ಕೋಲಾರ ; ಕೋಲಾರ ಜಿಲ್ಲೆಯಾದ್ಯಂತ 934 ಎಕರೆ ಜಮೀನು ಪಹಣಿಯಲ್ಲಿ ಇಂಡೀಕರಗೊಳಿಸಲು ಬಾಕಿಯಿದ್ದು, ಇನ್ನು 15 ದಿನದೊಳಗಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಭೂ ಸ್ವಾಧೀನಪಡಿಸಲಾದ ಜಮೀನುಗಳ ಭೂ ದಾಖಲೆಗಳಲ್ಲಿ ಇಂಡೀಕರಿಸುವ ಕುರಿತಾದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಹಳೇ ಜಮೀನುಗಳ ಪೋಡಿ, ಪಹಣಿ ಹಾಗೂ ಇಸ್ಸೆಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿ ಇಂಡೀಕರಿಸುವ ಕಾರ್ಯವನ್ನು ಮುಗಿಸುವಂತೆ ತಿಳಿಸಿದರು. ರೈಲ್ಷೆ ಯೋಜನೆಗಳಿಗೆ, ಸಾರ್ವಜನಿಕ ಉದ್ದೇಶಕ್ಕೆ ಹಾಗೂ ಸರ್ಕಾರದ ವಿವಿಧ ಯೋಜನೆಗಳಿಗೆ ಅಗತ್ಯವಿರುವ ಖಾಸಗಿ ಜಮೀನುಗಳನ್ನು ವಿವಿಧ ಕಾಯ್ದೆಗಳನುಸಾರ ಭೂ ಸ್ವಾಧೀನಪಡಿಸಿಕೊಳ್ಳುವಂತೆ ಕಂದಾಯ ಮತ್ತು ಸರ್ವೆ ದಾಖಲೆಗಳಲ್ಲಿ ಇಂಡೀಕರಣಗೊಳಿಸುವಂತೆ ಸರ್ಕಾರದಿಂದ ಆದೇಶ ಬಂದಿದ್ದು, ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ 2271 ಸರ್ವೆ ನಂಬರುಗಳು ಭೂ ಸ್ವಾಧೀನಕ್ಕೊಳಪಟ್ಟಿದ್ದು, 1192 ಸರ್ವೇಗಳು ಇಂಡೀಕರಣವಾಗಿದ್ದು, 1079 ಸರ್ವೆ ನಂಬರುಗಳು ಬಾಕಿಯಿದ್ದು, ಇವುಗಳನ್ನು ಕೂಡಲೇ ಪಹಣಿಯಲ್ಲಿ ಇಂಡೀಕರಿಸುವಂತೆ ಸಹಾಯಕ ಭೂ ಸ್ವಾಧೀನಾಧಿಕಾರಿಗಳು ಹಾಗೂ ತಹಶೀಲ್ದಾರವರಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.