ಕೋಲಾರ : ಎಸ್.ಎಸ್.ಎಲ್.ಸಿ ನಂತರ ಶೀಘ್ರದಲ್ಲಿಯೇ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಏನು ಮಾಡಬೇಕು ಎಂದು ಯೋಚಿಸುವ ಯುವಕ, ಯುವತಿಯರಿಗೆ ಅತಿ ಕಡಿಮೆ ಅವಧಿಯಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ತಾಂತ್ರಿಕ ಕೌಶಲ್ಯಗಳನ್ನು ಗಳಿಸಿಕೊಂಡು ಉದ್ಯೋಗಸ್ಥರಾಗಲು ಕೈಗಾರಿಕಾ ತರಬೇತಿ ಸಂಸ್ಥೆಗಳು ಹಾಗೂ ಜಿ.ಟಿ.ಟಿ.ಸಿ ಸಂಸ್ಥೆಗಳಲ್ಲಿ ಭೋದಿಸಲಾಗುತ್ತಿರುವ ಕೋರ್ಸ್ಗಳು ದಾರಿದೀಪಗಳಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜುಲೈ 22 ರಂದು ಜಿಲ್ಲೆಯ ಎಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಗಳ ಹಾಗೂ ಜಿ.ಟಿ.ಟಿ.ಸಿ ಸಂಸ್ಥೆಯ ಪ್ರಾಂಶುಪಾಲರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡ ನಂತರ ನಡೆಸಲಾದ ಸುದ್ದಿ ಗೋಷ್ಟಿಯಲ್ಲಿ ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಜಿಲ್ಲೆಯಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಿದ್ದು, ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಜಿ.ಟಿ.ಟಿ.ಸಿ ಸಂಸ್ಥೆಗಳ ದಾಖಲಾತಿ ಪ್ರಕ್ರಿಯೆ ಈ ತಿಂಗಳದ ಅಂತ್ಯದವರೆಗೂ ನಡೆಯಲಿದ್ದು ಎಸ್.ಎಸ್.ಎಲ್.ಸಿ ಉತ್ತೀರ್ಣ, ಅನುತ್ತೀರ್ಣ ಹಾಗೂ ದ್ವಿತೀಯ ಪಿ.ಯು.ಸಿ ಅನುತ್ತೀರ್ಣರಾದ ಅಭ್ಯರ್ಥಿಗಳು ತಮಗೆ ಹತ್ತಿರವಾದ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ದಾಖಲಾತಿಗಾಗಿ ಸಂಪರ್ಕಿಸಬಹುದು.
ಕೋಲಾರ ಜಿಲ್ಲೆಯಲ್ಲಿ 07 ಸರ್ಕಾರಿ ಐ.ಟಿ.ಐಗಳು, 06 ಅನುದಾನಿತ ಐ.ಟಿ.ಐಗಳು, 22 ಖಾಸಗಿ ಐ.ಟಿ.ಐಗಳು ಹಾಗೂ ಜಿಲ್ಲಾ ಕೇಂದ್ರದಲ್ಲಿ ಜಿ.ಟಿ.ಟಿ.ಸಿ ತರಬೇತಿ ಸಂಸ್ಥೆಯಿದ್ದು ಹಲವಾರು ವೃತ್ತಿ ಕೌಶಲ್ಯಗಳನ್ನು ಬೋಧಿಸಲಾಗುತ್ತಿದೆ ಎಂದು ತಿಳಿಸಿದರು. ಕೋಲಾರ ಜಿಲ್ಲೆಯ ಕೆ.ಜಿ.ಎಫ್ನಲ್ಲಿರುವ ಕೈಗಾರಿಕಾ ತರಬೇತಿ ಸಂಸ್ಥೆಯು 50 ವರ್ಷಗಳಗಿಂತ ಹೆಚ್ಚಿನ ಇತಿಹಾಸವನ್ನು ಹೊಂದಿದ್ದು, ಸುಮಾರು 16 ರೀತಿಯ 1 ವರ್ಷದ ಹಾಗೂ 2 ವರ್ಷದ ಅವಧಿಯ ಕೋರ್ಸ್ಗಳನ್ನು ಬೋಧಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಕೋಲಾರ, ಮುಳಬಾಗಿಲು, ದೇವರಾಯಸಮುದ್ರ, ರೋಣೂರು ಕ್ರಾಸ್, ದಳಸನೂರು, ಮಾಲೂರು ಹಾಗೂ ಕೆ.ಜಿ.ಎಫ್ ನಲ್ಲಿ ಸರ್ಕಾರಿ ಐ.ಟಿ.ಐಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿ ಈ ಎಲ್ಲಾ ಸಂಸ್ಥೆಗಳಲ್ಲಿ ಇನ್ನು ಹಲವಾರು ಸೀಟುಗಳು ಭರ್ತಿಯಾಗದೇ ಖಾಲಿ ಉಳಿದಿದ್ದು, ಈ ತಿಂಗಳ ಅಂತ್ಯದವರೆಗೆ ಲಭ್ಯವಿರುವ ಕಾಲಾವಧಿಯಲ್ಲಿ ಜಿಲ್ಲೆಯ ಯುವಕ, ಯುವತಿಯವರು ಹತ್ತಿರದ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ದಾಖಲಾತಿಗಾಗಿ ಸಂಪರ್ಕಿಸಲು ಸೂಚಿಸಿದರು. ದಾಖಲಾತಿಯ ಅವಧಿ ಇನ್ನೂ 15 ದಿನಗಳಷ್ಟು ವಿಸ್ತರಿಸುವ ಸಾಧ್ಯತೆಗಳಿದೆಯೆಂದು ತಿಳಿಸಿದರು.
