ಜಿಲ್ಲೆಯಲ್ಲಿ ಜನಸ್ನೇಹಿ ಪಾರದರ್ಶಕ ಆಡಳಿತದ ಮೂಲಕ ಜನಸೇವೆ ಮಾಡುವ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ -ಜಿಲ್ಲಾಧಿಕಾರಿ ವೆಂಕಟರಾಜು

ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ

ಕೋಲಾರ,ಫೆ.3:ಜಿಲ್ಲೆಯಲ್ಲಿ ಜನಸ್ನೇಹಿ ಪಾರದರ್ಶಕ ಆಡಳಿತದ ಮೂಲಕ ಜನಸೇವೆ ಮಾಡುವ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ ಎಂದು ಜಿಲ್ಲಾಧಿಕಾರಿ ವೆಂಕಟರಾಜು ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಆಡಳಿತದ ಕಾರ್ಯಾಂಗದ ಜೂತೆಗೆ ಪತ್ರಿಕಾ ರಂಗವು ಕೈ ಜೋಡಿಸಿದಾಗ ಉತ್ತಮ ಸೇವೆ ಸಲ್ಲಿಸಲು ಸುಲಭವಾಗಲಿದೆ. ಸರ್ಕಾರದ ಸೌಲಭ್ಯಗಳನ್ನು ಆರ್ಹ ಫಲಾನುಭವಿಗಳಿಗೆ ತಲುಪುವಂತೆ ಆದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ರಾಜಾಸ್ಥಾನದಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಕೊಪ್ಪಳದ ಜಿಲ್ಲಾ ಪಂಚಾಯತ್‍ನಲ್ಲಿ ಸಿ.ಇ.ಓ. ಆಗಿದ್ದು, ಕೋಲಾರಕ್ಕೆ ಡಿ.ಸಿ.ಯಾಗಿ ಬಡ್ತಿ ಪಡೆದು ನಿಮ್ಮ ಸೇವೆ ಸಲ್ಲಿಸುವ ಸೌಭಾಗ್ಯ ಸಿಕ್ಕಿರುವುದು ನನ್ನ ಅಧೃಷ್ಟವೆಂದು ಭಾವಿಸಿದ್ದೇನೆ ಎಂದರು.
ನಿಮ್ಮ ಸಂಘವು ಶಿಸ್ತು ಬದ್ದತೆಯಿಂದ ಕಾರ್ಯನಿರ್ವಾಹಣೆ, ಸಂಘದ ಕಟ್ಟಡ ನಿರ್ಮಾಣ, ಸೌಲಭ್ಯಗಳು ಮತ್ತು ವಿನ್ಯಾಸವು ಅತ್ಯುತ್ತಮವಾಗಿದೆ. ನಾನು ಬೇರೆ ಯಾವ ಜಿಲ್ಲೆಯಲ್ಲೂ ಈ ಮಾದರಿಯ ಸಂಘವನ್ನು ಕಂಡಿಲ್ಲ. ನಿಮ್ಮ ಜಿಲ್ಲೆಯ ಮಣ್ಣಿನ ಮಗ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿದ್ದು ಉತ್ತಮ ಸೇವೆಯನ್ನು ಸಲ್ಲಿಸುವ ಕಾಳಜಿಯನ್ನು ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಉಕೇಶ್ ಕುಮಾರ್ ಮಾತನಾಡಿ, ನಿಮ್ಮ ಸಂಘವನ್ನು ರಾಜ್ಯದಲ್ಲಿ ಮಾದರಿಯಾಗಿ ಬೆಳೆಸಿರುವ ಹಿಂದೆ ಅಪಾರ ಶ್ರಮ ಇರುತ್ತದೆ. ಅದೇ ರೀತಿ ಸಂಘದ ಧ್ಯೇಯೋದ್ದೇಶಗಳು ಸಮಾಜಿಕ ಸೇವೆಯ ಪರವಾಗಿ ಕಾರ್ಯನಿರ್ವಹಿಸುವುದು ಆಡಳಿತದ ಪ್ರಮುಖ ಗುರಿಯಾಗಿರುತ್ತದೆ ಎಂದರು.
