ಶ್ರೀನಿವಾಸಪುರ: ಪಟ್ಟಣದ ತಾಲ್ಲೂಕು ಕಚೇರಿಗೆ ಶನಿವಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಭೇಟಿ ನೀಡಿ ಸಿಬ್ಬಂದಿ ಕಾರ್ಯನಿರ್ವಹಣೆ ಪರಿಶೀಲಿಸಿದರು.
ಕಚೇರಿಯ ಬೇರೆ ಬೇರೆ ವಿಭಾಗಗಳಿಗೆ ಭೇಟಿ ನೀಡಿ, ಆಯಾ ವಿಭಾಗದಲ್ಲಿ ಆಗಿರುವ ಪ್ರಗತಿ ಬಗ್ಗೆ ಮಾಹಿತಿ ಪಡೆದುಕೊಂಡರು. ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ ಪರಿಶೀಲಿಸಿದರು. ಸಿಬ್ಬಂದಿಗೆ ಅಗತ್ಯವಾದ ಸಲಹೆ ಸೂಚನೆ ನೀಡಿದರು.
ಸಿಬ್ಬಂದಿಯೊಂದಿಗೆ ಮಾತನಾಡಿದ ಅವರು, ಕಂದಾಯ ಇಲಾಖೆ ಸಿಬ್ಬಂದಿ ಸಾರ್ವಜನಿಕರ ಸಮಸ್ಯೆ ನಿವಾರಣೆಗೆ ಹೆಚ್ಚಿನ ಗಮನ ನೀಡಬೇಕು. ಕಚೇರಿಗೆ ಬರುವ ಅರ್ಜಿಗಳ ವಿಲೇವಾರಿ ನಿಗದಿತ ಕಾಲಮಿತಿಯೊಳಗೆ ನಡೆಯಬೇಕು. ರೈತರು ಮತ್ತು ಸಾರ್ವಜನಿಕರು ತಮ್ಮ ಕೆಲಸ ಮಾಡಿಸಿಕೊಳ್ಳಲು ಕಚೇರಿಗೆ ಅಲೆಯುವುದನ್ನು ತಪ್ಪಿಸಬೇಕು. ಸಮಸ್ಯೆ ಜಟಿಲವಾಗಿದ್ದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್, ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗುರುರಾಜರಾವ್, ವಿನೋದ್, ಶಂಕರರೆಡ್ಡಿ, ಹರಿ, ವಿಶ್ವನಾಥ್ ಇದ್ದರು.
ನಾಡಕಚೇರಿಗೆ ಭೇಟಿ: ಜಿಲ್ಲಾಧಿಕಾರಿ ಅಕ್ರಂ ಪಾಷ ತಾಲ್ಲೂಕಿನ ಗೌನಿಪಲ್ಲಿಯ ನಾಡಕಚೇರಿಗೆ ಭೇಟಿ ನೀಡಿ ಕಚೇರಿ ಕಾರ್ಯನಿರ್ವಹಣೆ ಪರಿಶೀಲಿಸಿದರು. ಸಾರ್ವಜನಿಕರ ಕುಂದು ಕೊರತೆ ವಿಚಾರಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹೊರ ಭಾಗದಲ್ಲಿ ನಾಡ ಕಚೇರಿ ಕಟ್ಟಡ ನಿರ್ಮಿಸಿರುವುದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿದೆ ಸಾರ್ವಜನಿಕರು ದೂರಿದರು.