ಐ.ಟಿ.ಐ ತರಬೇತಿ ನಂತರ ಡಿಪ್ಲೋಮೋ, ಇಂಜಿನಿಯರಿಂಗ್ ಹಾಗೂ ಪದವಿ ಶಿಕ್ಷಣವನ್ನು ಮುಂದುವರೆಸಲು ಅವಕಾಶವಿರುತ್ತದೆ.
ಕೋಲಾರ ಜಿಲ್ಲೆಯ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 2 ವರ್ಷ ಅವಧಿಯ ಕೋರ್ಸ್ಗಳಾದ ಎಲೆಕ್ನಿಷಿಯನ್, ಎಲೆಕ್ಟ್ರಾನಿಕ್ ಮೆಕಾನಿಕ್, ಫಿಟ್ಟರ್, ಮೆಶಿನಿಷ್, ಮೆಕಾನಿಕ್ ಮೋಟಾರ್ ವೆಹಿಕಲ್, ಟರ್ನರ್, ಟೂಲ್ & ಡೈ ಮೆಕಿಂಗ್, ಮುಂತಾದ ಕೋರ್ಸ್ಗಳು ಹಾಗೂ ಎಸ್.ಎಸ್.ಎಲ್.ಸಿ ಅನುತ್ತೀರ್ಣರಾದ ಅಭ್ಯರ್ಥಿಗಳಿಗೂ ಸಹ 1 ವರ್ಷದ ಕೋರ್ಸ್ಗಳಾದ ವೆಲ್ಡರ್ ಹಾಗೂ ವುಡ್ ವರ್ಕ್ ಟಿಕ್ನಿಷಿಯನ್ ಕೋರ್ಸ್ಗಳು ಲಭ್ಯವಿದೆ.
ಟಾಟಾ ಸಂಸ್ಥೆಯವರ ಸಹಯೋಗದಲ್ಲಿ ಕೈಗಾರಿಕೆ 4.0 ಕೌಶಲ್ಯಗಳುವುಳ್ಳ ಉದ್ಯೋಗ ಯೋಜನೆಯನ್ನು ಜಿಲ್ಲೆಯ 4 ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಪ್ರಾರಂಭಿಸಿದ್ದು, ಅತ್ಯಾಧುನಿಕ ಕೋರ್ಸ್ಗಳಾದ Advanced CNC Machining, Mechanic Electric Vehicle, Industrial Robotics & Digital Manufacturing ,ಗಳನ್ನು ಬೋಧಿಸಲಾಗುತ್ತಿದ್ದು, ಕೈಗಾರಿಕೆಗಳಿಗೆ ಪೂರಕವಾದ ತಾಂತ್ರಿಕ ತರಬೇತಿಯನ್ನು ನೀಡಲಾಗುತ್ತಿದೆ.
ಪ್ರಸ್ತುತ ಐ.ಟಿ.ಐಗಳಲ್ಲಿ ಡ್ಯೂಯಲ್ ಸಿಸ್ಟಮ್ ಆಫ್ ಟ್ರೈನಿಂಗ್ ಅನ್ನು ಆರಂಭಿಸಿದ್ದು, ತರಬೇತಿದಾರರು ತಮ್ಮ ಶೈಕ್ಷಣಿಕ ಅವಧಿಯಲ್ಲಿ ಅರ್ಧ ಕಾಲಾವಧಿಯನ್ನು ಕೈಗಾರಿಕೆಗಳಲ್ಲಿ ತರಬೇತಿ ಪಡೆದು ತರಬೇತಿ ಅವಧಿಯಲ್ಲಿಯೇ ಶಿಶುಕ್ಷು ವೇತನ ಪಡೆಯುವ ಸೌಲಭ್ಯವಿದೆ. ಅದೇ ರೀತಿ ಜಿ.ಟಿ.ಟಿ.ಸಿ ಕೋಲಾರ ಕೇಂದ್ರದಲ್ಲಿ ಡಿಪ್ಲೋಮೋ ಇನ್ ಟೂಲ್ & ಡೈ ಮೇಕಿಂಗ್, ಪ್ರಿಸಿಷನ್ ಮ್ಯಾನುಫ್ಯಾಕ್ಟರಿಂಗ್ ಹಾಗೂ ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕೋರ್ಸ್ಗಳು ಲಭ್ಯವಿದ್ದು ಶೇಕಡ 100 ರಷ್ಟು ನೇಮಕಾತಿ ಅವಕಾಶಗಳಿವೆ ಎಂದು ತಿಳಿಸಿದರು.