ಯಾವೂದೇ ಕಾರ್ಯವನ್ನು ಒಂದು ಸವಾಲ್ ಅಗಿ ಸ್ವೀಕರಿಸಿ ಪ್ರಮಾಣಿಕವಾಗಿ ಪ್ರಯತ್ನ ಮುಂದುವರೆಸಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಕಾರ್ಯಾಂಗ ಮತ್ತು ಪತ್ರಿಕಾರಂಗವು ಪರಸ್ಪರ ಹೊಂದಾಣಿಕೆ, ಸಹಕಾರದಿಂದ ಕಾರ್ಯನಿರ್ವಾಹಿಸಿದಾಗ ಉತ್ತಮವಾದ ಪ್ರಗತಿಯನ್ನು ಸಾಧಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಮಾತನಾಡಿ, ಪೊಲೀಸ್ ಇಲಾಖೆಯ ಆಡಳಿತವು ವಜ್ರದಷ್ಟು ಕಠಿಣ ಮತ್ತು ಬೆಣ್ಣೆಯಷ್ಟು ಮೃದು ಧೋರಣೆ ಹೊಂದಿರುತ್ತದೆ. ಪ್ರಭಾವಿತ ಸ್ಥಿತಿವಂತರ ಬಗ್ಗೆ ಕಠಿಣ, ಬಡ ಮುಗ್ಧ ಜನತೆ ಬಗ್ಗೆ ಬೆಣ್ಣೆಯಂತ ಮೃದು ಧೋರಣೆಯಿಂದ ವರ್ತಿಸುತ್ತದೆ ಎಂದರು.
ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಕೋಲಾರ ನನ್ನ ತವರು ಆಗಿದ್ದು ಹೆಚ್ಚಿನ ಸೇವೆ ಸಲ್ಲಿಸಬೇಕೆಂಬ ಕಾಳಜಿಯನ್ನು ಹೊಂದಿದ್ದೇನೆ. ನಮ್ಮ ಜನ ಮಾತಿನಲ್ಲಿ ನಿಷ್ಟೂರದ ಒರಟು ಸ್ವಾಭಾವವಾದರೂ ಬೆಣ್ಣೆಯಂತ ಮೃಧು ಮನಸ್ಸಿನವರಾಗಿದ್ದಾರೆ. ಬೇರೆ ಕಡೆ ಜನತೆಯ ನುಡಿ ಮತ್ತು ನಡೆಯ ನಡುವೇ ಅಜಾಗಜಾಂತರ ವ್ಯತ್ಯಾಸವಿರುತ್ತದೆ. ಅದರೆ ನಮ್ಮ ಜಿಲ್ಲೆಯ ಜನತೆ ನುಡಿದಂತೆ ನಡೆಯುವವರು ಎಂದು ಅಭಿಮಾನದಿಂದ ಶ್ಲಾಘಿಸಿದರು.
