಯಾರ್ಥಿಗಳಿಗೆ ಡಿಡಿಪಿಐ ಕೃಷ್ಣಮೂರ್ತಿ ಧನ್ಯವಾದ ಸಲ್ಲಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಮುಕ್ತಾಯಗೊಂಡಿದೆ, ಇದೇ ಮೊದಲ ಬಾರಿಗೆ ಪರೀಕ್ಷಾ ಕೊಠಡಿಗಳಲ್ಲಿ ಕಡ್ಡಾಯ ಸಿಸಿ ಕ್ಯಾಮರಾ ಅಳವಡಿಕೆ, ವೆಬ್ ಕಾಸ್ಟಿಂಗ್ ಮಾಡಿದ್ದು ವಿಶೇಷವಾಗಿದ್ದು, ಎಲ್ಲಿಯೂ ಗೊಂದಲ,ಸಮಸ್ಯೆಗಳಿಗೆ ಅವಕಾಶವಾಗಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಸುಗಮ ಪರೀಕ್ಷೆಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ, ಜಿಪಂ ಸಿಇಒ ಪದ್ಮಬಸವಂತಪ್ಪ, ಎಸ್ಪಿ ಎಂ.ನಾರಾಯಣ,ನೀಡಿದ ಮಾರ್ಗದರ್ಶನ, ಇಲಾಖೆಗಳ ಪೂರ್ಣ ಸಹಕಾರ, ಆರೋಗ್ಯ ಇಲಾಖೆ, ರಕ್ಷಣೆ ನೀಡಿದ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ನಗರಸಭೆ, ಗ್ರಾಮ ಪಂಚಾಯಿತಿ, ಮುಖ್ಯ ಅಧೀಕ್ಷಕರು,ಕಸ್ಟೋಡಿಯನ್ಸ್, ಶಿಕ್ಷಕರು, ಜಾಗೃತದಳ ಸಿಬ್ಬಂದಿ, ಶಿಕ್ಷಣ ಇಲಾಖೆ ಅಧಿಕಾರಿ,ಸಿಬ್ಬಂದಿ, ಪೋಷಕರು,ಮಾಧ್ಯಮ ಬಂಧುಗಳು, ವಿದ್ಯಾರ್ಥಿಗಳಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.
ಪರೀಕ್ಷೆ ಮುಕ್ತಾಯ ವಿದ್ಯಾರ್ಥಿಗಳ ಸಂಭ್ರಮ
ಶನಿವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕೊನೆ ದಿನವಾಗಿದ್ದು, ಪರೀಕ್ಷೆ ಮುಗಿಯುತ್ತಿದ್ದಂತೆ ವಿದ್ಯಾರ್ಥಿಗಳು ನಿರಾಳವಾಗಿ ಸಂಭ್ರಮದಿಂದ ಹೊರಗೋಡಿ ಬಂದರಲ್ಲದೇ ನಗರದ ಚಿನ್ಮಯ ವಿದ್ಯಾಲಯದ ಆವರಣದಲ್ಲಿ ಕೈಗಳೆತ್ತಿ ಗೆಲುವಿನ ನಗೆ ಬೀರಿ ಸಂಭ್ರಮಿಸಿದರು.
ದ್ವಿತೀಯ ಭಾಷೆಗೆ 206 ಮಂದಿ ಗೈರು
ಕೋಲಾರ ಜಿಲ್ಲೆಯ 65 ಕೇಂದ್ರಗಳಲ್ಲಿ ಶನಿವಾರ ಎಸ್ಸೆಸ್ಸೆಲ್ಸಿ ದ್ವಿತೀಯ ಭಾಷೆ ವಿಷಯದ ಪರೀಕ್ಷೆಗೆ 10 ಪುನರಾವರ್ತಿತ ಹಾಗೂ 196 ಹೊಸ ಶಾಲಾ ವಿದ್ಯಾರ್ಥಿಗಳು ಸೇರಿದಂತೆ 206 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.
ಪರೀಕ್ಷೆಗೆ ಹೆಸರು ನೊಂದಾಯಿಸಿದ್ದ 19677 ವಿದ್ಯಾರ್ಥಿಗಳ ಪೈಕಿ 19471 ಮಂದಿ ಹಾಜರಾಗಿದ್ದು, 206 ಮಂದಿ ಗೈರಾಗಿದ್ದರು. ಪರೀಕ್ಷೆ ಯಾವುದೇ ಗೊಂದಲಗಳಿಲ್ಲದೇ ಸುಗಮವಾಗಿ ನಡೆದಿದೆ ಎಂದು ತಿಳಿಸಿದರು.
