ಕೋಲಾರ : ಕೋಲಾರದಲ್ಲಿ ನೋಂದಾಯಿಸಿದ 15,000 ಆಟೋಗಳಿದ್ದು, ಪ್ರತಿಯೊಬ್ಬ ಆಟೋ ಚಾಲಕರು ತಾವೂ ಮತ ಹಾಕಿ ತಮ್ಮ ಪ್ರಯಾಣಿಕರಿಗೂ ಮತ ಹಾಕುವಂತೆ ಪ್ರೇರೆಪಿಸಬೇಕೆಂದು ಜಿಲ್ಲಾ ಪಂಚಾಯತಿ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಪದ್ಮಬಸವಂತಪ್ಪ ಅವರು ತಿಳಿಸಿದರು.
ಜಿಲ್ಲಾ ಸ್ವೀಪ್ ಸಮಿತಿಯಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ “ಮಜ್ಜಿಗೆ ಕುಡಿಯಿರಿ ಮತದಾನ ಮಾಡಿರಿ” ಎಂಬ ವಿನೂತನ ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬಿಸಿಲು-ಮಜ್ಜಿಗೆ- ಮತದಾನ ಇವುಗಳನ್ನು ಕಡ್ಡಾಯವಾಗಿ ಅನುಭವಿಸಿ ಮತದಾನ ಮಾಡಿ ಎಂದರು. ಚುನಾವಣೆ ಸಂದರ್ಭದಲ್ಲಿ ಆಟೋ ಚಾಲಕರಿಗೆ ತುಂಬಾ ಬೇಡಿಕೆಯಿದ್ದು, ಇಂತಹ ಸಮಯದಲ್ಲಿ ಸಹ ಪ್ರಯಾಣಿಕರಿಗೆ ಕಡ್ಡಾಯ ಮತದಾನ ಮಾಡಲು ಪ್ರೋತ್ಸಾಹಿಸಬೇಕೆಂದರು.
ಕೋಲಾರ ಜಿಲ್ಲೆಯಲ್ಲಿ ಕೆಜಿಎಫ್ ಹಾಗೂ ಕೋಲಾರ ಪಟ್ಟಣದಲ್ಲಿ ಮತದಾನವು ತುಂಬಾ ಕಡಿಮೆಯಾಗುತ್ತಿದೆ. ಕಾರಣ ಜನರು ರಜೆಯ ಮೇಲೆ ಊರಿಗೆ ತೆರಳುವುದು, ಮತಗಟ್ಟೆ ತೆರಳಲು ಆಲಸಿಗಳಾಗಿದ್ದಾರೆ. ಹೀಗಾಗಿ ಅವರಿಗೆ ಊರಿಗೆ ತೆರಳದಂತೆ ಹಾಗೂ ಮತದಾನ ಮಾಡುವಂತೆ ಅಟೋ ಚಾಲಕರು ಸ್ಫೂರ್ತಿ ನೀಡಿ ನಮ್ಮೊಂದಿಗೆ ಕೈಜೋಡಿಸಬೇಕೆಂದರು.
ಕೆಎಸ್ಆರ್ಟಿಸಿ ಸಂಸ್ಥೆಯಿಂದ ಬಸ್ನಲ್ಲಿ ಪ್ರಯಾಣಿಸುವವರಿಗೆ ಮತದಾನ ಜಾಗೃತಿ ಮೂಡಿಸಲು ಇಲ್ಲಿಯವರೆಗೆ ಎರಡೂವರೆ ಲಕ್ಷ ಬಸ್ ಟಿಕೇಟ್ಗಳ ಮೇಲೆ ಮುದ್ರಣ ಮಾಡಿಸಿ ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಚುನಾವಣಾ ಸಂದರ್ಭದಲ್ಲಿ ಪ್ರಿಜ್, ಟಿವಿ, ಸೀರೆ, ಹಣ, ಕುಕ್ಕರ್ ಹಾಗೂ ಬಾಡೂಟ, ಊಟ ಇನ್ನು ಮುಂತಾದ ಆಮಿಷಗಳನ್ನು ತೋರಿಸಿ ಮತದಾನ ಮಾಡುವ ಸಂದರ್ಭಗಳು ಕಂಡುಬಂದಲ್ಲಿ ಸಿವಿಜಿಲ್ ಆ್ಯಪ್ ಬಳಸಿ ಫೋಟೋ ತೆಗೆದು ಅಪಲೋಡ್ ಮಾಡಿದರೆ, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳುತ್ತಾರೆ ಹಾಗೂ ತಮ್ಮ ಹೆಸರುಗಳನ್ನು ಗೌಪ್ಯವಾಗಿಡಲಾಗುವುದು.
ಕಾರ್ಯಕ್ರಮದಲ್ಲಿ ಯೋಜನಾ ನಿರ್ದೇಶಕರು ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ರವಿಚಂದ್ರ, ಕೆಎಸ್ಆರ್ಟಿಸಿ ಡಿವಿಜನಲ್ ಕಂಟ್ರೋಲರ್ ಬಸವರಾಜು, ಕೋಲಾರ ಹಾಗೂ ಕೆಜಿಎಫ್ ಆರ್ಟಿಓ ವೆಂಕಟೇಶ್ವರಲು, ನಯಾಜ್ ಪಾಷಾ, ಜಿ.ಪಂ. ಸಹಾಯಕ ನಿರ್ದೇಶಕ ಗೋವಿಂದಗೌಡ, ಆಟೋ ಅಸೋಸಿಯೇಶನ್ ಅಧ್ಯಕ್ಷ ಸುರೇಶ ಸೇರಿದಂತೆ ಆಟೋಚಾಲಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಪದ್ಮ ಬಸವಂತಪ್ಪ ಅವರು ಆಟೋಗಳಿಗೆ ಚುನಾವಣೆ ಸಂಬಂಧಿತ ಸ್ಟಿಕರ್ ಅಂಟಿಸಿದರು.