ಜಿಲ್ಲಾಧಿಕಾರಿಗಳು, ಸಿ.ಇ.ಓ ಮತ್ತು ನಾನು ನಾವು ಮೂರು ಮಂದಿ ಜಿಲ್ಲೆಯ ಅಭಿವೃದ್ದಿಗೆ ಪ್ರಮಾಣಿಕವಾಗಿ ಕಾರ್ಯನಿರ್ವಹಿಸುತ್ತೇವೆ. ನಮ್ಮೊಂದಿಗೆ ನೀವು ಸಹ ಕೈ ಜೋಡಿಸಿದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಪರ್ವತದಷ್ಟು ಬದಲಾವಣೆ ಸಾಧ್ಯವಾಗದಿದ್ದರೂ ಅಲ್ಪ ಸ್ವಲ್ಪ ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ ಎಂದು ಭರವಸೆ ನೀಡಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ, ಕೋಲಾರ ಜಿಲ್ಲೆಯು ರಾಜ್ಯದಲ್ಲಿ ಪತ್ರಕರ್ತರ ಸಂಘವನ್ನು ಸ್ಥಾಪನೆ ಮಾಡಿದಂತ ಡಿ.ವಿ.ಗುಂಡಪ್ಪನವರ ತವರು ಅಗಿದೆ. ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಸಂಘವು ಇಂದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯುವಷ್ಟು ಅಭಿವೃದ್ದಿ ಪಥದತ್ತ ಸಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಸಹ ಕನಿಷ್ಠ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗಿಲ್ಲ. ಅದರೆ ವಿಭಜಿತ ಚಿಕ್ಕಬಳ್ಳಾಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿರುವುದು ಉದಾಹರಣೆಯಾಗಿದೆ. ಶಾಸಕಾಂಗ ಮತ್ತು ಕಾರ್ಯಾಂಗವು ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಾಹಿಸಿದರೆ ಮಾತ್ರ ಅಭಿವೃದ್ದಿಯನ್ನು ನಿರೀಕ್ಷಿಸಬಹುದು. ಅದರೆ ನಮ್ಮ ಜಿಲ್ಲೆಯಲ್ಲಿ ರಾಜಕೀಯದ ಜಂಜಾಟದಲ್ಲಿ ಪ್ರಮಾಣಿಕ ಅಧಿಕಾರಿಗಳಿಗೆ ಕಾರ್ಯನಿರ್ವಹಿಸಲು ಅವಕಾಶ ಕೊಡದೆ ವರ್ಗಾವಣೆಗಳು ಮಾಡುತ್ತಿರುವುದು ನಿದರ್ಶನವಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿ.ಇ.ಓ. ಮತ್ತು ಜಿಲ್ಲಾ ಎಸ್.ಪಿ.ಯವರು ನಮ್ಮ ಜಿಲ್ಲೆಗೆ ತ್ರಿಮೂರ್ತಿಗಳು ಇದ್ದು ಅಭಿವೃದ್ದಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿ ಹೊಸ ಬದಲಾವಣೆಯನ್ನು ತರಬೇಕು. ಜಿಲ್ಲಾ ಕೇಂದ್ರದಲ್ಲಿ ಕನಿಷ್ಠ ಸುಗಮ ಸಂಚಾರಕ್ಕೂ ಪರದಾಡುವಂತ ಪರಿಸ್ಥಿತಿಯನ್ನು ಕಾಣಬಹುದಾಗಿದೆ. ಒಮ್ಮೆ ನೀವು ನಗರದಲ್ಲಿ ಪಾದಯಾತ್ರೆ ಮಾಡಿದರೆ ಸಂಚಾರದ ಅವ್ಯವಸ್ಥೆಗಳ ಅರಿವುಂಟಾಗಲಿದೆ ಎಂದರು.