ತಾಲ್ಲೂಕುವಾರು ಹಾಜರಿ ವಿವರ
ಬಂಗಾರಪೇಟೆ ತಾಲ್ಲೂಕಿನ 8 ಕೇಂದ್ರಗಳಲ್ಲಿ ದ್ವಿತೀಯ ಭಾಷೆಗೆ 2595 ಮಂದಿ ನೊಂದಾಯಿಸಿದ್ದು, 2578 ಮಂದಿ ಹಾಜರಾಗಿ 17 ಮಂದಿ ಗೈರಾಗಿದ್ದಾರೆ, ಕೆಜಿಎಫ್ ತಾಲ್ಲೂಕಿನ 9 ಕೇಂದ್ರಗಳಲ್ಲಿ 3246 ಮಕ್ಕಳು ಹೆಸರು ನೊಂದಾಯಿಸಿದ್ದು, 3218 ಮಂದಿ ಹಾಜರಾಗಿ 28 ಮಂದಿ ಗೈರಾಗಿದ್ದಾರೆ.
ಕೋಲಾರ ತಾಲ್ಲೂಕಿನ 18 ಕೇಂದ್ರಗಳಲ್ಲಿ 5040 ಮಂದಿ ಹೆಸರು ನೊಂದಾಯಿಸಿದ್ದು, 5000 ಮಂದಿ ಹಾಜರಾಗಿ 40 ಮಂದಿ ಗೈರಾಗಿದ್ದಾರೆ. ಮಾಲೂರು ತಾಲ್ಲೂಕಿನ 8 ಕೇಂದ್ರಗಳಲ್ಲಿ 3232 ಮಂದಿ ಹೆಸರು ನೊಂದಾಯಿಸಿದ್ದು, 3182 ಮಂದಿ ಹಾಜರಾಗಿದ್ದು, 50 ಮಂದಿ ಗೈರಾಗಿದ್ದಾರೆ.
ಮುಳಬಾಗಿಲು ತಾಲ್ಲೂಕಿನ 12 ಕೇಂದ್ರಗಳಲ್ಲಿ 3062 ಮಂದಿ ನೊಂದಾಯಿಸಿದ್ದು, 3003 ಮಂದಿ ಹಾಜರಾಗಿದ್ದು, 59 ಮಂದಿ ಗೈರಾಗಿದ್ದಾರೆ, ಶ್ರೀನಿವಾಸಪುರ ತಾಲ್ಲೂಕಿನ 10 ಕೇಂದ್ರಗಳಲ್ಲಿ 2502 ಮಂದಿ ಹೆಸರು ನೊಂದಾಯಿಸಿದ್ದು, 2490 ಮಂದಿ ಹಾಜರಾಗಿದ್ದು, 12 ಮಂದಿ ಗೈರಾಗಿದ್ದಾರೆ.
ಕೊನೆ ದಿನದ ಪರೀಕ್ಷೆಯಲ್ಲಿ ಜಿಲ್ಲಾದ್ಯಂತ ಯಾವುದೇ ಕೇಂದ್ರದಲ್ಲಿ ಅವ್ಯವಹಾರಗಳು ನಡೆದ ಬಗ್ಗೆ ವರದಿಯಾಗಿಲ್ಲ. ಸುಗಮ ಪರೀಕ್ಷೆ ನಂತರ ವಿದ್ಯಾರ್ಥಿಗಳಿಗೆ ಡಿಡಿಪಿಐ ಕೃಷ್ಣಮೂರ್ತಿ, ಪರೀಕ್ಷಾ ನೋಡೆಲ್ ಅಧಿಕಾರಿ ಕೃಷ್ಣಪ್ಪ, ಶಿಕ್ಷಣಾಧಿಕಾರಿಗಳಾದ ಸಗೀರಾ ಅಂಜುಂ,ಭಾಗ್ಯವತಮ್ಮ, ಡಿವೈಪಿಸಿಗಳಾದ ಚಂದ್ರಕಲಾ, ಗುರುಮೂರ್ತಿ, ಬಿಇಒಗಳಾದ ಕನ್ನಯ್ಯ, ಗಂಗರಾಮಯ್ಯ, ಮುನಿವೆಂಕಟರಾಮಾಚಾರಿ, ಚಂದ್ರಕಲಾ, ಸುಕನ್ಯಾ, ಮುನಿಲಕ್ಷ್ಮಯ್ಯ,ಎವೈಪಿಸಿ ಮೋಹನ್ಬಾಬು, ವಿಷಯ ಪರೀಕ್ಷಕರಾದ ಶಶಿವಧನ, ಗಾಯತ್ರಿ, ಶಂಕರೇಗೌಡ, ವೆಂಕಟೇಶಬಾಬು ಮತ್ತಿತರರೂ ಶುಭಾಷಯ ಕೋರಿದ್ದಾರೆ.