ಶ್ರೀನಿವಾಸಪುರ: ಮಾವು ಬೆಳೆಗಾರರಿಗೆ ಫಸಲ್ ಬಿಮಾ ಯೋಜನೆಯಡಿ ಪರಿಹಾರ ಕೊಡಿಸುವಂತೆ ಆಗ್ರಹಿಸಿ ನ.9 ರಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಾವು ಬೆಳೆಗಾರರ ಹೋರಾಟ ಸಮಿತಿ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮಾವಿನ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಬೆಳೆಗಾರರು ಕಡಿಮೆ ಸಂಖ್ಯೆಯಲ್ಲಿ ಇರುವ ಕಡೆ ಮಾತ್ರ ಬೆಳೆ ವಿಮೆ ಪಾವತಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಬೆಳೆಗಾರರು ಇರುವ ಕಡೆ ಸಮಸ್ಯೆಯನ್ನು ಕಡೆಗಣಿಸಲಾಗಿದೆ. ನಷ್ಟಪರಿಹಾರ ನೀಡುತ್ತಿಲ್ಲ ಎಂದು ಆಪಾದಿಸಿದರು.
ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀರಾಮರೆಡ್ಡಿ ಮಾತನಾಡಿ, ಮಾವು ಬೆಳೆಗಾರರಿಗೆ ವಿಮಾ ಕಂಪನಿಗಳಿಂದ ಆಗಿರುವ ಅನ್ಯಾಯ ಪ್ರತಿಭಟಿಸಿ ನ.9ರಂದು ಬೈಕ್ ರ್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮಾತನಾಡಿ, ಫಸಲ್ ಬಿಮಾ ಯೋಜನೆ ಅನುಷ್ಠಾನ ಖಾಸಗಿ ವಿಮಾ ಕಂಪನಿಗಳಿಗೆ ವಹಿಸಿರುವುದರಿಂದಲೇ, ಯೋಜನೆ ಪೂರ್ಣ ಪ್ರಯೋಜನ ಸಂಕಷ್ಟಕ್ಕೆ ಒಳಗಾದ ರೈತರಿಗೆ ಸಿಗುತ್ತಿಲ್ಲ. ಅಧಿಕಾರಿಗಳು ರೈತರ ಮನವಿಗೆ ಸ್ಪಂದಿಸುತ್ತಿಲ್ಲ. ಆದ್ದರಿಂದಲೇ ಪ್ರತಿಭನೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮುಖಂಡರಾದ ಬೈಚೇಗೌಡ, ಎನ್.ವೀರಪ್ಪರೆಡ್ಡಿ, ಅಸ್ಲಂಪಾಷ, ಸೈಯದ್ ಫಾರೂಕ್, ಶಿವಣ್ಣ ಇದ್ದರು.