ಕಂದಾಯ ಇಲಾಖೆಯಲ್ಲಿ ಕಂದಾಯ ಅದಾಲತ್, ಪೋಡಿ, ಪವತಿವಾರು, ಸಾಗುವಳಿ, ಪಿ ನಂಬರ್, ಸರ್ವೆ ದುರಸ್ಥಿ, ಮುಂತಾದ ಸಣ್ಣ ಪುಟ್ಟ ಕೆಲಸಗಳಿಗೆ ಗ್ರಾಮೀಣ ರೈತರು ನಿತ್ಯ ಕಚೇರಿಗಳಿಗೆ ಅಲೆದಾಡುವಂತಾಗಿದ್ದು, ಸಕಾಲ ವ್ಯವಸ್ಥೆಯು ಹೆಸರಿಗೆ ಮಾತ್ರವಾಗಿದೆ. ರೈತರು ವರ್ಷಾನುಗಟ್ಟಲೆಯಿಂದ ಹಲವು ಚಪ್ಪಲಿಗಳು ಸವೆಸಿದರೂ ಕೆಲಸಗಳು ಮಾತ್ರ ಅಗುತ್ತಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳು ವಿಶೇಷ ಗಮನ ಹರಿಸಿ ಆಡಳಿತವನ್ನು ಚುರುಕುಗೊಳಿಸ ಬೇಕಾಗಿದೆ ಎಂದು ಸಲಹೆ ನೀಡಿದ ಅವರು ಹಿಂದಿನ ಅಧಿಕಾರಿಗಳ ಕಾರ್ಯವೈಖರಿಯನ್ನು ನೆನಪಿಸಿ ಕೊಂಡರು
ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ವಿ. ಗೋಪಿನಾಥ್ ಮಾತನಾಡಿ, ಕೋಲಾರ ರಾಜಧಾನಿಗೆ ಕೇವಲ 60 ಕಿ.ಮಿ. ಅಂತರದಲ್ಲಿದ್ದರೂ ಸಹ ಯಾವೂದೇ ರೀತಿ ಅಭಿವೃದ್ದಿ ಕಂಡಿಲ್ಲ. ಕೋಲಾರ ಜಿಲ್ಲೆಯಿಂದ ವಿಭಜಿತವಾದ ಚಿಕ್ಕಬಳ್ಳಾಪುರ ಜಿಲ್ಲೆಯು ನಿರೀಕ್ಷೆ ಮೀರಿ ಅಭಿವೃದ್ದಿ ಹೊಂದುತ್ತಿರುವುದಕ್ಕೆ ಅಲ್ಲಿನ ಜನಪ್ರತಿನಿಧಿಗಳ ಕಾಳಜಿಯೇ ಕಾರಣವಾಗಿದೆ ಎಂದರು.
ಜನಪ್ರತಿನಿಧಿಗಳ ಕಾಳಜಿ ಮತ್ತು ಅಧಿಕಾರಿಗಳ ಪ್ರಮಾಣಿಕ ಕರ್ತವ್ಯ ನಿರ್ವಾಹಣೆಯಿಂದ ಅಭಿವೃದ್ದಿಯಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದ ಅವರು ಈ ಹಿಂದಿನ ಜಿಲ್ಲಾಧಿಕಾರಿಗಳಾಗಿದ್ದ ಶಿವಾನಂದ, ಸಂಜಯ್‍ದಾಸ್ ಗುಪ್ತ, ತಂಗರಾಜ್, ತಿಮ್ಮೇಗೌಡ, ರಾಮ್ ಪ್ರಸಾದ್, ರೇಣುಕ ಚಿದಂಬರಂ, ಡಿ.ಕೆ. ರವಿ. ತ್ರಿಲೋಕಚಂದ್ರ, ಮನೋಜ್ ಕುಮಾರ್ ಮೀನಾ, ವಿಶ್ವನಾಥ್, ಸೇರಿದಂತೆ ಪೊಲೀಸ್ ಇಲಾಖೆಯಲ್ಲಿ ಹರಿಕೃಷ್ಣ, ದೊರೆಸ್ವಾಮಿ ನಾಯಕ್, ಸೇರಿದಂತೆ ಹಲವಾರು ಅಧಿಕಾರಿಗಳ ಅಡಳಿತದಲ್ಲಿನ ಕಾರ್ಯವೈಖರಿಯನ್ನು ಬಣ್ಣಿಸಿದರು.