ಐ.ಟಿ.ಐ ಹಾಗೂ ಇತರೆ ಕೌಶಲ್ಯ ಕೋರ್ಸ್ಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಪೂರೈಸಬಹುದಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉಚಿತ ಟೂಲ್ ಕಿಟ್, ಸಮವಸ್ತ್ರ ಹಾಗೂ ಸ್ಟೇಷನರಿ ವಸ್ತುಗಳನ್ನು ನೀಡಲಾಗುತ್ತದೆ ಹಾಗೂ ಒಟ್ಟು ಸೀಟುಗಳಲ್ಲಿ ಶೇಕಡ 33 ರಷ್ಟು ಮಹಿಳಾ ತರಬೇತಿದಾರರಿಗೆ ಮೀಸಲು ಇರಿಸಲಾಗುತ್ತದೆ. ಐ.ಟಿ.ಐ ತೇರ್ಗಡೆಯಾದ ಅಭ್ಯರ್ಥಿಗಳು ನೇರವಾಗಿ ಕಾರ್ಖಾನೆಗಳಲ್ಲಿ ಉದ್ಯೋಗ ಪಡೆಯಬಹುದು ಅಥವಾ ಅಪ್ರೆಂಟಿಸ್ಶಿಪ್ ತರಬೇತಿ ಪಡೆದು ನಂತರ ಉದ್ಯೋಗಕ್ಕೆ ಸೇರ್ಪಡೆಯಾಗಬಹುದು ಎಂದು ತಿಳಿಸಿದರು.
ಕೋಲಾರ ಜಿಲ್ಲೆಯು ಬೆಂಗಳೂರಿನ ಸಮೀಪವಿದ್ದು, ರಸ್ತೆ, ರೈಲು ಹಾಗೂ ವಿಮಾನ ಸೇವೆ ಸೌಲಭ್ಯಗಳು ಹತ್ತಿರದಲ್ಲಿಯೇ ಲಭ್ಯವಿರುವುದರಿಂದ ಹಲವಾರು ಕೈಗಾರಿಕೆಗಳು ಕೋಲಾರ ಜಿಲ್ಲೆಯಲ್ಲಿ ಸ್ಥಾಪನೆಯಾಗಿದ್ದು, ಐ.ಟಿ.ಐ ಹಾಗೂ ಜಿ.ಟಿ.ಟಿ.ಸಿ ಕೋರ್ಸ್ ಪೂರೈಸಿರುವ ಅಭ್ಯರ್ಥಿಗಳಿಗೆ ಪ್ರತಿ ವರ್ಷವೂ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದ್ದು, ಜಿಲ್ಲೆಯ ಅಭ್ಯರ್ಥಿಗಳು ಜಿಲ್ಲೆಯಲ್ಲಿ ಲಭ್ಯವಿರುವ ತರಬೇತಿ ಸಂಸ್ಥೆಗಳಲ್ಲಿ ದಾಖಲಾಗಿ ಶೀಘ್ರದಲ್ಲಿಯೇ ಉದ್ಯೋಗ ಪಡೆಯುವ ಸದಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹದು.
ಕೋಲಾರ ಜಿಲ್ಲೆಯಲ್ಲಿ ಪ್ರಸಕ್ತ ನರಸಾಪುರ, ಮಾಲೂರು, ವೇಮಗಲ್ಗಳ ಕೈಗಾರಿಕಾ ಪ್ರದೇಶಗಳಲ್ಲಿ ಹಲವಾರು ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ಸಾವಿರಾರು ಉದ್ಯೋಗ ಅವಕಾಶಗಳು ಲಭ್ಯವಿದ್ದು ಮುಂದಿನ ದಿನಗಳಲ್ಲಿ ಕೆ.ಜಿ.ಎಫ್ ಹಾಗೂ ಮುಳಬಾಗಿಲು ತಾಲ್ಲೂಕಿನಲ್ಲೂ ಹಲವಾರು ಬೃಹತ್ ಕೈಗಾರಿಕೆಗಳು ಸ್ಥಾಪನೆಯಾಗಲಿದ್ದು, ಬೆಂಗಳೂರು ನಗರವು ಸಹ ಕೋಲಾರಕ್ಕೆ ಹತ್ತಿರವಿರುವುದರಿಂದ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಭವಿಷ್ಯದಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಈ ಸದವಕಾಶವನ್ನು ಬಳಸಿಕೊಂಡು ಜಿಲ್ಲೆಯ ಉದ್ಯೋಗಾಕಾಂಕ್ಷಿ ಯುವಕ, ಯುವತಿಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿರಬೇಕೆಂದು ಕರೆ ನೀಡಿದರು.