ಕೋಲಾರ,ಆ.16: ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ದಿಗೆ ಭೂಮಿ ಕಳೆದುಕೊಂಡಿರುವ ಗಡಿಭಾಗದ ಏತುರಹಳ್ಳಿ, ಚುಕ್ಕನಹಳ್ಳಿ ರೈತರ ಮರಗಿಡಗಳ ಎರಡನೇ ಕಂತಿನ ಪರಿಹಾರ ವಿತರಣೆ ಮಾಡುವವರೆಗೂ ಕಾಮಗಾರಿ ಸ್ಥಗಿತಗೊಳಿಸುವಂತೆ ಬುಧವಾರ ನಡೆದ ರೈತರ ಸಭೆಯಲ್ಲಿ ಗುತ್ತಿಗೆದಾರರಿಗೆ ಮಾನ್ಯ ಜಿಲ್ಲಾಧಿಕಾರಿಗಳಾದ ಆಕ್ರಂ ಪಾಷರವರು ಸೂಚನೆ ನೀಡಿದರು.
ಮುಳಬಾಗಿಲು ಗಡಿಭಾಗದ ಏತುರಹಳ್ಳಿ ಚುಕ್ಕನಹಳ್ಳಿ ರೈತರಿಗೆ ಬರಬೇಕಾದ 2 ನೇ ಕಂತಿನ ಮರಗಿಡಗಳ ಪರಿಹಾರ ನೀಡಲು ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ನೊಂದ ರೈತರಾದ ರಾಜಣ್ಣ, ನಟರಾಜ್ರವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತೇವೆಂದು ಕೊಟ್ಟ ಮಾತಿನಂತೆ ಮಾನ್ಯರು ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಪರಿಹಾರ ನೀಡದ ಅಧಿಕಾರಿಗಳ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಗಡಿಭಾಗದ ರೈತರ ಮರಗಿಡಗಳ ವರದಿ ನೀಡುವಾಗ ಕಡಿಮೆ ಮರಗಳು ಇದ್ದರೂ ಹೆಚ್ಚಿನ ಮರಗಳು ಇರುವಂತೆ ವಿಶೇಷ ಭೂಸ್ವಾಧಿನಾಧಿಕಾರಿಗಳ ಕಚೇರಿಯಿಂದ ತಪ್ಪು ವರದಿ ನೀಡಿದ್ದಾರೆಂದು ಚಿತ್ತೂರು ಪಿ.ಡಿ ಪರವಾಗಿ ಬಂದಿದ್ದ ಇಂಜಿನಿಯರ್ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ಮುಂದಾದಾಗ ನಕಲಿ ದಾಖಲೆಗಳು ಸೃಷ್ಠಿಸಿ ನೂರಾರು ಕೋಟಿ ಪರಿಹಾರ ನೀಡಿರುವಾಗ ಕೇವಲ 1 ಕೋಟಿ 17 ಲಕ್ಷ ನೀಡಲು ನಿಮ್ಮ ಸಮಸ್ಯೆ ಏನೂ ಎಂದು ಪ್ರಶ್ನೆ ಮಾಡಿದರು.
ವಿಶೇಷ ಭೂಸ್ವಾಧಿನಾಧಿಕಾರಿಗಳಾದ ಮಲ್ಲಿಕಾರ್ಜುನ್ರವರು ಚಿತ್ತೂರು ಪಿ.ಡಿ ಖಾತೆಯಲ್ಲಿರುವ ಹಣ ಬಿಡುಗಡೆ ಮಾಡಿದರೆ 2 ದಿನದಲ್ಲಿ ರೈತರ ಖಾತೆಗಳಿಗೆ ಯಾವುದೇ ಷರತ್ತು ಇಲ್ಲದೆ ಬಿಡುಗಡೆ ಮಾಡುತ್ತೇವೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಪರಿಹಾರವೇ ಸಿಗುವುದಿಲ್ಲ ಎಂಬ ಹತಾಷೆ ನೋವಿನಲ್ಲಿದ್ದ ಗಡಿಭಾಗದ ರೈತರಿಗೆ ರೈತ ಸಂಘದ ಬೆಂಬಲ ನೀಡಿದ ನಂತರ ಸಂಬಂದಪಟ್ಟ ಅಧಿಕಾರಿಗಳಿಗೆ ರೈತ ಪರ ಕಾಳಜಿ ಇರುವ ನೊಂದ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮಾನ್ಯ ಜಿಲ್ಲಾಧಿಕಾರಿಗಳಾದ ಆಕ್ರಂ ಪಾಷ ರವರು ಮೊದಲನೇ ಕಂತಿನ ಹಣವನ್ನು ಬಿಡುಗಡೆ ಮಾಡಿ ದೈರ್ಯ ತುಂಬಿದಕ್ಕೆ ಅಬಿನಂದನೆ ಸಲ್ಲಿಸಿ ಮಾತನಾಡಿದ ರವರು 10 ವರ್ಷಗಳಿಂದ ರೈತರು ಜಾತಕ ಪಕ್ಷಿಗಳಂತೆ 2 ನೇ ಕಂತಿನ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಆದರೂ ಸಹ ಹಣ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಇಚ್ಚಾಶಕ್ತಿ ಕೊರತೆ ಇದೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು.
ಸಭೆಯ ಕಡೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಚಿತ್ತೂರು ಪಿ.ಡಿ ರವರಿಗೆ 10 ದಿನದಲ್ಲಿ ಹಣ ಬಿಡುಗಡೆ ಮಾಡಿ ಇಲ್ಲವೇ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಹಣವನ್ನು ಠೇವಣಿ ಇಡಿ ರೈತರಿಗೆ ನ್ಯಾಯವಾಗುವ ರೀತಿ ಆದೇಶ ಮಾಡುತ್ತೇವೆ. ಅದುವರೆಗೂ ರಸ್ತೆ ಕಾಮಗಾರಿ ಮಾಡದಂತೆ ಸಭೆಯಲ್ಲಿ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅರಣ್ಯ ಅಧಿಕಾರಿಗಳಾದ ಏಡುಕೊಂಡಲು, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಮೀಸೆ ವೆಂಕಟೇಶಪ್ಪ, ಜನಾರ್ಧನ್, ಕುಮಾರ್, ನಾರಾಯಣಸ್ವಾಮಿ, ಮಾರಪ್ಪ, ಪೃಥ್ವಿ ಮುಂತಾದವರಿದ್ದರು.