ಅಧಿಕಾರಿಗಳ ಖಡಕ್ ಅಡಳಿತದಿಂದ ಜನಪ್ರತಿನಿಧಿಗಳ ಜವಾಬ್ದಾರಿಯನ್ನು ಚುರುಕುಗೊಳಿಸಲು ಸಾಧ್ಯವಿದೆ. ಇದಕ್ಕೆ ಪೂರಕವಾಗಿ ಪತ್ರಕರ್ತರ ಸಂಘವು ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ನಡೆಸಿದ ಸಂವಾದದಲ್ಲಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರಿನಿಂದ ತುಂಬಿಸಲಾಗಿದೆ. ಇಲ್ಲಿನ ಬೋರ್‍ಗಳಿಂದ ನಗರದ ಜನತೆಗೆ ನೀರು ಪೂರೈಸುತ್ತಿದ್ದು ಅನಾರೋಗ್ಯದ ಭೀತಿಯನ್ನು ವ್ಯಕ್ತಪಡಿಸಿ ಪರ್ಯಾಯ ಕ್ರಮಕ್ಕೆ ಮನವಿ ಮಾಡಲಾಯಿತು.
ಉನ್ನತ ಶಿಕ್ಷಣದ ಪರೀಕ್ಷೆಗಳಿಗೆ ಅಗತ್ಯವಾದ ತರಭೇತಿಯನ್ನು ರಂಗ ಮಂದಿರದಲ್ಲಿ ನೀಡಲಾಗುತ್ತಿತ್ತು ಅದನ್ನು ಮತ್ತೆ ಮುಂದುವರೆಸುವಂತಾಗಬೇಕು. ಪ್ರತಿ ಇಲಾಖೆಯ ಸೇವಾ ಸೌಲಭ್ಯಗಳ ಯೋಜನೆಗಳ ಅರಿವು ಸಾರ್ವಜನಿಕರಿಗೆ ನೀಡಬೇಕಾಗಿದೆ. ಸಕಾಲ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠನಕ್ಕೆ ತರಬೇಕು. ರಸ್ತೆಗಳ ವಿಸ್ತರಣೆ ಕಾರ್ಯಕ್ರಮವನ್ನು ಕೈಗೆತ್ತಿ ಕೊಳ್ಳಬೇಕು. ವಿವಿಧಡೆ ರಸ್ತೆಗಳ ಒತ್ತುವರಿ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಬೇಕು. ಕೈಗಾರಿಕಾ ಪ್ರದೇಶಗಳಲ್ಲಿ ಕೆಲ ಸಂಘಟನೆಗಳ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡುತ್ತಿರುವುದರಿಂದ ಕೈಗಾರಿಕೆಗಳು ಬರಲು ಹಿಂಜರಿಯುತ್ತಿದ್ದು ನಿರುದ್ಯೋಗ ಸಮಸ್ಯೆಗಳಿಗೆ ಕಾರಣವಾಗಿದೆ ಎಂಬ ಮಾಹಿತಿಯನ್ನು ತಿಳಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟರಾಜು, ಸಿ.ಇ.ಓ. ಉಕೇಶ್ ಕುಮಾರ್ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ದೇವರಾಜ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಕಾರ್ಯದರ್ಶಿ ಕೆ.ಎಸ್ ಚಂದ್ರಶೇಖರ್ ನಿರೂಪಿಸಿ, ಎ.ಜಿ. ಸುರೇಶ್ ಸ್ವಾಗತಿಸಿದರು.

ಬಾಕ್ಸ್ ;- ಜಿಲ್ಲೆಯಲ್ಲಿ ಅಕ್ರಮ ಜೂಜಾಟ, ಗಾಂಜಾ, ಮಟ್ಕದಂಧೆ, ರಸ್ತೆಗಳಲ್ಲಿ ವೀಲಿಂಗ್, ಇತ್ಯಾದಿ ಅಕ್ರಮ ಚಟುವಟಿಕೆಗಳ ವಿರುದ್ದ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಪತ್ರಕರ್ತರು ತಮಗೆ ಬಂದ ಖಚಿತವಾದ ಮಾಹಿತಿಯನ್ನು ನೀಡುವ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡಲು ಕೈ ಜೋಡಿಸುವಂತಾಗಬೇಕೆಂದು ಎಸ್.ಪಿ. ದೇವರಾಜ್ ಮನವಿ ಮಾಡಿದರು.